ಪತ್ರಕರ್ತರ ಕುಟುಂಬಕ್ಕೆ ಆರೋಗ್ಯ ವಿಮೆ: ಪತ್ರಕರ್ತರ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ

ತುಮಕೂರು : ಪತ್ರಕರ್ತರ ಕುಟುಂಬಕ್ಕೆ ಆರೋಗ್ಯ ವಿಮೆ ನೀಡುವ ಬಗ್ಗೆ ತೀರ್ಮಾನವನ್ನು ಸರ್ಕಾರ ತೆಗೆದುಕೊಳ್ಳಲಿದೆ, ಇದಕ್ಕಾಗಿ ಬಜೆಟ್‍ನಲ್ಲಿ 10 ಕೋಟಿ ತೆಗೆದಿಡಲಾಗಿದ್ದು ಅದನ್ನು ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದರು.

ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯ ಹಾಗೂ ಜಿಲ್ಲಾ ಘಟಕದ ಆಶ್ರಯದಲ್ಲಿ ಸಿದ್ಧಾರ್ಥ ತಾಂತ್ರಿಕ ವಿಶ್ವ ವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ “ರಾಜ್ಯ ಪತ್ರಕರ್ತರ 39ನೇ ರಾಜ್ಯ ಸಮ್ಮೇಳನ”ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾಧ್ಯಮಗಳು ಯಾವುದೇ ಸುದ್ದಿ ಪ್ರಸಾರಕ್ಕೂ ಮುನ್ನ ಸತ್ಯಾಸತ್ಯತೆ, ಪರಾಮರ್ಶೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಕರ್ತರಿಗೆ ಕರೆ ನೀಡಿದರು. ಪತ್ರಿಕೋದ್ಯಮ ವೃತ್ತಿಯಾಗಿರಬೇಕು. ಉದ್ಯಮವಾಗಬಾರದು. ಪತ್ರಿಕಾ ವರದಿಗಳು ವೃತ್ತಿಪರವಾಗಿದ್ದಾಗ ಸಮಾಜದ ಸುಧಾರಣೆ ಸಾಧ್ಯ. ಪತ್ರಿಕಾ ವೃತ್ತಿ ಉದ್ಯಮವಾದ ಕೂಡಲೇ ಉದ್ದೇಶಗಳು ಬದಲಾಗುತ್ತವೆ. ವಸ್ತು ಸ್ಥಿತಿ ಜೊತೆಗೆ ಮೌಲ್ಯಾಧಾರಿತ ಸುದ್ದಿ ಇಂದಿನ ಅಗತ್ಯ. ಊಹಾ(ಕಲ್ಪಿತ) ಪತ್ರಿಕೋದ್ಯಮ ಅಪಾಯಕಾರಿ ಎಂದು ತಿಳಿಸಿದರು.

ಮಾಧ್ಯಮಗಳಾಗಲಿ, ಪತ್ರಕರ್ತರಾಗಲಿ ಮೌಢ್ಯವನ್ನು ಬಿತ್ತಬಾರದು, ನಾನು ಎಂದೂ ಮೌಢ್ಯವನ್ನು ಆಚರಿಸಿಲ್ಲ, ಚಾಮರಾಜನಗರಕ್ಕೆ ಹೋದರೂ, ನನ್ನ ಕಾರಿನ ಮೇಲೆ ಕಾಗೆ ಕೂತರು ನನ್ನ ಅಧಿಕಾರ ಗಟ್ಟಿಯಾಯಿತೆ ಹೊರತು, ಅಧಿಕಾರ ಹೋಗಲಿಲ್ಲ ಎಂದರು.

ವರದಿಗಾರಿಕೆ ವೃತ್ತಿಪರವಾಗಿದ್ದಾಗ ಅದು ಸಮಾಜದ ಪರವಾಗಿರುತ್ತದೆ. ಪತ್ರಿಕಾವೃತ್ತಿ ಉದ್ಯಮವಾದ ಕೂಡಲೇ ಅದ ಉದ್ದೇಶಗಳು ಬದಲಾಗುತ್ತವೆ. ವಸ್ತು ಸ್ಥಿತಿ ಜೊತೆಗೆ ಮೌಲ್ಯಧಾರಿತ ಸುದ್ದಿ ಇಂದಿನ ಅಗತ್ಯ ಊಹಾ ಪತ್ರಿಕೋದ್ಯಮ ಅಪಾಯಕಾರಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಸಂವಿಧಾನದ ಆಶಯಗಳನ್ನು ಈಡೇರಿಸುವುದೇ ಪತ್ರಿಕಾ ವೃತ್ತಿಯ ಕರ್ತವ್ಯ. ಈ ನಿಟ್ಟಿನಲ್ಲಿ ಪತ್ರಕರ್ತರು ಕೆಲಸ ಮಾಡಬೇಕು. ಧ್ವನಿ ಇಲ್ಲದವರ ಪರವಾಗಿ ವೃತ್ತಿ ಇದ್ದಾಗ ಸಮಾಜಕ್ಕೆ ಅನುಕೂಲ. ಸಮಾಜದಲ್ಲಿರುವ ಮೇಲು, ಕೆಳ ಜಾತಿಗಳ ನಡುವಿನ ತಾರತಮ್ಯ ಮತ್ತು ಅಸಮಾನತೆ ಕೊನೆಗಾಣಿಸುವ ದಿಕ್ಕಿನಲ್ಲಿ ಕರ್ತವ್ಯ ನಿರ್ವಹಿಸಬೇಕು. ಪತ್ರಿಕೆಗಳು ಜನರ ವಿಶ್ವಾಸರ್ಹತೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಈಗ ವೇದಿಕೆಯಲ್ಲಿ ಬಿಡುಗಡೆಯಾದ ನಿಮ್ಮದೇ ವಿಶೇಷ ಸಂಚಿಕೆ ನೀವೂ ಓದಿ. ಪತ್ರಕರ್ತರ ಕರ್ತವ್ಯ, ಸವಾಲುಗಳ ಪಟ್ಟಿ ಇದೆ. ಅದನ್ನು ಓದಿ, ಪಾಲಿಸಿ ಎಂದರು. ಜನ ಪತ್ರಕರ್ತರ ಮೇಲೆ ನಂಬಿಕೆ ಇಟ್ಟಿದ್ದಾರೆ. ಮೌಢ್ಯದ ಸುದ್ದಿ, ಚರ್ಚೆಗಳನ್ನು ನಡೆಸಿ ನೋಡುಗರ, ಓದುಗರ ದಾರಿ ತಪ್ಪಿಸಬೇಡಿ. ವರದಿಗಳು ಮೌಢ್ಯ, ಕಂದಾಚಾರಗಳಿಗೆ ಪ್ರೋತ್ಸಾಹ ನೀಡುವಂತಿರಬಾರದು. ವೈಚಾರಿಕತೆಯಿಂದ ಕೂಡಿರಬೇಕು ಹಾಗೂ ವಸ್ತುನಿಷ್ಠವಾಗಿರಬೇಕು. ಪತ್ರಕರ್ತರು ಸತ್ಯಶೋಧನೆ ಗುಣಧರ್ಮವನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ವಿಜ್ಞಾನ, ತಂತ್ರಜ್ಞಾನದ ವೇಗದಲ್ಲೇ ಪತ್ರಿಕೋದ್ಯಮವು ಬೆಳೆಯುತ್ತಿರುವುದು ಬರಹಗಾರರಿಗೆ ಅವಕಾಶಗಳು ಹೆಚ್ಚಾಗುತ್ತಿವೆಯಲ್ಲದೆ, ಸವಾಲುಗಳೂ ನಿರ್ಮಾಣವಾಗುತ್ತಿವೆ ಎಂದು ತಿಳಿಸಿದರಲ್ಲದೆ, ದೇಶದ ಪ್ರತಿಯೊಬ್ಬರೂ ಸಂವಿಧಾನ ಓದಬೇಕು. ಆಗ ಮಾತ್ರ ಹಕ್ಕು-ಕರ್ತವ್ಯಗಳ ಬಗ್ಗೆ ಅರಿವಾಗುತ್ತದೆ. ನಿಮ್ಮದು ಶಕ್ತಿಯುತ ಮಾಧ್ಯಮ. ಜನ ನಿಮ್ಮ ಕಡೆ ನೋಡ್ತಾ ಇದ್ದಾರೆ. ಈ ಎಚ್ಛರಿಕೆ ಸದಾ ಇರಲಿ ಎಂದರು.

ಕೆಲವೇ ದಿನದಲ್ಲಿ ಬಸ್ ಪಾಸ್

ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್ ಸದ್ಯದಲ್ಲೇ ನಿಮ್ಮ ಕೈ ಸೇರಲಿದೆ. ಪತ್ರಕರ್ತರ ಕುಟುಂಬಕ್ಕೆ ಆರೋಗ್ಯ ವಿಮೆ ನೀಡುವ ಬಗ್ಗೆ ತೀರ್ಮಾನ ಮಾಡಲಾಗುವುದು. ಪತ್ರಕರ್ತರ ಮಾಸಾಶನವನ್ನೂ 3,000 ರೂ.ಗಳಿಂದ 12,000 ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದರು.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಗೃಹ ಸಚಿವ ಜಿ.ಪರಮೇಶ್ವರ್, ಸಹಕಾರಿ ಸಚಿವ ಕೆ.ಎನ್.ರಾಜಣ್ಣ, ರಾಜ್ಯ ಸರಕಾರದ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸೇರಿ ಜಿಲ್ಲೆಯ ಶಾಸಕರುಗಳು ಹಾಗೂ ಹಲವು ಪ್ರಮುಖರು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಸಮ್ಮೇಳನದ ಆವರಣದಲ್ಲಿ ಆಯೋಜಿಸಿದ್ದ ಮಳಿಗೆಗಳನ್ನು ವೀಕ್ಷಿಸಿದ ಮುಖ್ಯಮಂತ್ರಿಗಳು ಮಹಿಳಾ ಸ್ವ ಸಹಾಯ ಸಂಘಗಳು ಸಿದ್ಧಪಡಿಸಿದ ತಿನಿಸುಗಳನ್ನು ಸವಿದರು.

ಸಮ್ಮೇಳನದಲ್ಲಿ ರಾಜ್ಯದ ಪತ್ರಕರ್ತ ಸಮುದಾಯದ ವೃತ್ತಿಪರ ಸಮಸ್ಯೆಗಳಿಗೆ ಅತ್ಯಂತ ಸಹೃದಯತೆಯಿಂದ ಸ್ಪಂದಿಸಿ, ಪರಿಹಾರ ಒದಗಿಸಿಕೊಡುತ್ತಿರುವುದರ ಜೊತೆಗೆ ಸಮ್ಮೇಳನದ ಯಶಸ್ಸಿಗೆ ಸಕಲ ರೀತಿಯಲ್ಲಿ ಸಂಪೂರ್ಣ ಸಹಕಾರ ನೀಡಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರಿಗೆ ಕಾರ್ಯನಿರತ ಪತ್ರಕರ್ತರ ಸಂಘದಿಂದ ವಿಶೇಷ ಅಭಿನಂದನೆ ಸಲ್ಲಿಸಲಾಯಿತು.

ಸಮ್ಮೇಳನದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಹಕಾರ ಸಚಿವ ಕೆ.ಎನ್.ರಾಜಣ್ಣ, ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಮಾಜಿ ಸಚಿವ ಜಯಚಂದ್ರ, ಶಾಸಕರುಗಳಾದ ಜ್ಯೋತಿ ಗಣೇಶ್, ಕರ್ನಾಟಕ ಸಾರಿಗೆ ಸಂಸ್ಥೆ ನಿಗಮದ ಅಧ್ಯಕ್ಷ ಎಸ್ ಆರ್ ಶ್ರೀನಿವಾಸ್, ಶಾಸಕ ಷಡಕ್ಷರಿ ಎಚ್ ವಿ ವೆಂಕಟೇಶ್ ವಿಧಾನಪರಿಷತ್ ಸದಸ್ಯರುಗಳಾದ ಆರ್ ರಾಜೇಂದ್ರ ಚಿದಾನಂದ್ ಎಂ ಗೌಡ ತುಮಕೂರು ಜಿಲ್ಲಾಧಿಕಾರಿಗಳಾದ ಶುಭ ಕಲ್ಯಾಣ, ಸಿ ಇ ಓ ಪ್ರಭು, ಎಸ್ ಪಿ ಕೆ ವಿ ಅಶೋಕ್, ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಅಧ್ಯಕ್ಷ ಬಿವಿ ಮಲ್ಲಿಕಾರ್ಜುನ್, ಮದನ್ ಗೌಡ , ತುಮಕೂರು ಜಿಲ್ಲಾಧ್ಯಕ್ಷ ಪುರುμÉೂೀತ್ತಮ್ ಪ್ರಧಾನ ಕಾರ್ಯದರ್ಶಿ ರಘುರಾಮ್ ಸೇರಿದಂತೆ ಕಾನಿಪ ಪದಾಧಿಕಾರಿಗಳು ವಿವಿಧ ಜಿಲ್ಲೆಯ ಪತ್ರಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *