ತುಮಕೂರು : ಚುನಾಯಿತ ಗ್ರಾಮ ಪಂಚಾಯತಿಗಳ ಅನಕ್ಷರಸ್ಥ ಪ್ರತಿನಿಧಿಗಳನ್ನು ಓದು, ಬರಹ ಮತ್ತು ಲೆಕ್ಕಾಚಾರಗಳಲ್ಲಿ ಕ್ರಿಯಾತ್ಮಕ ಸಾಕ್ಷರಸ್ಥರನ್ನಾಗಿಸುವ ಉದ್ದೇಶದಿಂದ ಸರ್ಕಾರವು ಜಾರಿಗೆ ತಂದಿರುವ ಸಾಕ್ಷಾರ ಸನ್ಮಾನ ತರಬೇತಿ ಕಾರ್ಯಗಾರದ ಸದುಪಯೋಗವನ್ನು ಚುನಾಯಿತ ಪ್ರತಿನಿಧಿಗಳು ಪಡೆದುಕೊಳ್ಳಬೇಕೆಂದು ತುಮಕೂರು ತಾಲ್ಲೂಕು ಪಂಚಾಯತಿ ಯೋಜನಾಧಿಕಾರಿ ಬಿ.ಲೋಕೋಶ್ ಕುಮಾರ್ ತಿಳಿಸಿದರು.
ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ವತಿಯಿಂದ ಗ್ರಾಮ ಪಂಚಾಯಿತಿ ಚುನಾಯಿತ ಅನಕ್ಷರಸ್ಥ ಪ್ರತಿನಿಧಿಗಳಿಗೆ ಸಾಕ್ಷರತಾ ಕೌಶಲ್ಯಗಳನ್ನು ನೀಡುವ ಸಾಕ್ಷರ ಸನ್ಮಾನ ತರಬೇತಿದಾರರಿಗಾಗಿ ನಗರದ ತಾಲ್ಲೂಕು ಪಂಚಾಯಿತಿ ಸಾಮಥ್ರ್ಯ ಸೌಧದಲ್ಲಿಂದು ಹಮ್ಮಿಕೊಂಡಿದ್ದ ತರಬೇತಿ ಕಾರ್ಯಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೋಧಕರು ಮತ್ತು ಅರಿವು ಕೇಂದ್ರದ ಮೇಲ್ವಿಚಾರಕರು ತರಬೇತಿ ಕಾರ್ಯಗಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರಲ್ಲದೆ, ಚುನಾಯಿತ ಪ್ರತಿನಿಧಿಗಳು ಗ್ರಾಮ ಸಭೆ, ವಾರ್ಡ್ ಸಭೆಗಳಲ್ಲಿ ಕ್ರಿಯಾತ್ಮಕವಾಗಿ ಭಾಗವಹಿಸಿ ತಮ್ಮ ವಾರ್ಡ್‍ಗಳ ಅಭಿವೃದ್ಧಿಗೆ ಶ್ರಮಿಸುವಂತೆ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾಕ್ಷರ ಸಂದೇಶ ಪುಸ್ತಕ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಮೈಸೂರಿನ ಎಸ್‍ಐಆರ್‍ಡಿ ಸಂಸ್ಥೆ ಸಂಪನ್ಮೂಲ ವ್ಯಕ್ತಿ ಕೆ.ಎಸ್.ರಾಘವೇಂದ್ರ, ಅನಂತಕುಮಾರ್, ಜಿಲ್ಲಾ ಪಂಚಾಯತ್ ಕಾರ್ಯಕ್ರಮ ಅಧಿಕಾರಿ(ಲೋಕ ಶಿಕ್ಷಣ) ಲಕ್ಷ್ಮಿ ಕೃಷ್ಣಕುಮಾರ್ ಮತ್ತು ತರಬೇತಿದಾರರು ಉಪಸ್ಥಿತರಿದ್ದರು.