ಗ್ಯಾರಂಟಿ ಯೋಜನೆಗಳು ಸಂವಿಧಾನದತ್ತ ಯೋಜನೆಗಳು-ಸಿ.ಎಸ್.ಧ್ವಾರಕನಾಥ್

ತುಮಕೂರು : ಸರ್ಕಾರ ಕೊಟ್ಟಿರುವ ಗ್ಯಾರಂಟಿಗಳ ಬಗ್ಗೆ ಬಿಟ್ಟಿ ಚಾಕರಿ ಯೋಜನೆಗಳು ಎಂದು ಕೆಲವರು ಜರಿಯುತ್ತಿದ್ದಾರೆ, ಗ್ಯಾರಂಟಿ ಯೋಜನೆಗಳನ್ನು ಸಂವಿಧಾನದತ್ತವಾಗಿ ಕೊಡುತ್ತಿರುವುದೇ ವಿನಃ ಯಾವುದೇ ಸರ್ಕಾರ, ಸಿದ್ದರಾಮಯ್ಯ ಕೊಡುತ್ತಿರುವುದಲ್ಲ ಯಾರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಸಮಾನತೆಗೊಳಗಾಗಿದ್ದಾರೋ ಅವರನ್ನು ಇತರರ ಜೊತೆ ತೆಗೆದುಕೊಂಡು ಹೋಗಲು ತಂದಿರುವ ಯೋಜನೆಗಳು ಎಂದು ಹಿಂದುಳಿದ ವರ್ಗಗಳ ಅಯೋಗದ ಮಾಜಿ ಅಧ್ಯಕ್ಷರಾದ ಸಿ.ಎಸ್.ಧ್ವಾರಕನಾರ್ಥ ಅಭಿಪ್ರಾಯಪಟ್ಟರು.

ತುಮಕೂರು ವಿಶ್ವವಿದ್ಯಾನಿಲಯದ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ತಿಪಟೂರು ಜನಸ್ಪಂದನ ಟ್ರಸ್ಟ್ ಮತ್ತು ತುಮಕೂರು ವಿಶ್ವವಿದ್ಯಾನಿಲಯ ಸಹಯೋಗದಲ್ಲಿ ತುಮಕೂರು ಜಿಲ್ಲೆಯ ಡಿಗ್ರಿ ಕಾಲೇಜು ವಿದ್ಯಾಥಿಗಳು ಮತ್ತು ವಿದ್ಯಾರ್ಥಿನಿಯರಿಗೆ ಏರ್ಪಡಿಸಲಾಗಿದ್ದ ಸಂವಿಧಾನ ಅರಿವು ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಸಂವಿಧಾನದ 38 ಮತ್ತು 38ಎ ಪರಿಚ್ಛೇದದ ಪ್ರಕಾರ ಎಲ್ಲಾರಿಗೂ ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ನೀಡಬೇಕೆಂದಿದೆ, ದೇಶದಲ್ಲಿ ಎಲ್ಲರ ಆದಾಯ ಸಮಾನವಾಗಿಲ್ಲ, ಅದಾನಿಯ ಆದಾಯ ಒಂದು ದಿನಕ್ಕೆ 1600 ಕೋಟಿಯಾದರೆ ಒಬ್ಬ ಸಾಮಾನ್ಯ ಮನುಷ್ಯನ ಆದಾಯ 75 ರೂಪಾಯಿಗಳು, ಈ ಅಸಮಾನತೆಯನ್ನು ಹೇಗೆ ಸರಿದೂಗಿಸುವುದು, ಈ ತಾರತಮ್ಯ ಹೋಗಲಾಡಸಿ ಸಮಾನತೆ ತರುವ ನಿಟ್ಟಿನಲ್ಲಿ ಅಕ್ಕಿ, ಹಣ ಕೊಡುವ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿತು ಎಂದರು.

ಈಗ ಜಾತಿ ಸಮೀಕ್ಷೆ ಮತ್ತು ಗ್ಯಾರಂಟಿ ಯೋಜನೆಗಳ ಬಗ್ಗೆ ತುಂಬಾ ಚರ್ಚೆಗಳು ವಿರೋಧಗಳು ನಡೆಯುತ್ತಿದ್ದು, ಜಾತಿ ಸಮೀಕ್ಷೆಯನ್ನು ಮಾಡುವುದರಿಂದ ಜಾತಿ ಹೆಚ್ಚಾಗುತ್ತಾ ಎಂದು ಪ್ರಶ್ನಿಸಿದ ಅವರು, ಪ್ರತಿ ವರ್ಷ ಹುಲಿ, ಚಿರತೆಗಳನ್ನು ಸಮೀಕ್ಷೆ ಮಾಡುತ್ತಾರೆ, ಅವುಗಳ ಸಂಖ್ಯೆ ಜಾಸ್ತಿಯೇನು ಆಗಿಲ್ಲ, ಜಾತಿ ಸಮೀಕ್ಷೆ ಮಾಡುವುದು ಏಕೆಂದರೆ ಒಂದು ಸವಲತ್ತು ನೀಡಬೇಕಾದರೆ, ತಳ ಸಮುದಾಯಗಳಿಗೆ ಪ್ರಾತಿನಿಧ್ಯ ಕೊಡಬೇಕು, ಸಂವಿಧಾನದ ಆಶಯವು ಇದೇ ಆಗಿದೆ, ಆದರೆ ಸಂವಿಧಾನ ಎಂದ ಕೋಡಲೇ ಕೆಲವರಿವರಿಗೆ ದಲಿತರಿಗೆ ಮೀಸಲಾತಿ ಕೊಡುವುದು ಎಂಬ ಪೂರ್ವಗ್ರಹವಿತ್ತು, ಆದರೆ ಅಂಬೇಡ್ಕರ್, ಆರ್ಥಿಕವಾಗಿ ಹಿಂದುಳಿದವರಿಗೆ, ಹಿಂದುಳಿದ ವರ್ಗಗಳಿಗೆ, ಸಮಾಜಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬೇಕೆಂದು ಹೇಳಿದ್ದಾರೆ.

ಸಂವಿಧಾನದಲ್ಲಿ ಒಳಮೀಸಲಾತಿಗೆ ಬಗ್ಗೆ ಹೇಳಿಲ್ಲ ಎಂದು ಬಹಳ ಜನ ಹೇಳುತ್ತಾರೆ, ಒಳ ಮೀಸಲಾತಿ ಏಕೆ ಬೇಕಿದೆ ಎಂದರೆ ಮೀಸಲಾತಿ ಪಡೆದುಕೊಂಡವರಲ್ಲಿ ದೊಡ್ಡ ಸಮುದಾಯಗಳು ಅತಿ ಹೆಚ್ಚು ಪಾಲನ್ನು ಪಡೆದುಕೊಂಡಿದ್ದು, ಅತಿ ಸಣ್ಣ ಸಮುದಾಯಗಳು ಸವಲತ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಿಲ್ಲದಿರುವುದರಿಂದ ಒಳಮೀಸಲಾತಿ ಕೊಡಬೇಕಾಗಿದೆ ಎಂಬುದು ಸಂವಿಧಾನದ ಆಶಯವಾಗಿದೆ ಎಂದು ಹೇಹೇಳಿದರು.

ಮೇಲ್ಜಾತಿಯವರಿಗೆ ಬುದ್ದಿವಂತಿಕೆ ಮೆದುಳಿನಲ್ಲಿದ್ದರೆ, ಕೆಳ ಸಮುದಾಯಗಳಿಗೆ ಬುದ್ದಿ ಇರುವುದು ಬೆರಳ ತುದಿಗಳಲ್ಲಿ ಕಂಬಳಿ ನೇಯುವವರು, ಕುಂಬಾರಿಕೆ, ಕಮ್ಮಾರಿಕೆ, ಕ್ಷೌರಿಕ ವೃತ್ತಿ, ಮಡಿವಾಳ ವೃತ್ತಿಗಳು ಅತ್ಯಂತ ಉತ್ತಮ ಕೆಲಸಗಳು ಇವುಗಳನ್ನು ಕೀಳು ಕೆಲಸಗಳೆಂದು ಭಾವಿಸಿ ಕೈಗಾರಿಕೆಗಳನ್ನು ತಂದು ಈ ಜನ ಸಮುದಾಯದ ವೃತ್ತಿಗಳನ್ನು ಕಳೆದು ಒಂದು ಮಾನವ ಸಂಬಂಧದ ವಿಶ್ವಾಸವನ್ನು ಕಳೆದುಕೊಳ್ಳುವಂತಾಯಿತು, ಭೌದ್ದಿಕತೆಗೆ ಮಾತ್ರ ಮೀಸಲಾತಿ ಕೊಟ್ಟರು, ಆದರೆ ಕುಲ ಕಸುಬುಗಳ ಬುದ್ದಿವಂತಿಕೆಗೆ ಮೀಸಲಾತಿ ಸಿಗಲಿಲ್ಲ ಎಂದು ವಿಷಾಧಿಸಿದರು.

ನಾವೆಲ್ಲಾ ಎಂತಹ ಕರ್ಮಟ ವ್ಯವಸ್ಥೆಯಲ್ಲದ್ದೆವು ಎಂದರೆ ಹೆಣ್ಣು ಮಕ್ಕಳು ಮತ್ತು ದಲಿತ ಸಮುದಾಯದವರನ್ನು ಅಸ್ಪøಶ್ಯರು ಎಂದು ನೋಡುತ್ತಿದಂತಹ ದೇಶದಲ್ಲಿದ್ದೆವು, ಅಂಬೇಡ್ಕರ್ ಬ್ರಿಟನ್ ಗೆ ದುಂಡು ಮೇಜಿನ ಪರಿಷತ್ ಸಭೆಗೆ ಹೋಗಿದ್ದಾಗ, ಬ್ರಿಟನ್ ಸರ್ಕಾರ ನಿಮ್ಮ ಅಜೆಂಡವೇನು ಎಂದು ಕೇಳಿದಾಗ, ಹೆಣ್ಣು ಮಕ್ಕಳಿಗೆ ಮತದಾನದ ಹಕ್ಕು ನೀಡುವುದು ಎಂದು ಹೇಳಿದಾಗ ಆಗ ಅಂಬೇಡ್ಕರ್ ಭಾರತದ ಹೆಣ್ಣು ಮಕ್ಕಳಿಗೆ ಮತದಾನದ ಹಕ್ಕು ಕೇಳುತ್ತಿದ್ದಾರೆಂದು ಬ್ರಿಟನ್ ಸರ್ಕಾರ ಮಹಿಳೆಯರಿಗೆ ಮತದಾನದ ಹಕ್ಕನ್ನು ತರಾತುರಿಯಲ್ಲಿ ನೀಡಿತು ಎಂದರು.

1947 ನವೆಂಬರ್ 27ರಂದು ಆರ್ಗನೈಸ್ ಎಂಬ ಪತ್ರಿಕೆಯೊಂದು ಈ ಸಂವಿಧಾನ ಇನ್ನೂ ತೇಲಾಡುತ್ತಾ ಇದೆ ಎಂದು ಬರೆಯುತ್ತದೆ, ಆಗ ಅಂಬೇಡ್ಕರ್ ಅವರು ಹೌದು ಈ ಸಂವಿಧಾನ ತೇಲಾಡುವ ಸಂವಿಧಾನ ಇರಬಹುದು ಅದಕ್ಕೊಬ್ಬ ನಿರ್ದೇಶಕ ಇದ್ದಾನೆ, ಅದಕ್ಕೊಂದು ಗುರಿ ಇದೆ ಎಂದು ಉತ್ತರ ನೀಡುತ್ತಾರೆ ಎಂದು ಹೇಳಿದರು.

ಜನಸ್ಪಂದನ ಟ್ರಸ್ಟ್ ಅಧ್ಯಕ್ಷರಾದ ಸಿ.ಬಿ.ಶಶಿಧರ್(ಟೂಡಾ) ಪ್ರಾಸ್ತಾವಿಕ ಮಾತಗಳನ್ನಾಡಿದರು.

ಸಭೆಯಲ್ಲಿ ತುಮಕೂರು ವಿ.ವಿ.ಯ ಉಪಕುಲಪತಿಗಳಾದ ಎಂ.ವೆಂಕಟೇಶ್ವರಲು, ಸಿ.ಜೆ.ಲಕ್ಷ್ಮೀಪತಿ, ಬೆಂಗಳೂರು ವಿ.ವಿ. ಕುಲಸಚಿವರಾದ ರಮೇಶ್, ಎಸ್.ನಾಗಣ್ಣ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *