ತುಮಕೂರು : ದೇಶದ ಮಾಜಿ ಉಪಪ್ರಧಾನಿ, ಹಸಿರು ಕ್ರಾಂತಿ ಹರಿಕಾರ ಡಾ|| ಬಾಬು ಜಗಜೀವನ ರಾಮ್ ಅವರ ತತ್ವಾದರ್ಶಗಳು ಇಂದಿಗೂ ನಮಗೆಲ್ಲ ಮಾದರಿಯಾಗಿವೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಡಾ|| ಬಾಬು ಜಗಜೀವನ ರಾಮ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಜಗಜೀವನ್ ರಾಮ್ ಅವರ ಆದರ್ಶಗಳನ್ನು ನಾವೆಲ್ಲ ಸದಾ ಕಾಲ ಪಾಲಿಸಬೇಕು. ಬಾಬೂಜಿಯವರು ಮೇಲು–ಕೀಳೆಂಬ ತಾರತಮ್ಯ, ಜಾತಿ ಪದ್ಧತಿ, ಅಸ್ಪøಶ್ಯತೆಯನ್ನು ತೊಡೆದು ಹಾಕಲು ಶ್ರಮಿಸುವ ಮೂಲಕ ಸಾಮಾಜಿಕ ಬದಲಾವಣೆಗಾಗಿ ಹೋರಾಡಿದವರು. ಶೋಷಿತರ ಪರವಾಗಿ ದನಿ ಎತ್ತಿದ ಅವರ ಚಿಂತನೆಗಳನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಸ್ವಾತಂತ್ರ್ಯಾ ನಂತರ ಭಾರತ ದೇಶದಲ್ಲಿ ಎದುರಾಗಿದ್ದ ಆರ್ಥಿಕ ಮುಗ್ಗಟ್ಟು, ಬರಪರಿಸ್ಥಿತಿ ಸೇರಿದಂತೆ ಹಲವಾರು ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ಸ್ವದೇಶದಲ್ಲಿಯೇ ಆಹಾರ ಉತ್ಪಾದಿಸಲು ಅವರು ರೂಪಿಸಿದ ಹಸಿರು ಕ್ರಾಂತಿ ಬಡವರ ಹಸಿವನ್ನು ನೀಗಿಸಿತು ಎಂದು ಬಾಬೂಜಿಯವರ ಮಾನವೀಯ ಕಾಳಜಿ, ಹೋರಾಟ, ಸಾಧನೆಗಳ ಬಗ್ಗೆ ಬಣ್ಣನೆಯ ಮಾತುಗಳನ್ನಾಡಿದರು.
ಬಡತನದಲ್ಲಿ ಹುಟ್ಟಿದ ಜಗಜೀವನ ರಾಮ್ ಅವರು ತಮ್ಮ ಪ್ರತಿಭೆಯಿಂದ ಕೇಂದ್ರ ಸಚಿವರಾಗಿ ಕಾರ್ಮಿಕ, ರೈಲ್ವೆ, ಕೃಷಿ ಸೇರಿ ಹಲವಾರು ಖಾತೆಗಳನ್ನು ನಿರ್ವಹಿಸಿ ಬಡವರು, ಶೋಷಿತರು, ನಿರ್ಗತಿಕರ ಅಭಿವೃದ್ಧಿಗಾಗಿ ಕಾನೂನು ರೂಪಿಸಿ ಬಡವರ ಪಾಲಿಗೆ ದೇವರಾಗಿದ್ದರು ಎಂದರಲ್ಲದೆ ಬಾಬೂಜಿಯವರು ಕಂಡ “ಬಡತನ ಮುಕ್ತ ದೇಶದ ಕನಸ”ನ್ನು ನನಸು ಮಾಡಲು ನಾವೆಲ್ಲ ಮುಂದಾಗಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಪ್ರಭು ಮಾತನಾಡಿ ದೇಶದ ಬೃಹತ್ ಪ್ರಜಾಪ್ರಭುತ್ವದಲ್ಲಿ ಒಂದು ಬಾರಿಯೂ ಸೋಲನ್ನು ಕಾಣದ ಜಗಜೀವನ ರಾಮ್ ಅವರು ತಮ್ಮ ಸುದೀರ್ಘ ಅಧಿಕಾರವಧಿಯಲ್ಲಿ ಮಾಡಿದ ಸಾಧನೆಗಳು ಅವಿಸ್ಮರಣೀಯವಾದುದು ಎಂದರು.
ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಾಬು ಜಗಜೀವನ್ ರಾಮ್ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿವಿಧ ದಲಿತ ಪರ ಸಂಘಟನೆಗಳ ಮುಖಂಡರು ಆಕ್ಷೇಪಣೆ ವ್ಯಕ್ತಪಡಿಸಿದಾಗ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ಪ್ರತಿಕ್ರಿಯಿಸಿ ಕಟ್ಟಡ ನಿರ್ಮಿಸಲು ನಿವೇಶನದ ಸಮಸ್ಯೆ ಎದುರಾಗಿದ್ದು, ಕಾನೂನು ಹೋರಾಟ ನಡೆಸಲಾಗುತ್ತಿದೆ. ನ್ಯಾಯಾಲಯಕ್ಕೆ ಸಮಗ್ರ ವರದಿ ನೀಡಿ ಇತ್ಯರ್ಥಕ್ಕೆ ಕ್ರಮ ಕೈಗೊಂಡು ಕಟ್ಟಡ ನಿರ್ಮಾಣವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ, ತಹಶೀಲ್ದಾರ್ ಸಿದ್ದೇಶ್, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ದಿನೇಶ್, ದಲಿತ ಮುಖಂಡರು, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.