ಕಠಿಣ ಪರಿಶ್ರಮವೊಂದೇ ಯಶಸ್ಸಿನ ದಾರಿ: ಎನ್. ಆರ್. ನಾರಾಯಣಮೂರ್ತಿ

ತುಮಕೂರು: ನೀವು ಎತ್ತರಕ್ಕೆ ಏರಬೇಕೆಂದರೆ ಕಷ್ಟಪಟ್ಟು ಕೆಲಸಮಾಡುವುದೊಂದೇ ದಾರಿ. ಯಾವ ಕ್ಷೇತ್ರದಲ್ಲಿ ನಿಮಗೆ ಅಭಿರುಚಿ, ಸಾಮಥ್ರ್ಯ ಇದೆಯೋ ಅದನ್ನು ಕಂಡುಕೊಂಡು ಅದರಲ್ಲಿ ಸಮರ್ಪಣಾ ಭಾವದಿಂದ ದುಡಿಯಿರಿ. ಯಾವ ದೇಶದಲ್ಲಿಯೂ ಸರ್ಕಾರವೇ ಎಲ್ಲರಿಗೂ ಉದ್ಯೋಗ ಕೊಡುತ್ತಿಲ್ಲ ಎಂದು ಇನ್ಫೋಸಿಸ್ ಸಂಸ್ಥೆಯ ಸಹಸಂಸ್ಥಾಪಕ ಎನ್. ಆರ್. ನಾರಾಯಣ ಮೂರ್ತಿ ಅಭಿಪ್ರಾಯಪಟ್ಟರು.

ತುಮಕೂರು ವಿಶ್ವವಿದ್ಯಾನಿಲಯವು ಶನಿವಾರ ಹಮ್ಮಿಕೊಂಡಿದ್ದ ಪ್ರೇರಣಾ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.

ನಾಯಕತ್ವ ಗುಣವುಳ್ಳವನನ್ನು ಸಮಾಜ ಗೌರವಿಸುತ್ತದೆ. ಉತ್ತಮ ಮೌಲ್ಯಗಳು, ಪ್ರಾಮಾಣಿಕತೆಯುಳ್ಳ ಶಿಕ್ಷಣವು ನಿಮ್ಮನ್ನು ಉತ್ತಮ ನಾಯಕನನ್ನಾಗಿಸುತ್ತದೆ. ಆ ನಾಯಕತ್ವವು ಉದ್ಯೋಗವನ್ನು ಕಲ್ಪಿಸುತ್ತದೆ. ಆಹಾರ, ವಸತಿ, ಶಿಕ್ಷಣ ಇವುಗಳ ಅಭಿವೃದ್ಧಿಯಾಗದ ಹೊರತು ದೇಶವು ಅಭಿವೃದ್ಧಿಯಾಗದು ಎಂದರು.

ಖಾಸಗಿ ವಲಯ ಬಡತನವನ್ನು ದೂರ ಮಾಡುವಲ್ಲಿ ತಕ್ಕಮಟ್ಟಿಗೆ ಕಾರ್ಯನಿರ್ವಹಿಸುತ್ತಿದೆ. ಭಾರತೀಯ ಜನಸಂಖ್ಯೆಯಲ್ಲಿ ಇಂದಿಗೂ ಶೇ. 60ರಷ್ಟು ಜನರಲ್ಲಿ ಬಡತನ ಕಾಡುತ್ತಿದ್ದು ಅದನ್ನು ದೂರ ಮಾಡಲು ಸಾಧ್ಯವಾಗಿಲ್ಲ ಎಂದರು.

ನಾವು ವರ್ತಮಾನದ ತಂತ್ರಜ್ಞಾನವನ್ನು ಅರಿಯುವ ಪ್ರಯತ್ನ ಮಾಡಬೇಕು. ಸಮಯದ ಸದುಪಯೋಗ, ನಾಳೆಗೆ ನಮ್ಮನ್ನು ಉತ್ತಮ ಪಡಿಸಿಕೊಳ್ಳುವತ್ತ ಗಮನವಹಿಸಬೇಕು. ಸರ್ಕಾರದ ಕೆಲಸ ಉದ್ಯೋಗವನ್ನು ಸೃಷ್ಟಿ ಮಾಡುವುದರ ಜೊತೆಗೆ ಉತ್ತಮ ಉದ್ಯೋಗದ ವಾತಾವರಣವನ್ನು ನಿರ್ಮಿಸುವುದು ಸಹ ಆಗಿರುತ್ತದೆ. ಹೂಡಿಕೆದಾರರನ್ನು ಆಕರ್ಷಿಸಿ ಉದ್ಯೋಗ ಸೃಷ್ಟಿಗೆ ಸಹಕಾರವನ್ನು ನೀಡಬೇಕು. ರಾಜ್ಯದ ತೆರಿಗೆಯನ್ನು ಸಮತೋಲನದಲ್ಲಿ ಇರಿಸಿ ಮೂಲಭೂತ ಸೌಕರ್ಯಗಳನ್ನು ನೀಡುವುದು ಸರ್ಕಾರದ ಕಾರ್ಯ ಆಗಬೇಕು ಎಂದು ವಿಶ್ಲೇಷಿಸಿದರು.

ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದ ಮಹಾರಾಜ್ ಮಾತನಾಡಿ ಇನ್ಫೋಸಿಸ್ ಸಂಸ್ಥೆಯು ಅನೇಕ ಯುವಕರಿಗೆ ಜೀವನವನ್ನು ಕಟ್ಟಿಕೊಟ್ಟಿದೆ. ಯುವಜನತೆ ನಾರಾಯಣಮೂರ್ತಿಯಂತಹ ಮಹನೀಯರನ್ನು ಆದರ್ಶವಾಗಿ ತೆಗೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷೀಯ ನುಡಿಗಳನ್ನಾಡಿದ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪೆÇ್ರ. ಎಂ. ವೆಂಕಟೇಶ್ವರಲು, ಮೂವತ್ತು ಸಾವಿರಕ್ಕೂ ಹೆಚ್ಚು ಯೋಜನೆಗಳನ್ನು ಇನ್ಫೋಸಿಸ್ ಸಂಸ್ಥೆಯು ನಡೆಸುತ್ತಿದೆ. ತುಮಕೂರು ವಿಶ್ವವಿದ್ಯಾನಿಲಯವು ಸಹ ಇನ್ಫೋಸಿಸ್ ಸಂಸ್ಥೆಯ ಯೋಜನೆಯ ಸದುಪಯೋಗ ಪಡೆದುಕೊಂಡಿದೆ ಎಂದರು.

ನಾರಾಯಣ ಮೂರ್ತಿಯವರು ತಮ್ಮ ಇಳಿ ವಯಸ್ಸಿನಲ್ಲೂ ಸಮಯಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಾರೆ. ಅವರ ಶಿಸ್ತು, ಸಮಯ ಪಾಲನೆ, ಸರಳ ವ್ಯಕ್ತಿತ್ವ ಅನುಸರಣೀಯ ಎಂದರು.

ಕುಲಸಚಿವೆ ನಾಹಿದಾ ಜûಮ್ ಜûಮ್. ಪರೀಕ್ಷಾಂಗ ಕುಲಸಚಿವ ಪೆÇ್ರ. ಪ್ರಸನ್ನ ಕುಮಾರ್ ಕೆ., ಪ್ರೇರಣಾ ಉಪನ್ಯಾಸ ಸಮಿತಿ ಅಧ್ಯಕ್ಷ ಪ್ರೊ. ಬಿ. ರವೀಂದ್ರಕುಮಾರ್, ಕೌಶಲ್ಯಾಭಿವೃದ್ಧಿ ಕೇಂದ್ರದ ಸಂಚಾಲಕ ಪ್ರೊ. ಕೆ. ಜಿ. ಪರಶುರಾಮ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *