ಕಡಲೆಕಾಯಿ-ಹಣ್ಣು ಮಾರುವ ಮೂಲಕ ಪ್ರತಿಭಟನೆ ನಡೆಸಿದ ಅತಿಥಿ ಉಪನ್ಯಾಸಕರು

ತುಮಕೂರು: ಅತಿಥಿ ಉಪನ್ಯಾಸಕರ ಹೋರಾಟ 22ನೇ ದಿನಕ್ಕೆ ಕಾಲಿಟ್ಟಿದ್ದು, ಕಡಲೆಕಾಯಿ ಮತ್ತು ಹಣ್ಣುಗಳ ಮಾರಾಟ ಮಾಡುವ ಮೂಲಕ ವಿಭಿನ್ನವಾಗಿ ಪ್ರತಿಭಟಿಸುವ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿರುವ ಅತಿಥಿ ಉಪನ್ಯಾಸಕರು ಪ್ರತಿಭಟನಾ ಸ್ಥಳದಲ್ಲೇ ಕಡಲೆಕಾಯಿ ಮತ್ತು ಹಣ್ಣುಗಳನ್ನು ಮಾರಾಟ ಮಾಡುವ ಮುಖೇನ ಸರ್ಕಾರದ ಧೋರಣೆ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅತಿಥಿ ಉಪನ್ಯಾಸಕಿ ಚೈತ್ರ, ಸರ್ಕಾರಗಳು, ರಾಜಕೀಯ ನಾಯಕರು ವಿರೋಧ ಪಕ್ಷದಲ್ಲಿದ್ದಾಗ ಮಾತನಾಡುವುದೇ ಬೇರೆ, ಸರ್ಕಾರ ನಡೆಸುತ್ತಿರುವಾಗ ಮಾತನಾಡುವುದೇ ಬೇರೆ ಆಗಬಾರದು. ಯಾವಾಗಲೂ ಒಂದೇ ರೀತಿಯಾಗಿ ವರ್ತಿಸಬೇಕು. ಕನಿಷ್ಠ ಸೌಲಭ್ಯಗಳಿಲ್ಲದೆ ದುಡಿಯುತ್ತಿರುವ ಏಕೈಕ ವರ್ಗವೆಂದರೆ ಅದು ಅತಿಥಿ ಉಪನ್ಯಾಸಕರಾಗಿದ್ದು, 22.ದಿನ ಕಳೆದರೂ ಸರ್ಕಾರ ನಮ್ಮ ಸಮಸ್ಯೆ ಬಗೆಹರಿಸದೆ ಇರುವುದು ದುರಂತವಾಗಿದೆ. ನಮ್ಮ ಸೇವೆ ಖಾಯಮಾತಿ ಮಾಡುವವರೆಗೂ ಹೋರಾಟ ಮುಂದುವರಿಯುತ್ತದೆ ಎಂದರು.

ಸಂಘದ ಜಿಲ್ಲಾಧ್ಯಕ್ಷ ಡಾ. ಧರ್ಮವೀರ.ಕೆ.ಎಚ್. ಮಾತನಾಡಿ, ನಾವು ಪ್ರತಿನಿತ್ಯ ವಿಭಿನ್ನವಾಗಿ ಪ್ರತಿಭಟನೆಗಳನ್ನು ನಡೆಸುತ್ತಿದ್ದೇವೆ. 22.ದಿನಗಳಿಂದ ನಮ್ಮ ಪ್ರತಿಭಟನೆಯಿಂದ ವಿದ್ಯಾರ್ಥಿಗಳಿಗೆ ಪಾಠ ಪ್ರವಚನವಿಲ್ಲದಂತಾಗಿದೆ. ಸರ್ಕಾರಕ್ಕೆ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಭವಿಷ್ಯದ ಬಗ್ಗೆ ಚಿಂತೆ ಇಲ್ಲದಂತಾಗಿದೆ. ವಿದ್ಯಾರ್ಥಿಗಳಿಗೆ ಒಂದು ಕಡೆ ತರಗತಿಗಳು ಇಲ್ಲದೇ ಅನಾಥ ಪ್ರಜ್ಞೆ ಕಾಡುತ್ತಿದ್ದರೆ, ಅತಿಥಿ ಉಪನ್ಯಾಸಕರಿಗೆ ಜೀವನದ ಭದ್ರತೆ ಇಲ್ಲದಂತಾಗಿದೆ. ಈಗಾಗಲೇ ರಾಜ್ಯಾದ್ಯಂತ ವಿದ್ಯಾರ್ಥಿ ಸಂಘಟನೆಗಳು, ವಿದ್ಯಾರ್ಥಿ ಪರಿಷತ್ ಮುಂತಾದ ಸಂಘಟನೆಗಳು ಅತಿಥಿ ಉಪನ್ಯಾಸಕರ ಪರವಾಗಿ ಪ್ರತಿಭಟನೆಗಳನ್ನು ಮಾಡುತ್ತಿದ್ದು, ಸರ್ಕಾರದ ಇನ್ನಾದರೂ ಎಚ್ಚೆತ್ತು ನಮ್ಮ ನ್ಯಾಯಯುತ ಬೇಡಿಕೆಯಾದ ಸೇವೆ ಖಾಯಮಾತಿ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಸಕರುಗಳಾದ ಡಾ.ಶಿವಣ್ಣತಿಮ್ಲಾಪುರ್, ಡಾ.ಮಲ್ಲಿಕಾರ್ಜುನ್.ಎಂ. ಟಿ ,ಕಾಂತರಾಜು, ಶಂಕರಪ್ಪ ಹಾರೋಗೆರೆ, ಗಿರಿಜಮ್ಮ.ಟಿ.ಆರ್, ಅನಿತಾ. ವಿನುತಾ. ಯಶಸ್ವಿನಿ. ಸುರೇಶ, ಟಿ. ತೊಂಟಾರಾಧ್ಯ. ದೀಪಕ್. ಗಿರೀಶ್. ಮಹೇಶ್. ಶಶಿಕುಮಾರ್.ಸೌಮ್ಯ,ಡಾ.ಸವಿತ ಸೇರಿದಂತೆ ನೂರಾರು ಅತಿಥಿ ಉಪನ್ಯಾಸಕರು ಭಾಗವಹಿಸಿದ್ದರು.

ಪಂಜಿನ ಮೆರವಣಿಗೆ:

ಸೇವೆ ಖಾಯಮಾತಿ ಮತ್ತು ಸೇವಾ ಭದ್ರತೆಗೆ ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರು ಪಂಜಿನ ಮೆರವಣಿಗೆ ಮೂಲಕ ಪ್ರತಿಭಟಿಸಿದರು.

ನಗರದ ಸ್ವಾತಂತ್ರ್ಯ ಚೌಕದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೂ ಆಯೋಜಿಸಿದ್ದ ಪಂಜಿನ ಮೆರವಣಿಗೆಯಲ್ಲಿ ನೂರಾರು ಅತಿಥಿ ಉಪನ್ಯಾಸಕರು ಭಾಗವಹಿಸಿ ಬಹುದಿನಗಳ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

Leave a Reply

Your email address will not be published. Required fields are marked *