ತುಮಕೂರು : ಗುಬ್ಬಿ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿ 5ನೇ ಬಾರಿ ಆಯ್ಕೆಯಾಗುವ ಮೂಲಕ ಎಸ್.ಆರ್. ಶ್ರೀನಿವಾಸ್ (ವಾಸಣ್ಣ) ಅವರು ಗೆಲುವಿನ ಇತಿಹಾಸ ಬರೆದು ಸೋಲಿಲ್ಲದ ಸರದಾರ ಎಂಬ ಪಟ್ಟವನ್ನು ಪಡೆದಿದ್ದಾರೆ.
2004ರಿಂದ 2018 ವರೆಗೆ ಅವರು ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಶಾಸಕರಾಗಿ ಆಯ್ಕೆಯಾಗಿದ್ದರು, ಜೆಡಿಎಸ್‍ನ ರಾಜಕೀಯ ವಿದ್ಯಾಮಾನಗಳಿಗೆ ಬೇಸತ್ತು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡು ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು.
ಜೆಡಿಎಸ್ ಪಕ್ಷ ತೊರೆದಿರುವುದರಿಂದ ಮತ್ತು ಜೆಡಿಎಸ್ ನಾಯಕರನ್ನು ಬೈಯ್ದಿರುವುದರಿಂದ, ಕ್ಷೇತ್ರವನ್ನು ಅಭಿವೃದ್ಧಿ ಮಾಡಿಲ್ಲದಿರುವುದರಿಂದ ಈ ಬಾರಿ ಎಸ್.ಆರ್.ಶ್ರೀನಿವಾಸ್(ವಾಸಣ್ಣ) ಸೋಲುತ್ತಾರೆ ಎಂದು ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಲೆಕ್ಕಚಾರ ಉಲ್ಟಾ ಆಗಿದೆ.
ಒಂದು ವರ್ಷದ ಹಿಂದೆಯೇ ಎಸ್.ಆರ್.ಶ್ರೀನಿವಾಸ್(ವಾಸಣ್ಣ) ವಿರುದ್ಧವಾಗಿ ಸಿ.ಎಸ್.ಪುರದ ಬಿ.ಎಸ್.ನಾಗರಾಜು ಅವರನ್ನು ಜೆಡಿಎಸ್ ಪಕ್ಷದ ಅಭ್ಯರ್ಥಿ ಎಂದು ಘೋಷಿಸಲಾಗಿತ್ತು.
ಇದಲ್ಲದೆ ಗುಬ್ಬಿ ಕ್ಷೇತ್ರದಲ್ಲಿ ಮೂಲ ಕಾಂಗ್ರೆಸ್‍ಗರಿಂದ ಎಸ್.ಆರ್.ಶ್ರೀನಿವಾಸ್(ವಾಸಣ್ಣ) ಅವರು ಕಾಂಗ್ರೆಸ್ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಇವರ ಸೇರ್ಪಡೆಯನ್ನು ವಿರೋಧಿಸಿ ಕಾಂಗ್ರೆಸ್‍ನ ಹೊನ್ನಗಿರಿಗೌಡರು ಜೆಡಿಎಸ್ ಪಕ್ಷವನ್ನು ಸೇರಿದ್ದರು, ಇದಲ್ಲದೆ ಗೊಲ್ಲ ಸಮುದಾಯದ ಜಿ.ಎನ್.ಬೆಟ್ಟಸ್ವಾಮಿ ಅವರಿಗೆ ಬಿಜೆಪಿ ಪಕ್ಷದಿಂದ ಟಿಕೆಟ್ ದೊರೆಯದ ಕಾರಣ ಜೆಡಿಎಸ್‍ಗೆ ಸೇರ್ಪಡೆಯಿಂದ ಗೊಲ್ಲರ ಮತಗಳು ಜೆಡಿಎಸ್‍ಗೆ ಅನುಕೂಲವಾಗಿ ಕಾಂಗ್ರೆಸ್ ಅಭ್ಯರ್ಥಿ ಸೋಲ ಬಹುದು ಎಂಬುದನ್ನು ಹುಸಿಗೊಳಿಸಲಾಗಿದೆ.
ಬಿಜೆಪಿಯ ಅಭ್ಯರ್ಥಿ ಎಸ್.ಡಿ.ದಿಲೀಪ್‍ಕುಮಾರ್ ಲಿಂಗಾಯಿತರ ಓಟುಗಳ ಜೊತೆಗೆ ಬಿಜೆಪಿಗೆ ಗೊಲ್ಲರ ಮತಗಳು ಹಾಗೂ ಒಳ ಮೀಸಲಾತಿ ಜಾರಿಗೊಳಿಸಿರುವುದರಿಂದ ದಲಿತ ಮತಗಳು ಕೈ ಹಿಡಿದು ಎಸ್.ಆರ್.ಶ್ರೀನಿವಾಸ್ ಅವರನ್ನು ಪರಾಭವಗೊಳಿಸಲಾಗುವುದು ಎಂಬುದೂ ಸಹ ಹುಸಿಯಾಗಿದೆ.
ಎಸ್.ಆರ್.ಶ್ರೀನಿವಾಸ್(ವಾಸಣ್ಣ) ಅವರು ಚುನಾವಣಾ ತಂತ್ರಗಳನ್ನು ಎಣೆಯುವುದರಲ್ಲಿ ನಿಪುಣರು ಎಂಬುದನ್ನು 5ನೇ ಬಾರಿ ಆಯ್ಕೆಯಾಗುವ ಮೂಲಕ ತೋರಿಸಿದ್ದಾರೆ.
ಎಸ್.ಆರ್.ಶ್ರೀನಿವಾಸ್(ವಾಸಣ್ಣ) ಅವರು 5ನೇ ಬಾರಿ ಗೆಲುವು ಸಾಧಿಸಿ ಸೋಲಿಲ್ಲದ ಸರದಾರ ಎಂಬ ಬಿರುದಿಗೆ ಕಾರಣವಾಗಿದ್ದಾರೆ.
ಎಸ್.ಆರ್.ಶ್ರೀನಿವಾಸ್(ವಾಸಣ್ಣ) ಅವರು ಕಾಂಗ್ರೆಸ್‍ಗೆ ಬಂದಿದ್ದರಿಂದ ಆ ಪಕ್ಷಕ್ಕೆ ಜಿಲ್ಲೆಯಲ್ಲಿ ಒಂದು ಸ್ಥಾನ ಹೆಚ್ಚು ಪಡೆಯುವಲ್ಲಿ ಯಶಸ್ವಿಯಾಗಿದೆ.
ಈಗ ಎಸ್.ಆರ್.ಶ್ರೀನಿವಾಸ್(ವಾಸಣ್ಣ)ರವರ ಅಭಿಮಾನಿಗಳ ಮುಂದೆ ಇರುವುದು ಅವರು ಮಂತ್ರಿಯಾಗುತ್ತಾರ ಎಂಬ ಪ್ರಶ್ನೆಯಷ್ಟೆ, ಯಾಕೆಂದರೆ ಮಾಜಿ ಉಪಮುಖ್ಯಮಂತ್ರಿ , ಶಾಸಕ ಡಾ.ಜಿ.ಪರಮೇಶ್ವರ್,(ಮುಖ್ಯಮಂತ್ರಿ ಸ್ಥಾನದ ಅಕಾಂಕ್ಷಿ) ಮಾಜಿ ಸಚಿವ, ಶಾಸಕ ಟಿ.ಬಿ.ಜಯಚಂದ್ರ, ಮಧುಗಿರಿ ಶಾಸಕರಾದ ಕೆ.ಎನ್.ರಾಜಣ್ಣ, ಮತ್ತು ತಿಪಟೂರು ಶಾಸಕರಾದ ಕೆ.ಷಡಕ್ಷರಿ ಅವರುಗಳು ಮಂತ್ರಿ ಸ್ಥಾನದ ಅಕಾಂಕ್ಷಿಗಳಾಗಿದ್ದಾರೆ.