ತುಮಕೂರು- ತಾಲ್ಲೂಕಿನ ಊರುಕೆರೆಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಹರ್ಷಿಣಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 601 ಅಂಕ ಗಳಿಸುವ ಮೂಲಕ ಉತ್ತಮ ಫಲಿತಾಂಶ ಪಡೆದಿದ್ದಾರೆ.
ಊರುಕೆರೆ ಸರ್ಕಾರಿ ಪ್ರೌಢಶಾಲೆಗೆ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 65 ಫಲಿತಾಂಶ ಬಂದಿದ್ದು, ವಿದ್ಯಾರ್ಥಿನಿ ಹರ್ಷಿಣಿ ಅವರು 625ಕ್ಕೆ 601 ಅಂಕ ಗಳಿಸುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.
ಕಳೆದ 41 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಈ ಶಾಲೆಯ ವಿದ್ಯಾರ್ಥಿನಿ 601 ಅಂಕ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ ಎಂದು ಶಾಲೆಯ ಮುಖ್ಯೋಪಾಧ್ಯಾಯರಾದ ಪಿ. ಮಂಜುನಾಥ್ ತಿಳಿಸಿದ್ದಾರೆ.
ತಾಲ್ಲೂಕಿನ ಹೆಬ್ಬಾಕ ಗ್ರಾಮದ ಗಂಗಾಧರಯ್ಯ ಮತ್ತು ಶೋಭಾ ದಂಪತಿಯ ಪುತ್ರಿಯಾಗಿರುವ ವಿದ್ಯಾರ್ಥಿನಿ ಹರ್ಷಿಣಿ ಅವರು ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮಾಡಿ ವೃತ್ತಿಯಲ್ಲಿ ಬದುಕಿನಲ್ಲಿ ವೈದ್ಯಳಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.
ಗ್ರಾಮೀಣ ಭಾಗದ ಶಾಲೆಯಲ್ಲಿ ಪರಿಶ್ರಮದಿಂದ ಓದಿ ಉತ್ತಮ ಅಂಕಗಳಿಸಲು ಅವಕಾಶ ಇದೆ. ಏಕ್ರಾಗತೆಯಿಂದ ಓದಿನ ಕಡೆ ಗಮನಹರಿಸಿದರೆ ಉತ್ತಮ ಸಾಧನೆ ಕಷ್ಟವಾಗುವುದಿಲ್ಲ ಎಂದು ವಿದ್ಯಾರ್ಥಿನಿ ಹರ್ಷಿಣಿ ಹೇಳಿದ್ದಾರೆ.