23ನೇ ದಿನಕ್ಕೆ ಅತಿಥಿ ಉಪನ್ಯಾಸಕರ ಹೋರಾಟ- ತರಗತಿ ಭಾಗ್ಯ ನೀಡುವಂತೆ ಸರ್ಕಾರಕ್ಕೆ ವಿದ್ಯಾರ್ಥಿಗಳ ಒತ್ತಾಯ

ತುಮಕೂರು: ಕಳೆದ 23 ದಿನಗಳಿಂದ ರಾಜ್ಯಾದ್ಯಂತ ಸೇವೆ ಖಾಯಮಾತಿಗಾಗಿ ನಡೆಸುತ್ತಿರುವ ಅತಿಥಿ ಉಪನ್ಯಾಸಕರ ಪ್ರತಿಭಟನಾ ಧರಣಿಗೆ ಇಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಬೆಂಬಲ ಸೂಚಿಸಿ, ಸರ್ಕಾರ ಶೀಘ್ರವಾಗಿ ಅತಿಥಿ ಉಪನ್ಯಾಸಕರನ್ನು ಕಾಲೇಜು ಕೊಠಡಿಗೆ ಕಳುಹಿಸಿಕೊಡುವ ಮೂಲಕ ಅವರ ಬೇಡಿಕೆಯನ್ನು ಈಡೇರಿಸಿ, ವಿದ್ಯಾರ್ಥಿಗಳಿಗೆ ತರಗತಿ ಭಾಗ್ಯ ನೀಡುವಂತೆ ಆಗ್ರಹಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು 23.ನೇ ದಿನವು ಅತಿಥಿ ಉಪನ್ಯಾಸಕರ ಪ್ರತಿಭಟನಾ ಧರಣಿ ಮುಂದುವರೆದಿದ್ದು, ನೂರಾರು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಅತಿಥಿ ಉಪನ್ಯಾಸಕರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸುವ ಮೂಲಕ ಬೇಡಿಕೆ ಈಡೇರಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ವಿದ್ಯಾರ್ಥಿನಿ ಸಹನ.ಜಿ.ಎನ್. ಕಳೆದ 20 ದಿನಗಳಿಂದ ನಮಗೆ ತರಗತಿಗಳೇ ನಡೆಯುತ್ತಿಲ್ಲ. ಸರ್ಕಾರ ರಾಜ್ಯಾದ್ಯಂತ ವಿವಿಧ ಭಾಗ್ಯಗಳನ್ನು ನೀಡುತ್ತಿದೆ. ಆದರೆ ವಿದ್ಯಾರ್ಥಿಗಳಿಗೆ ತರಗತಿ ಭಾಗ್ಯ ನೀಡಲು ಮೀನಾಮೇಷ ಎಣಿಸುತ್ತಿದೆ. ಅತಿಥಿ ಉಪನ್ಯಾಸಕರೇ ಜೀವಾಳವಾಗಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಿ ಶೀಘ್ರವಾಗಿ ನಮ್ಮ ತರಗತಿಗಳಿಗೆ ಅವರನ್ನು ಕಳುಹಿಸಿ ಕೊಡುವ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ನಾವೆಲ್ಲರೂ ಸರ್ಕಾರದ ವಿರುದ್ದ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಅತಿಥಿ ಉಪನ್ಯಾಸಕ ಡಾ.ಮಲ್ಲಿಕಾರ್ಜುನ್.ಎಂ.ಟಿ. ಮಾತನಾಡಿ, ವಿದ್ಯಾರ್ಥಿಗಳಿಗೆ ಅತಿಥಿ ಉಪನ್ಯಾಸಕರ ಧರಣಿಯಿಂದ ತರಗತಿಗಳ ಸಮಸ್ಯೆಯಾಗುತ್ತಿದೆ. ಶೇ.80ರಷ್ಟು ಅತಿಥಿ ಉಪನ್ಯಾಸಕರೆ ಜೀವಾಳವಾಗಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ನಮ್ಮ ಪ್ರತಿಭಟನೆಯಿಂದ ತರಗತಿಗಳು ತೊಂದರೆಯಾಗಿರುವ ಬಗ್ಗೆ ನಮಗೆ ಅರಿವಿದೆ. ಸರ್ಕಾರ ನಮ್ಮ ಬೇಡಿಕೆ ಈಡೇರಿಸಿದ ತಕ್ಷಣ ವಿದ್ಯಾರ್ಥಿಗಳಿಗೆ ತೊಂದರೆಯಾಗದ ರೀತಿಯಲ್ಲಿ ವಿಶೇಷ ತರಗತಿಗಳನ್ನು ತೆಗೆದುಕೊಂಡು ನಿಮಗೆ ನ್ಯಾಯ ಒದಗಿಸುತ್ತೇವೆ ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.

ಮತ್ತೋರ್ವ ಅತಿಥಿ ಉಪನ್ಯಾಸಕ ಡಾ. ಕುಮಾರ್ ಮಾತನಾಡಿ ಸರ್ಕಾರ ದಶಕಗಳಿಂದಲೂ ಈ ಹೋರಾಟವನ್ನು ಜೀವಂತವಾಗಿ ಉಳಿಸಿಕೊಂಡು ಬಂದಿದೆ. ಈ ಬಾರಿ ಇದಕ್ಕೊಂದು ಇಂತಿಶ್ರೀ ಹಾಡಲೇಬೇಕು ಎಂದು ನಾವು ಮಾಡು ಇಲ್ಲವೇ ಮಡಿ ಹೋರಾಟ ಮಾಡುತ್ತಿದ್ದು, ನಮ್ಮ ಸೇವೆ ಖಾಯಮಾತಿಯಾಗುವವರೆಗೂ ಹೋರಾಟ ನಿಲ್ಲದು. ವಿದ್ಯಾರ್ಥಿಗಳ ಜೀವನ ಭವಿಷ್ಯ ಎಷ್ಟು ಮುಖ್ಯವೋ ನಮ್ಮ ಜೀವನದ ಭವಿಷ್ಯವೂ ಅμÉ್ಟೀ ಮುಖ್ಯವಾಗಿದೆ. ಕಳೆದ ಒಂದು ತಿಂಗಳಿಂದ ತರಗತಿಗಳನ್ನು ತೆಗೆದುಕೊಳ್ಳದೆ ಪ್ರತಿಭಟನೆ ಮಾಡುತ್ತಿದ್ದರೂ ಸರ್ಕಾರ ನಮ್ಮನ್ನು ಗಂಭೀರವಾಗಿ ಪರಿಗಣಿಸದೆ ಇರುವುದು ಆಶ್ಚರ್ಯ ತಂದಿದೆ. ಇನ್ನಾದರೂ ವಿದ್ಯಾರ್ಥಿಗಳು ಬೀದಿಗಿಳಿಯುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಡಾ. ಧರ್ಮವೀರ. ಕೆ.ಎಚ್, ಶಂಕರ ಹಾರೋಗೆರೆ, ಗಿರಿಜಮ್ಮ.ಟಿ.ಆರ್, ಕಾಂತರಾಜು, ಸುರೇಶ್. ಟಿ, ಶಂಕರ್, ಗಿರೀಶ್.ಡಾ.ಕುಮಾರ್,ಹರ್ಷಿತ, ಹನುಮಂತರಾಯಪ್ಪ,ಶಶಿಕುಮಾರ್.ಸೇರಿದಂತೆ ನೂರಾರು ಅತಿಥಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *