ಸಂವಿಧಾನ  ಪೀಠಿಕೆ  ಓದುವುದರ ಮೂಲಕ ಅತಿಥಿ ಉಪನ್ಯಾಸಕರ ಪ್ರತಿಭಟನೆ

ತುಮಕೂರು- ಸಂವಿಧಾನ ಪೀಠಿಕೆ ಓದುವುದರ ಮೂಲಕ ಸಂವಿಧಾನ ಬದ್ಧವಾದ ನಮ್ಮ ಹಕ್ಕನ್ನು ನಾವು ಕೇಳುತ್ತಿದ್ದೇವೆ, ನಮ್ಮ ಸೇವೆಯನ್ನು ಖಾಯಮಾತಿ ಮಾಡಿ ಎಂದು ಒತ್ತಾಯಿಸಿ ಅತಿಥಿ ಉಪನ್ಯಾಸಕರು ವಿಶೇಷವಾಗಿ ಪ್ರತಿಭಟಿಸಿದರು.

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು 29ನೇ ದಿನವು ಪ್ರತಿಭಟನೆಯನ್ನು ಮುಂದುವರಿಸಿ ಸಂವಿಧಾನ ಪೀಠಿಕೆಯನ್ನು ಓದುವುದರ ಮುಖಾಂತರ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಡಾ. ಧರ್ಮವೀರ ಕೆ.ಎಚ್., ನ್ಯಾಯ ಸಮ್ಮತವಾದ ನಮ್ಮ ಬೇಡಿಕೆಯನ್ನು ಸರ್ಕಾರ ಬಹಳ ವರ್ಷಗಳಿಂದ ಸಂವಿಧಾನಾತ್ಮಕ ಹಕ್ಕನ್ನು ನೀಡದೆ ನಮ್ಮನ್ನು ಶೋಷಣೆ ಮಾಡುತ್ತಿದೆ. ಸೇವೆ ಖಾಯಮಾತಿ ಅತಿಥಿ ಉಪನ್ಯಾಸಕರ ಹಕ್ಕಾಗಿದ್ದು, ಸರ್ಕಾರ ಕೂಡಲೇ ಖಾಯಮಾತಿಯನ್ನು ಮಾಡಬೇಕು ಎಂದು ಒತ್ತಾಯಿಸಿದರು.

ಉನ್ನತ ಶಿಕ್ಷಣ ಸಚಿವರಾದ ಸುಧಾಕರ್ ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಬಡವರಿದ್ದಾರೆ ಎಂದು ಹೇಳುತ್ತಾರೆ. ಅತಿಥಿ ಉಪನ್ಯಾಸಕರಾದ ನಾವುಗಳು ಬಡವರಲ್ಲವೇ? ನಮ್ಮ ಜೀವನ ನಿರ್ವಹಣೆ, ನಮ್ಮ ಕುಟುಂಬ ಜವಾಬ್ದಾರಿ, ನಮ್ಮ ಮಕ್ಕಳ ಜವಾಬ್ದಾರಿ ಹೀಗೆ ನಾವು ಬಡತನದಲ್ಲಿ ಇದ್ದೇವೆ ಎಂಬುವುದನ್ನು ಸಚಿವರು ಗಮನಿಸಬೇಕು. ವಿದ್ಯಾರ್ಥಿಗಳಿಗೆ ನಮ್ಮಿಂದ ಅನ್ಯಾಯ ಆಗುತ್ತಿದ್ದರೆ ಅದನ್ನು ನಾವು ಸರಿಪಡಿಸುತ್ತೇವೆ. ನಮಗೆ ಆಗುತ್ತಿರುವ ಅನ್ಯಾಯವನ್ನು ಸರ್ಕಾರ ಸರಿಪಡಿಸಲಿ, ನಮಗೆ ನ್ಯಾಯ ದೊರಕಿಸಿಕೊಟ್ಟಲ್ಲಿ ನಾವು ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿ ಕೊಡುತ್ತೇವೆ. ನಮ್ಮ ಜೀವನವನ್ನೇ ಅಧೋಗತಿ ಸ್ಥಿತಿಯಲ್ಲಿಟ್ಟುಕೊಂಡು ವಿದ್ಯಾರ್ಥಿಗಳ ಜೀವನವನ್ನು ರೂಪಿಸಿ ಎಂದು ಹೇಳುವುದು ಸರ್ಕಾರದ ನಡೆ ಎಷ್ಟು ಸರಿ ಎಂದು ಪ್ರಶ್ನಿಸಿದರು.

ಅತಿಥಿ ಉಪನ್ಯಾಸಕ ಡಾ. ಕುಮಾರ್ ಮಾತನಾಡಿ, ಸರ್ಕಾರ ಈ ಹಿಂದಿನಿಂದಲೂ ನಮ್ಮನ್ನು ಶೋಷಣೆ ಮಾಡುತ್ತಲೇ ಬರುತ್ತಿದೆ. ನಮ್ಮ ಸಂಘಟನೆಯನ್ನು ಒಡೆಯಲು ವಿವಿಧ ರೀತಿಯಲ್ಲಿ ಪ್ರಯತ್ನಪಡುತ್ತಿದೆ. ಆದರೆ ನಾವುಗಳು ಈ ಬಾರಿ ಎಲ್ಲರೂ ಒಟ್ಟಾಗಿ ಈ ಪ್ರತಿಭಟನೆಯನ್ನು ನಡೆಸುತ್ತಿದ್ದು, ನಮ್ಮ ಬೇಡಿಕೆಯೊಂದೇ ಅದು ಸೇವಾ ಖಾಯಮಾತಿ. ಇದನ್ನು ಹೊರತುಪಡಿಸಿ ನಾವು ಯಾವುದೇ ಬೇಡಿಕೆಯನ್ನು ಸರ್ಕಾರದ ಮುಂದೆ ಇಟ್ಟಿಲ್ಲ ಎಂದರು.

ನಮಗೆ ಸೇವೆ ಖಾಯಮಾತಿ ಮಾಡಿದರೆ ನಾವು ನಾಳೆಯಿಂದಲೇ ತರಗತಿಗಳನ್ನು ತೆಗೆದುಕೊಳ್ಳುತ್ತೇವೆ. ಆದರೆ ಸರ್ಕಾರ ಮಾತ್ರ ನಮ್ಮ ಸಮಸ್ಯೆಯನ್ನು ಬಿಟ್ಟು ಬೇರೆ ಸಮಸ್ಯೆಗಳನ್ನು ಸೃಷ್ಠಿಸಿ ಅತಿಥಿ ಉಪನ್ಯಾಸಕರ ಸಂಘಟನೆಯನ್ನು ಒಡೆದಾಳುವ ನೀತಿಯನ್ನು ಅನುಸರಿಸುತ್ತಿರುವುದು ಸರಿಯಲ್ಲ. ನಮ್ಮಲ್ಲಿ ಯಾವುದೇ ಒಡಕುಗಳಿಲ್ಲ, ನಾವೆಲ್ಲರೂ ಒಟ್ಟಿಗೆ ಪ್ರತಿಭಟಿಸುತಿದ್ದೇವೆ ಎಂದು ಹೇಳಿದರು.

ಅತಿಥಿ ಉಪನ್ಯಾಸಕರುಗಳಾದ ಡಾ. ಶಿವಣ್ಣ ತಿಮ್ಲಾಪುರ, ಮಲ್ಲಿಕಾರ್ಜುನ್, ಹನುಮಂತರಾಯಪ್ಪ, ಮನು ಸೇರಿದಂತೆ ವಿವಿಧ ಅತಿಥಿ ಉಪನ್ಯಾಸಕರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಸಕರುಗಳಾದ ಅಂಬಿಕಾ.ಕೆ.ಆರ್, ಸವಿತ, ವಿನೂತಾ, ಗಿರಿಜಮ್ಮ, ಶಂಕರ ಹಾರೋಗೆರೆ, ಗಿರೀಶ್, ನಟರಾಜು, ಶಶಿಧರ್, ಗುಂಡಣ್ಣ, ಕಾಂತರಾಜು, ಶಶಿಕುಮಾರ್, ಗಿರೀಶ್‌ಕುಮಾರ್, ಕಿರಣ್‌ಕುಮಾರ್, ಜಯರಾಮು, ನಟರಾಜು, ಶಿಲ್ಪ, ಶ್ವೇತ, ನಾಗೇಂದ್ರ ಸೇರಿದಂತೆ ನೂರಾರು ಅತಿಥಿ ಉಪನ್ಯಾಸಕರುಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *