ಮಧುಗಿರಿ : ಐದು ಗ್ಯಾರಂಟಿ ಯೋಜನೆಗಳನ್ನೂ ಘೋಷಣೆ ಮಾಡಿ ಮಹಿಳೆಯರಿಗೆ ಎರಡು ಸಾವಿರ ರೂ. ನೀಡುವ ಸರ್ಕಾರ ಜನರ ಮೇಲೆ ಸಾಲದ ಹೊರೆ ಹೊರಿಸಿದೆ. ಈ ವರ್ಷ ಕಾಂಗ್ರೆಸ್ ಸರ್ಕಾರ ಒಂದು ಲಕ್ಷ ಐದು ಸಾವಿರ ಕೋಟಿ ರೂ. ಸಾಲ ಮಾಡಿದೆ. ಈ ಸಾಲವನ್ನು ಸಿದ್ದರಾಮಯ್ಯ ತೀರಿಸುವುದಿಲ್ಲ, ಅವರು ಅಧಿಕಾರ ಬಿಟ್ಟು ಇಳಿದ ಮೇಲೆ ಖಜಾನೆ ಖಾಲಿಯಾದಾಗ ಮುಂದೆ ಆಡಳಿತ ನಡೆಸುವವರು ಜನರ ಜೇಬಿಗೆ ಕೈ ಹಾಕಬೇಕಾಗುತ್ತದೆ. ರಾಜ್ಯದ ಪ್ರತಿ ಕುಟುಂಬದ ಮೇಲೆ ಈ ಸರ್ಕಾರ 36 ಸಾವಿರ ರೂ. ಸಾಲ ಹೇರಿದೆ ಎಂದು ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಮಧುಗಿರಿಯಲ್ಲಿ ಶುಕ್ರವಾರ ನಡೆದ ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಅವರ ಪರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಹೆಂಗಸರಿಗೆ ಎರಡು ಸಾವಿರ ರೂ. ನೀಡಿ, ಮದ್ಯದ ಬೆಲೆ ವಿಪರೀತ ಏರಿಕೆ ಮಾಡಿ ಸರ್ಕಾರ ಪಿಕ್ ಪಾಕೇಟ್ ಮಾಡುತ್ತಿದೆ ಎಂದರು.
ದೇಶಕ್ಕೆ ಸುಭದ್ರಾ ಸರ್ಕಾರ ಬೇಕು, ದೇಶದ ಆರ್ಥಿಕ ಸ್ಥಿತಿ ಸುಧಾರಣೆ ಆಗಬೇಕು, ಹಲವು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಬೇಕು. ಇದಕ್ಕೆಲ್ಲಾ ನರೇಂದ್ರ ಮೋದಿಯವರೇ ಪರಿಹಾರವೆಂದು ದೇಶದ ಜನ ಭಾವನೆ ಹೊಂದಿದ್ದಾರೆ. ಇದೇ ಕಾರಣಕ್ಕೆ ಮಾಜಿ ಪ್ರಧಾನಿ ದೇವೇಗೌಡರೂ ಮೋದಿಯವರೇ ಮತ್ತೆ ಪ್ರಧಾನಿ ಆಗಬೇಕು, ಆಗ ರಾಜ್ಯದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಸಾಕಾರಗೊಳಿಸಲು ಸಹಕಾರ ದೊರೆಯುತ್ತದೆ ಎಂದು ಬಿಜೆಪಿ, ಜೆಡಿಎಸ್ ಜೊತೆಗೂಡಿ ಚುನಾವಣೆ ಎದುರಿಸುತ್ತಿದ್ದೇವೆ. ಸಮರ್ಥ, ಆನುಭವಿ ನಾಯಕರಾಗಿರುವ ವಿ.ಸೋಮಣ್ಣ ಅವರನ್ನು ಈ ಚುನಾವನೆಯಲ್ಲಿ ಅತ್ಯಧಿಕ ಮತಗಳಿಂದ ಆಯ್ಕೆ ಮಾಡಬೇಕು ಎಂದು ಕುಮಾರಸ್ವಾಮಿ ಮನವಿ ಮಾಡಿದರು.
ಕುಂಚಿಟಿಗರ ಸಮಾಜ ಹಾಗೂ ಕಾಡುಗೊಲ್ಲ ಸಮುದಾಯದವರ ಮೀಸಲಾತಿ ಬೇಡಿಕೆ ಈಡೇರಿಸಲು ಕೇಂದ್ರದ ಸರ್ಕಾರದ ಜೊತೆಗೂಡಿ ದೇವೇಗೌಡರು ಪ್ರಯತ್ನಿಸುತ್ತಾರೆ. ಭದ್ರಾ ಮೇಲ್ದಂಡೆ ಯೋಜನೆಗೆ ಬೇಕಾಗಿರುವ ಹಣದ ವ್ಯವಸ್ಥೆ ಮಾಡಿಸಿ ಯೋಜನೆ ಪೂರ್ಣಗೊಳಿಸುವ ಪ್ರಯತ್ನ ಮಾಡುವುದಾಗಿ ಹೇಳಿದರು.
ಎನ್.ಡಿ.ಎ ಅಭ್ಯರ್ಥಿ ವಿ.ಸೋಮಣ್ಣ ಮಾತನಾಡಿ, ಭಾರತದ ಭವಿಷ್ಯ ನಿರ್ಧರಿಸುವ ಈ ಚುನಾವಣೆ ಮಹತ್ವವಾದದ್ದು, ಮೋದಿಯವರು ಮತ್ತೆ ಪ್ರಧಾನಿ ಆಗಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡರು ಬಿಜೆಪಿ ಜೊತೆ ಸೇರಿ ಶಕ್ತಿ ತುಂಬಿದ್ದಾರೆ. ಚುನಾವಣೆಯಲ್ಲಿ ಕ್ರಮ ಸಂಖ್ಯೆ 3ರ ಕಮಲ ಗುರುತಿಗೆ ಮತ ನೀಡಿ ತಮ್ಮನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಮಾಜಿ ಶಾಸಕ ಎಂ.ವಿ.ವೀರಭದ್ರಯ್ಯ ಮಾತನಾಡಿ, ದೇಶದ ಭದ್ರತೆ, ಅಭಿವೃದ್ಧಿ, ಒಕ್ಕೂಟ ವ್ಯವಸ್ಥೆ ಕಾಪಾಡಲು ಮೋದಿಯವರು ಪ್ರಧಾನಿ ಆಗಬೇಕು ಎಂಬುದು ದೇವೇಗೌಡರ ಅಭಿಲಾಷೆಯಾಗಿದೆ. ಬಿಜೆಪಿ, ಜೆಡಿಎಸ್ ಪಕ್ಷಗಳ ಕಾರ್ಯಕರ್ತರು ಒಗ್ಗಟ್ಟಾಗಿ ಗೆಲುವಿನ ಸಂದೇಶ ನೀಡಬೇಕು. ಇಲ್ಲಿನ ಭ್ರಷ್ಟ, ದ್ವೇಷದ ರಾಜಕಾರಣಕ್ಕೆ ಇತಿಶ್ರೀ ಹಾಡಬೇಕು ಎಂದರು.
ಬಿಜೆಪಿ ಮುಖಂಡ ಎಲ್.ಸಿ.ನಾಗರಾಜು, ವಿಧಾನ ಪರಿಷತ್ ಸದಸ್ಯ ಚಿದನಂದಗೌಡ ಮಾತನಾಡಿದರು.
ಮಾಜಿ ಶಾಸಕ ಸುಧಾಕರ ಲಾಲ್, ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಮುಖಂಡ ಅನಿಲ್‍ಕುಮಾರ್, ಜಿಲ್ಲಾ ಜಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನುಮಂತೇಗೌಡ, ಮುಖಂಡರಾದ ಅನಿಲ್‍ಕುಮಾರ್, ಎಸ್.ಪಿ.ಚಿದಾನಂದ್, ಶಿವಪ್ರಸಾದ್, ಕೊಂಡವಾಡಿ ಚಂದ್ರಶೇಖರ್, ನಾಗೇಂದ್ರ ಮೊದಲಾದವರು ಭಾಗವಹಿಸಿದ್ದರು.