ಜಿಎಸ್‍ಟಿ ದರ ಇಳಿಕೆ: ಗುಲಾಬಿ ಹೂ ಕೊಟ್ಟು ಹೊಸ ತೆರಿಗೆ ಬಗ್ಗೆ ಸಾರ್ವಜನಿಕ ಪ್ರಚಾರ ಮಾಡಿದ ವಿ.ಸೋಮಣ್ಣ

ತುಮಕೂರು: ಕೇಂದ್ರ ಸರ್ಕಾರದ ಜಿಎಸ್‍ಟಿ ಸುಧಾರಣೆ ನಿರ್ಧಾರವು ಭಾರತದ ಹಿತದೃಷ್ಟಿಯಿಂದ ನಿರಂತರ ಸುಧಾರಣೆಗಳಿಗಾಗಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರದ ಸಕ್ರಿಯ ಬದ್ಧತೆಯನ್ನು ತೋರಿಸುತ್ತದೆ. ಸೋಮವಾರದಿಂದ ದೇಶಾದ್ಯಂತ ಜಾರಿಯಾಗಿರುವ ಹೊಸ ಜಿಎಸ್‍ಟಿ ಪದ್ದತಿಯಿಂದ ಜನಸಾಮಾನ್ಯರಿಗೆ ಬಹಳಷ್ಟು ಸಹಾಯವಾಗಿದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ಸುಧಾರಿತ ಜಿಎಸ್‍ಟಿ ಜಾರಿಯಾಗಿರುವ ಹಿನ್ನೆಲೆಯಲ್ಲಿ ಸೋಮವಾರ ಸಚಿವ ಸೋಮಣ್ಣ ನಗರದ ವಿವಿಧೆಡೆ ಜಿಎಸ್‍ಟಿ ಸುಧಾರಣೆಗಳ ಪ್ರಚಾರ ಅಭಿಯಾನ ನಡೆಸಿ ಸಾರ್ವಜನಿಕರನ್ನು ಭೇಟಿ ಮಾಡಿ ಗುಲಾಬಿ ಹೂ ಕೊಟ್ಟು, ಹೊಸ ತೆರಿಗೆ ಪದ್ದತಿಯ ಪ್ರಯೋಜನಗಳನ್ನು ಮನವರಿಕೆ ಮಾಡಿಕೊಟ್ಟರು. ತರಕಾರಿ ಮಾರುಕಟ್ಟೆ, ನಂದಿನಿ ಸ್ಟಾಲ್, ಹಣ್ಣಿನ ಅಂಗಡಿ, ಕಿರು ಆಹಾರ ಮಳಿಗೆ ಮತ್ತಿತರ ಕಡೆ ತೆರಳಿ ವ್ಯಾಪಾರಿಗಳು, ಸಾರ್ವಜನಿಕರಿಗೆ ಜಿಎಸ್‍ಟಿ ದರ ಇಳಿಕೆ ಹಾಗೂ ಅದರ ಉಪಯೋಗಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಜಿಎಸ್‍ಟಿ ದರ ಇಳಿಕೆ ಮಾಡುವ ಮೂಲಕ ಪ್ರಧಾನಿ ಮೋದಿಯವರು ದೇಶದ ಜನರಿಗೆ ದಸರಾ ಹಾಗೂ ದೀಪಾವಳಿಯ ಸಂಭ್ರಮದ ಕೊಡುಗೆ ಕೊಟ್ಟಿದ್ದಾರೆ. ಜಿಎಸ್‍ಟಿಯಲ್ಲಿ ಈ ಮೊದಲಿದ್ದ ನಾಲ್ಕು ಸ್ಲ್ಯಾಬ್‍ಗಳನ್ನು ಎರಡು ಸ್ಲ್ಯಾಬ್‍ಗಳಿಗೆ ಇಳಿಸಿ ಅಗತ್ಯ ವಸ್ತುಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿ ದೇಶದ ಬಡವರು ಮತ್ತು ಮಧ್ಯಮ ವರ್ಗದವರ ಸುಗಮ ಜೀವನಕ್ಕೆ ಹಾಗೂ ಅವರ ಉಳಿತಾಯಕ್ಕೆ ಶಕ್ತಿ ತುಂಬಲಾಗಿದೆ ಎಂದು ಸಚಿವ ಸೋಮಣ್ಣ ಹೇಳಿದರು.

ಜಿಎಸ್‍ಟಿ ತೆರಿಗೆ ಇಳಿಕೆ ಮಾಡುವ ಮೂಲಕ ದೇಶದ ಆರ್ಥಿಕತೆಗೆ ನವ ಚೈತನ್ಯ ಒದಗಿಸಿದ, ಬೂಸ್ಟರ್ ಡೋಸ್ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿವರು ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸಮಸ್ತ ಜನರ ಪರವಾಗಿ ಅಭಿನಂದನೆಗಳು ಎಂದು ಹೇಳಿದರು.

ಸಚಿವ ಸೋಮಣ್ಣನವರ ಪ್ರಚಾರ ಅಭಿಯಾನದಲ್ಲಿ ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಬ್ಯಾಟರಂಗೇಗೌಡ, ರುದ್ರೇಶ್, ಹಕ್ಕುತ್ತಾಯ ಬಸವರಾಜು, ಬಿ.ಬಿ.ಮಹದೇವಯ್ಯ, ತರಕಾರಿ ಮಹೇಶ್, ಸಂತೋಷ್, ರೈಲ್ವೆ ಮಂಡಳಿ ನಿರ್ದೇಶಕರಾದ ಧನಿಯಾಕುಮಾರ್, ಮಲ್ಲಸಂದ್ರ ಶಿವಣ್ಣ, ಡಿ.ಎಂ.ಸತೀಶ್, ಲಕ್ಷ್ಮೀನಾರಾಯಣ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *