ಶೋಷಿತ ಜಾತಿಗಳು ಸರ್ಕಾರದ ಸೌಲಭ್ಯ ಪಡೆಯಲು ಕಾಂತರಾಜು ವರದಿ ಜಾರಿಗೆ ಹಂದಿಜೋಗಿ ಸಂಘ ಒತ್ತಾಯ

ತುಮಕೂರು :- ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು ವರದಿಯನ್ನು ಜಾರಿಗೆ ತಂದು ಕೆಳ ವರ್ಗದ ಶೋಷಿತ ಜಾತಿಗಳಿಗೆ ಸರ್ಕಾರ ಸೌಲಭ್ಯಗಳನ್ನು ಒದಗಿಸಲು ಮುಂದಾಗಬೇಕೆಂದು ಅಖಿಲ ಕರ್ನಾಟಕ ಹಂದಿಜೋಗಿ ಸಂಘ ಸರ್ಕಾರವನ್ನು ಒತ್ತಾಯಿಸಿತು.

ಅವರು ಜನವರಿ 29ರಂದು ನಗರದ ಐಎಂಎ ಹಾಲ್‍ನಲ್ಲಿ ಅಖಿಲ ಕರ್ನಾಟಕ ಹಂದಿಜೋಗಿ ಸಂಘದ ಜಿಲ್ಲಾ ಶಾಖೆಯ ಪದಾಧಿಕಾರಿಗಳ ಆಯ್ಕೆ ಸಮಾರಂಭದಲ್ಲಿ ಒತ್ತಾಯಿಸಲಾಯಿತು,ಸಮಾರಂಭ ಉದ್ಘಾಟಿಸಿದ ಆರೋಗ್ಯ ಇಲಾಖೆಯ ನಿವೃತ್ತ ಉಪನಿರ್ದೇಶಕರು ಹಾಗೂ ತುಮಕೂರು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾ||ಹೆಚ್.ವಿ.ರಂಗಸ್ವಾಮಿ ಮಾತನಾಡಿ ಕಾಂತರಾಜು ವರದಿ ಜಾರಿಗೆ ಬಂದಿದ್ದರೆ ಹಿಂದುಳಿದ ಮತ್ತು ಪರಿಶಿಷ್ಠ ಜಾತಿಯಲ್ಲಿ ಸರ್ಕಾರದ ಸೌಲಭ್ಯಗಳನ್ನೂ ಪಡೆಯಲು ಸಾಧ್ಯವಾಗದ ಮೈಕ್ರೋಸ್ಕೋಪಿಕ್ ಜಾತಿಗಳಿಗೆ ತುಂಬಾ ಅನುಕೂಲವಾಗುತ್ತಿತ್ತು, ಕೆಲ ಮೇಲ್ಜಾತಿಗಳು ಕಾಂತರಾಜು ವರದಿಯನ್ನು ವಿರೋಧಿಸುತ್ತಿದ್ದು, ಕಾಂತರಾಜು ವರದಿಯನ್ನು ಯಾರೋ ಮರದ ಕೆಳಗೆ ಕುಳಿತು ವರದಿ ತಯಾರಿ ಮಾಡಿದ್ದಾರೆ ಎಂದು ಮೇಲ್ವರ್ಗದವರು ಮಾತನಾಡುತ್ತಿರುವುದು ಶೋಷಿತ ಜಾತಿಗಳು ಅವರ ಫಲ್ಲಕ್ಕಿ ಹೊರಲಷ್ಟೇ ಸೀಮಿತವಾಗಿರಬೇಕು ಎಂಬಂತಿದೆ, ಈ ಜಾತಿಗಳು ಮುಂದುವರೆಯುವುದು ಮೇಲ್ವರ್ಗಗಳಿಗೆ ಬೇಕಿಲ್ಲ, ಹೊಟ್ಟೆ ತುಂಬಿದವರು ಹಸಿದವನ ಹಸಿವು ತಿಳಿಯುವುದಿಲ್ಲ, ಮೇಲ್ವರ್ಗದವರು ಬಲಾಢ್ಯರಾಗಿರುವುದರಿಂದ ಕಾಂತರಾಜು ವರದಿಯನ್ನು ವಿರೋಧಿಸುತ್ತಿದ್ದಾರೆ ಎಂದು ಹೇಳಿದರು.

ಕಾಂತರಾಜು ವರದಿಯನ್ನು ಜಾರಿಗೆ ತರುವುದಷ್ಟೇ ಅಲ್ಲ ಆ ವರದಿಯನ್ನು ಒಪ್ಪಿಕೊಳ್ಳಬೇಕು, ವರದಿ ಇನ್ನೂ ಮಂಡನೆಯೇ ಆಗಿಲ್ಲ ಕಡತದಲ್ಲೇ ಇದೆ, ಆ ವರದಿಯಲ್ಲಿ ಯಾವ ಯಾವ ಜಾತಿ ಎಷ್ಟಿದೆ, ಏನು ಕುಲ ಕಸುಬು ಮಾಡುತ್ತಿದ್ದಾರೆ, ವಾಹನ, ಜಮೀನು, ಆರ್ಥಿಕ, ಸಾಮಾಜಿಕ ಮಟ್ಟ ಸೇರಿದಂತೆ 54 ಅಂಶಗಳನ್ನು ಅಧ್ಯಯನ ಮಾಡಿದ್ದಾರೆ ಆ ಹಿನ್ನಲೆಯಲ್ಲಿ ಕಾಂತರಾಜು ವರದಿ ಜಾರಿಗೆ ಸರ್ಕಾರಕ್ಕೆ ಹಂದಿಜೋಗಿ ಸಂಘವಒತ್ತಾಯಿಸಬೇಕಿದೆ ಎಂದರು.

ಪ್ರಜಾಪ್ರಭುತ್ವದಲ್ಲಿ ಸಂಖ್ಯೆಯೇ ಎಲ್ಲಾ ಸೌಲಭ್ಯ ಪಡೆಯಲು ಸಹಕಾರಿಯಾಗಿರುವುದರಿಂದ ಶೋಷಿತ ಸಣ್ಣ ಜಾತಿಗಳು ಹೊಡೆದು ಹೋಗಿರುವ ಜಾತಿಗಳಾಗಿದ್ದು, ಈ ಎಲ್ಲಾ ಜಾತಿಗಳು ಒಗ್ಗೂಡಿ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಸರ್ಕಾರಕ್ಕೆ ನಮ್ಮ ಪಾಲು ನೀಡುವಂತೆ ಕೇಳಬೇಕು, ಒಂದಾಗದಿದ್ದರೆ ನೀರಿನಲ್ಲಿ ಮುಳುಗಿದಂತೆ, ಸರ್ಕಾರಕ್ಕೆ ನಾವು ಲಕ್ಷ ಇದ್ದೇವೆ, ಎರಡು ಲಕ್ಷ ಇದ್ದೇವೆ ಎಂದು ಸಣ್ಣ ಜಾತಿಗಳು ಎಷ್ಟೇ ಹೇಳಿದರೂ ಅದು ಗಣನೆಗೆ ಬರುವುದಿಲ್ಲ, ಆದ್ದರಿಂದ ಸಣ್ಣ-ಪುಟ್ಟ ಜಾತಿಗಳು ಒಗ್ಗಟ್ಟಾಗಬೇಕಿದೆ ಎಂದು ಹೇಳಿದರು.

ಒಗ್ಗಟ್ಟಾಗಿ ನಮ್ಮ ಹಕ್ಕುಗಳಿಗೆ, ಸೌಲಭ್ಯಗಳಿಗೆ ಹೋರಾಟವನ್ನು ಮಾಡಬೇಕಿದೆ, ನಾವು ಒಟ್ಟಾಗಲು ಸಾಧ್ಯವಾಗುತ್ತಿಲ್ಲ, ಏಕೆಂದರೆ ಕೆಳಜಾತಿಗಳಲ್ಲಿ ಏಡಿಕಾಯಿಯಂತೆ ಹಿಂದಕ್ಕೆಳೆಯುವ ಪ್ರವೃತ್ತಿಯಿಂದ ಮತ್ತೆ ಮತ್ತೆ ಹಿಂದಕ್ಕೆ ಹೋಗುತ್ತಿದ್ದು, ಮತ್ತಷ್ಟು ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದರು.

ಮೇಲ್ಜಾತಿಯವರು ಮಠ-ಮಾನ್ಯಗಳನ್ನು ಕಟ್ಟಿಕೊಂಡು ಸಾಮಾಜಿಕವಾಗಿ, ಆರ್ಥಿಕವಾಗಿ ಮುಂದುವರೆದಿದ್ದಾರೆ, ಕೆಳ ಜಾತಿಯ ಶೋಷಿತ ಜಾತಿಗಳಿಗೆ ಇಂತಹ ಅವಕಾಶ ಇಲ್ಲದಿರುವುದರಿಂದ ಇನ್ನೂ ಮೇಲ್ವರ್ಗದವರ ಫಲ್ಲಕ್ಕಿ ಹೊರುವ ಸ್ಥಿತಿ ಇದೆ, ಆದ್ದರಿಂದ ಕಂದಾಚಾರ, ಮೂಡನಂಬಿಕೆಗಳನ್ನು ಬದಿಗೊತ್ತಿ ಹಂದಿಜೋಗಿ, ಹೆಳವ, ಕೊರಮ, ಕೊರಚ, ಬುಡಬುಡಿಕೆ, ಶಿಳ್ಳೆಕ್ಯಾತ, ಇನ್ನೂ ಮುಂತಾದ ಮೈಕ್ರೋಸ್ಕೋಪಿಕ್ ಜಾತಿಗಳು ಒಗ್ಗಾಟ್ಟಾಗಿ ತಮ್ಮ ಸೌಲಭ್ಯಗಳಿಗಾಗಿ ಹೋರಾಟ ನಡೆಸುವ ಅನಿವಾರ್ಯ ಈಗ ಬಂದಿದೆ ಎಂದು ಹೇಳಿದರು.

ಹಂದಿಜೋಗಿ ಜನಾಂಗದ ಅವಕಾಶಗಳನ್ನು ಇತರೆ ಜಾತಿಗಳು ಪಡೆದುಕೊಳ್ಳುತ್ತಿರುವ ಬಗ್ಗೆ ಸರ್ಕಾರಕ್ಕೆ ಮನದಟ್ಟು ಮಾಡಿ ತಪ್ಪಿಸಬೇಕಾಗಿದೆ ಎಂದು ಹೇಳಿದರು.

ಹಂದಿಜೋಗಿ ಜನಾಂಗದ ಜಾತಿ ಪ್ರಮಾಣಪತ್ರ ಮತ್ತು ಸವಲತ್ತುಗಳನ್ನು ಹೆಳವ, ಹಂಡಿಜೋಗಿ ಎಂಬುವವರು ಪಡೆದು ನಿಜವಾದ ಹಂದಿಜೋಗಿ ಜನಾಂಗಕ್ಕೆ ಸೌಲಭ್ಯಗಳು ಸಿಗದಂತಾಗಿವೆ, ಮೇಲ್ಜಾತಿಯವರು ಪಡೆದಿದ್ದರೆ ಅದನ್ನು ಪ್ರಬಲವಾಗಿ ವಿರೋಧಿಸಬಹುದಿತ್ತು, ಆದರೆ ಹಂದಿಜೋಗಿ ಜಾತಿಯಂತೆಯೇ ಶೋಷಣೆಗೆ ಒಳಪಟ್ಟಿರುವ ಈ ಜಾತಿಗಳು ಅನುಕೂಲ ಪಡೆಯುತ್ತಿರುವುದನ್ನು ತಡೆಯಲು ಕಾಂತರಾಜು ವರದಿ ಪರಿಣಾಮಕಾರಿಯಾಗಲಿದೆ ಎಂದು ಹೇಳಿದರು.

ಸಭೆಯಲ್ಲಿ ಅಲೆಮಾರಿ-ಅರೆಅಲೆಮಾರಿ ಸಂಘದ ರಾಜ್ಯಾಧ್ಯಕ್ಷರಾದ ಎಂ.ವಿ.ವೆಂಕಟರಮಣಯ್ಯ, ಅಗರೆ ಗೋವಿಂದರಾಜು ಮಾತನಾಡಿದರು. ಇದೇ ಸಂದರ್ಭದಲ್ಲಿ ತುಮಕೂರು ಜಿಲ್ಲೆಗೆ ಹಂದಿಜೋಗಿ ಸಂಘಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಅಖಿಲಾ ಕರ್ನಾಟಕ ಹಂದಿಜೋಗಿ ಸಂಘದ ರಾಜ್ಯಾಧ್ಯಕ್ಷರಾದ ರಾಜೇಂದ್ರಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಡ್ಯ ರಾಜು, ಉಪಾಧ್ಯಕ್ಷರುಗಳಾದ ಪಿಳ್ಳಣ್ಣ, ಸಿ.ಗೋವಿಂದರಾಜು, ತಿಪಟೂರು ರಂಗಸ್ವಾಮಿ, ಖಜಾಂಚಿ ಮಡಿವಾಳ ವೆಂಕಟರಾಮು ಉಪಸ್ಥಿತರಿದ್ದರು.
ಹುಳಿಯಾರು ಮುಕುಂದ ನಿರೂಪಿಸಿ, ಗೋವಿಂದ ಹುಳಿಯಾರು ಸ್ವಾಗತಿಸಿ, ಅಲೆಮಾರಿ ರಾಜಪ್ಪ ಪ್ರಸ್ತಾವಿಕವಾಗಿ ಮಾತನಾಡಿದರು.

Leave a Reply

Your email address will not be published. Required fields are marked *