ಹೃದಯವೇ ಇಲ್ಲದ Right Hearter …..

ಲೇ  ಬಾರಲೇ  ಒಳ್ಳೆ  ಡಾಕ್ಟರ್  ಹತ್ರಿಕ್ಕೆ  ಕರಕೊಂಡು  ಬಂದೆ, ನನಗೆ ಹೃದಯನೇ  ಇಲ್ವತ್ತೆ  ಕಣಲೇ, ಹೃ ದಯ  ಇಲ್ಲದ ಮೇಲೆ ಹ್ಯಂಗಯ್ಯ  ಮನುಷ್ಯ  ಬದುಕ್ತಾನೆ.

ಅವಯ್ಯ  ಎಂಬಿಬಿಎಸ್  ಓದಿ  ಬಂದಾವನೋ,  ಎಮ್ಮೆ  ಕಾಯ್ಕಂಡು  ಬಂದವನೋ  ಕೇಳಿಬೇಕಿತ್ತು  ಕಣಯ್ಯ, ಇಂತ  ಡಾಕ್ಟರ್ ಇರುತ್ತಾರೆ  ಅಂತ  ಗೊತ್ತಿಲ್ಲ  ಕಣಯ್ಯ, ಬಾರಯ್ಯ ಜನರಲ್  ಆಸ್ಪತ್ರೆಗೆ ಹೋಗಾನ, ಲೇ  ಜ್ವರ  ಜಾಸ್ತೀ  ಐತಲ್ಲೋ,  ಐತಪ್ಪ ಹೃದಯ  ಇಲ್ದೋನಿಗೆ  ಜ್ವರ  ಹ್ಯಂಗ್  ಬಂತು  ಅವಯ್ಯ  ಡಾಕ್ಟರನ್ನ  ಕೇಳನಾ  ಬಾರಯ್ಯ  ಅಂತ  ಮತ್ತೆ  ಪಕಾರನೇ  ನಕ್ಕ.

ಮೊದ್ಲು  ಆಸ್ಪತ್ರಾಗೆ  ತೋರಿಸ್ಕಾ  ಬಾ  ಅಮೇಲೆ  ಅವಯ್ಯನ  ಹತ್ತಿರ ಹೋಗಿ ಹೃದಯ ಅದಂಗಿಲ್ಲ ಅಂತ ಕೇಳಾನ ಅಂದೆ.

ನಡೀ ಹೋಗಾನ ಅಂತ ಸೈಕಲ್ ಏರಿದಾಗ ಕ್ಯಾರಿಯರ್ ಮೇಲೆ ಕೂತ ಅವನು ಲೇ ಹೃದಯ ಎಡಗಡೇನೆ ಅಲ್ವ ಇರೋದು, ಅಂತ ನಕ್ಕ, ನಾನು ಏದುಸಿರು ಬಿಟ್ಕಂಡು ಸೈಕಲ್ ತುಳಿತಿದ್ರೆ, ಇವನು ನಗ್ತಾ ಕುಂತಿದ್ದಾನೆ, ಸೈಕಲ್ ಪೆಡಲ್ ಸೌಂಡಿಗೆ ಅವನು ಮಾತಾಡಿದ್ದು ನನಗೆ, ನಾನು ಮಾತಾಡಿದ್ದು ಅವನಿಗೆ ಕೇಳಿಸದೇ ಬಿ.ಹೆಚ್.ರಸ್ತೆಯಲ್ಲಿ ಹೋಗ್ತಾ ಹೋಗ್ತಾ ಲೇ ನೀನು ಇದೇ ಫಸ್ಟ್ ಆಸ್ಪತ್ರೆಗೆ ಬಂದಿರೋದೆ ಅಂದೆ, ಆಟೋತ್ತಿಗೆ ಜನರಲ್ ಆಸ್ಪತ್ರೆ ಬಂತು.

ಒಂದು ಚೀಟಿ ತಗಂಡು ಡಾಕ್ಟರ್ ಹತ್ತಿರ ಹೋದ್ರೆ ಆ ಡಾಕ್ಟ್ರೋ ಆತನ ಎಡಗಡೆ ಸ್ಟೆಥ್ ಇಟ್ಟವನು ‘ಓ ಮೈ ಗಾಡ್’ ಅಂದವನೇ ಕಣ್ಣು ಮೇಲೆ-ಕೆಳಗೆ ಹಾರಿಸಿದ,  ಏನಪ್ಪ ನಿನ್ನ ಹೆಸರು ಅಂದ್ರು, ಇವನೋ ಮುಸಿ ಮುಸಿ ನಗುತ್ತಾ ಗೋಪಿ ಅಂತ ಸಾರ್, ಡಾಕ್ಟ್ರು ಯಾವಾಗಿಂದ ಜ್ವರ ನಿನ್ನೆಯಿಂದ ಸಾ ಅಂದ.

ಅಲ್ಲಿದ್ದ ಎಲ್ಲಾ ರೋಗಿಗಳನ್ನು ಹೊರಕ್ಕೆ ಕಳಿಸಿ ಬೆಡ್ ಮೇಲೆ ಮಲಕೋ ಅಂದ್ರು, ಹಾಗಂದವರೇ ಡಾಕ್ಟ್ರು ಗಾಬರಿ ಗಾಬರಿಯಿಂದ ತಮ್ಮ ಕೊಳ್ಳಲ್ಲಿದ್ದ ಸ್ಟೆಥ್ ತಮ್ಮ ಕೈಯಲ್ಲೊಮ್ಮೆ ಬಡಿದು ಶಬ್ದ ಬತ್ತದೋ ಇಲ್ಲವೋ ಅಂತ ಚೆಕ್ ಮಾಡಿಕೊಂಡರು.

ಬೆಡ್ ಮೇಲೆ ಮಲಗಿದ್ದ ಗೋಪಿಯ ಎದೆಯ ಭಾಗವನ್ನು ಸ್ಟೆಥ್ ಹಿಡಿದು ಎಲ್ಲಾ ಕಡೆ ಚೆಕ್ ಮಾಡಿ ಒಂದು ಕಡೆ ಸ್ಟೆಥ್ ಹಾಗೆ ಇಟ್ಟಕೊಂಡು ಡಾಕ್ಟರ್ ತಮ್ಮ ಕುಂಡಿ ಅಲ್ಲಾಡಿಸುತ್ತಾ, ‘ಓ ಮೈ ಗಾಡ್, ಇಟ್ ಇಸ್ ಮಿರಕಲ್’ ಅಂದು,  ಏನಯ್ಯ ನಿನಗೆ ಹೃದಯನೇ ಇಲ್ಲ ಅಂದು ನಕ್ಕರು.

ಬೆಡ್ ಮೇಲೆ ಮಲಗಿದ್ದ ಗೋಪಿ ಪಕಾರನೇ ನಕ್ಕು, ತಲೆ ಸವಾರಿಕೊಡು ‘ಏನ್ ಸಾ ನಿಜಕ್ಕೂ ಇಲ್ವ ಸಾರ್,’ ಇಲ್ಲ ಕಣಯ್ಯ ಅದ್ಕೆ ಅಲ್ವ ನಾನು ಇಷ್ಟೊಂದು ಗಾಬರಿಯಾಗಿ ನಿನ್ನ ತಪಾಸಣೆ ಮಾಡಿದ್ದು, ಡಾಕ್ಟ್ರು ಅಲ್ಲೇ ಇದ್ದ ನರ್ಸ್ ಕರೆದು, ಎಲ್ಲಾ ಡಾಕ್ಟರ್‍ಗಳನ್ನು ಕರಿಯಮ್ಮ ಒಂದು ಸ್ಪೆಷಲ್ ಕೇಸ್ ಬಂದಿದೆ, ಅವರೂ ಒಂದು ಸಲ ನೋಡಲಿ, ಇಂತಹ ಅದ್ಭುತ ಪ್ರಪಂಚದಲ್ಲಿ ನಡೆಯುತ್ತೆ ನಮ್ಮ ಡಾಕ್ಟರ್‍ಗಳಿಗೆ ಗೊತ್ತಿರಲಿ ಅಂದ್ರು.

ಇಡೀ ಆಸ್ಪತ್ರೆಯ ಡಾಕ್ಟರ್‍ಗಳು ಬಂದು ಒಂದು ಕಡೆ ಸೇರಿ ಇಂಗ್ಲೀಷ್‍ನಲ್ಲಿ ಮಾತನಾಡಿಕೊಂಡು ಗೋಪಿನಾ ತಪಾಸಣೆ ಮಾಡೋದು Yes Right Currect ಅನ್ನೂರು.

ನನಗೋ ಪೀಕಲಾಟಕ್ಕೆ ಇಟ್ಟಕೊಂತು, ಇವನಿಗೆ ಏನೋ ಭಯಂಕರ ಕಾಯಿಲೆಯಾಗಿ ಹೃದಯ ಬಡಿತಾನೇ ನಿಂತಿರಬೇಕು ಏನಪ್ಪ ಮಾಡೋದು ಅಂತಿರುವಾಗಲೇ ಎಲ್ಲಾ ಡಾಕ್ಟರ್‍ಗಳು ಒಮ್ಮೆ ಗೆಲುವು ಸಾಧಿಸಿದವರಂತೆ ಕೈ ಕುಲುಕಿಕೊಕೊಂಡು, ಗೋಪಿ ಹತ್ತಿರ ದೊಡ್ಡ ಡಾಕ್ಟರ್ ಹೋಗಿ ಏನಪ್ಪ ‘ಹೃದಯಾನೇ ಇಲ್ಲ,’ ಎಂತಹ ಅದ್ಭುತ ಮನುಷ್ಯನಯ್ಯ, ನೀನು ಸಿಕ್ಕಿದ್ದು ಇವತ್ತು ಮೆಡಿಕಲ್ ಟರ್ಮಿಗೆ ಹೊಸ ಆಯಾಮ ಸಿಕ್ತಪ್ಪ, ಈ ರೀತಿ ಆಗೋದು ಕೋಟಿಗೊಬ್ಬರಿಗೆ ಅಂತಂದ್ರು.

ಗೋಪಿ ಹೇಳಿ ಸಾರ್ ಹೃದಯನೇ ಇಲ್ಲದೇ ಹ್ಯಂಗೆ ಬದುಕೋದಕ್ಕೆ ಸಾಧ್ಯ ಫಲ್ಸ್ ನೋಡಿ ಹೇಗೆ ಹೊಡೆಯುತ್ತಾ ಇದೆ ಅಂತ ಕೈಯಲ್ಲಿನ ನಾಡಿ ಮಿಡಿತ ತೋರಿಸಿದ, ಡಾಕ್ಟರ್ ಫಕಾರನೇ ನಕ್ಕು, ಹೃದಯ ಇಲ್ಲ ಕಣಯ್ಯ ಎಡಗಡೆ, You are Right Hearter ಅಂತ ಕೈ ಕುಲುಕಿ, ನೀನು ಅದೃಷ್ಟವಂತ ಕಣಪ್ಪ, ನಿನಗೆ ಎಡಗಡೆ ಹೃದಯ ಇಲ್ಲ ಅಂತ ಮತ್ತೊಮ್ಮೆ ಎಲ್ಲಾ ಡಾಕ್ಟರ್ ನಕ್ಕರು.

ಅವನಿಗೆ ಇದೊಂದು ತರಹ ತಮಾಷೆ, ಒಂದು ತರಹ ಅಪಹಾಸ್ಯ ಮಾಡುತ್ತಿದ್ದಾರೆ ಅನ್ನಿಸಿತು, ಕೊನೆಗೆ ಮೊದಲು ಚೆಕ್ ಮಾಡಿದ ವೈದ್ಯರು ನಿನಗೆ ಎಡಗಡೆ ಹೃದಯ ಇಲ್ಲ, ಬಲಗಡೆ ಇದೆ ಕಣಯ್ಯ ಅಂತ ಹೇಳಿ ಖುಷಿ ಪಟ್ಟರು.

ಜ್ವರಕ್ಕೆ ಮಾತ್ರೆ ಇಂಜೆಕ್ಷನ್ ಕೊಟ್ಟು ನೀನು ಯಾವಾಗಲಾದರೂ ಬಾರಯ್ಯ ನಿನಗೆ ಉಚಿತ ಚಿಕಿತ್ಸೆ ಅಂತ ವೈದ್ಯರು ನಗುತ್ತಾ ಬೀಳ್ಕೊಟ್ಟರು, ನನಗೋ ಕುತೂಹಲ ತಡೆಯದೆ ಅವನು ಆಸ್ಪತ್ರೆಯಿಂದ ಹೊರಗೆ ಬಂದ ಕೂಡಲೇ ಅವನ ಎಡಗಡೆಗೆ ಕಿವಿಯಿಟ್ಟರೆ ಏನೂ ಶಬ್ದ ಬರಲಿಲ್ಲ, ಬಲಗಡೆಗೆ ಕಿವಿಯಿಟ್ಟಾಗ ಲಬ್-ಡಬ್ ಎಂಬ ಶಬ್ದ ಬಂದಿದ್ದರಿಂದ ನನಗೂ ಒಬ್ಬ ಹೃದಯವಿಲ್ಲದ Right Hearter ಇದ್ದಾನೆ ಅಂತ ಖುಷಿಯೋ ಖುಷಿ.

ರೂಂಗೆ ಬಂದ ಕೂಡಲೇ ಲೇ ನಿನ್ನ ನಾಳೆಯಿಂದ ನಾನು ಮಾತನಾಡಿಸಬೇಕು ಅಂದ್ರೆ ಹೃದಯ ಬಲಗಡೆ ಇರೋದನ್ನ ಯಾರಿಗೂ ಹೇಳ ಬೇಡ ಕಣಯ್ಯ, ತುಮಕೂರಾಗೆ ಇರೋ ಡಾಕ್ಟರ್‍ಗಳು,  ಸ್ನೇಹಿತರು ಚೆಕ್ ಮಾಡಲು ಬಂದ್ರೆ ನನ್ನ ಗತಿಯೇನಪ್ಪ ಅಂದ.

ನಾನು ಈ ವಿಷಯ ಎಲ್ಲಿ ಹೇಳಲಿಲ್ಲ, ಡ್ಯಾಗೇರಹಳ್ಳಿ ವಿರೂಪಾಕ್ಷ, ನಾನು, ಗೋಪಿ ಎಲ್ಲಾ ತುಮಕೂರಿನ ಸೈನ್ಸ್ ಕಾಲೇಜಿನ ಪಿಸಿಎಂಬಿಯ ಒಂದೇ ಸೆಕ್ಷನ್‍ನ ವಿದ್ಯಾರ್ಥಿಗಳು, ಅಕ್ಕಪಕ್ಕ ರೂಂನವರಾಗಿದ್ದೆವು. ಗೋಪಿಗೆ ಬಲಗಡೆ ಹೃದಯ ಇರೋದನ್ನ ವಿರೂಪಾಕ್ಷನಿಗೆ ಹೇಳಿದಾಗ ಹೌದೋನೋ ಮಾತನಾಡಿಸಿಕೊಂಡು ಬರಾನ ಬಾ ಅಂತ ಪಿ.ಹೆಚ್.ಕಾಲೋನಿಗೆ ಅವನ ರೂಂಗೆ ಹೋದಾಗ ಗೋಪಿ ಅನ್ನ ಮಾಡುತ್ತಿದ್ದ, ಈ ವಿರೂಪಾಕ್ಷ ಏನ್ಲಾ ನಿಂದು ಕತೆ, ಅಂತ ಕೇಳಿದ, ಗೋಪಿ ಏನ್ ಕತೆ ಅಂತ ಕೇಳಿದ ಅದೆನೋ ಇರೋ ಜಾಗದಾಗೆ ಇರದೆ ಬಲಗಡೆಗೆ ಬಂದೈತಂತೆ ಯಾಕ್ಲ ಅಂದ.

ಬಿದ್ದು ಬಿದ್ದು ನಕ್ಕ ಗೋಪಿ, ಲೇ ನನಗೆ ಜ್ವರ ಬಂದಿತಲ್ಲ, ನಾನು ಮಾತ್ರೆ ತಗಂಡು ಸುಮ್ಮನಾಗನಾ ಅಂದ್ರೆ ಇವನು ಆಸ್ಪತ್ರೆಗೆ ಕರಕೊಂಡು ಹೋದಾ ಕಣೋ ಅವನ್ಯಾವನೋ ಡಾಕ್ಟರ್ ಹೃದಯನೇ ಇಲ್ಲ ಅಂದ ಕಣೋ, ಜನರಲ್ ಆಸ್ಪತ್ರೆಗೆ ಹೋದ ಮ್ಯಾಗೇನೆ ಗೊತ್ತಾಗಿದ್ದು ಬಲಗಡಿಕ್ಕೆ ಐತೆ ಅಂತ ಮತ್ತೊಮ್ಮೆ ಪಕಾರನೇ ನಕ್ಕ.

ವಿರೂಪಾಕ್ಷ ಯಾವುದು ಯಕಡಿಕರಾ ಇರ್ಲಿ, ಅನ್ನ ಮಾಡಿದಿಯ ಉಣ್ಣಕ್ಕೆ ಇಕ್ಕು, ಬಾರಲೇ ಗೋಪಿ ಅನ್ನ ಮಾಡ್ವಾನೆ ಉಂಡು ಹೋಗಾನ ಅಂತ ಕೈ ತೊಳಕಂಡು ಕೂತೇ ಬಿಟ್ಟ. ಗೋಪಿ ಟೊಮಟೋ ಗೊಜ್ಜು, ಅನ್ನ ಬಡಿಸಿ ಅವನೂ ತಿಂದ. ತಿಂದಾದ ಮ್ಯಾಲೆ ಹೃದಯ ಹ್ಯಂಗಲಾ ಬಲಕ್ಕೆ ಬಂತು ಅಂತ ವಿವಿಧ ಮಗ್ಗುಲ ಚರ್ಚೆ ನಡೀತು.

ಹೌದು ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರ ಸಮೀಪದ ದೊಡ್ಡಬೀರನಹಳ್ಳಿಯ ಗೋಪಿನಾಥ.ಡಿ. ತುಂಬಾ ಬುದ್ದಿವಂತ, ದೇಶದ ಸಮಸ್ಯೆಗಳ ಬಗ್ಗೆ ತುಂಬಾ ಆಳವಾಗಿ ಅಧ್ಯಯನ ಮಾಡಿ, ತಿಳಿದು ಇದು ಈ ರೀತಿಯಲ್ಲ ಈ ರೀತಿ ಎಂದು ಹೇಳುತ್ತಿದ್ದ, ಎಲ್‍ಎಲ್‍ಬಿ ಮುಗಿಸಿದ ನಂತರ ಗೋಪಿ ತಮ್ಮೂರಿಗೆ ಹೋಗಿ ವ್ಯವಸಾಯವನ್ನು ಆಧುನಿಕ ರೀತಿಯಲ್ಲಿ ಮಾಡಿ ಯಶಸ್ಸನ್ನು ಕಂಡಿದ್ದಾನೆ.

ಆತನ ಆಧುನಿಕ ಕೃಷಿ ವಿಧಾನವನ್ನು ತಿಳಿಯಲು ನಾನು ಗೋಪಿ ಊರಿಗೆ ಹಲವಾರು ಸಲ ಭೇಟಿ ನೀಡಿದ್ದೇನೆ, Right Hearter ಗೋಪಿಯದು ಅದೇ ಕಲ್ಮಶವಿಲ್ಲದ ನಗು, ಏ ಬಾರಲೇ ಆ ವಕೀಲರಾಗಿದ್ರೆ ನಾನು ನಿಮಗೆಲ್ಲಾ ದಾಳಿಂಬ್ರೆ, ನಿಂಬು, ಪಪ್ಪಾಯ ಬೆಳೆದು ಕೊಡಲಾಗುತಿತ್ತೇ ಎಂದು ತಮ್ಮ ಸೆಡ್ಡಿನಲ್ಲಿರುವ ಕುರಿಗಳನ್ನು ತೋರಿಸಿ ನೋಡೋ ಇವುಗಳಿಗೆ 8 ಲಕ್ಷವಾಗಿದೆ, ಇವು ದೊಡ್ಡವಾದ್ರೆ ಒಂದು ಮೂವತ್ತು ಲಕ್ಷ ಸಿಗಬಹದು, ಕೋಳಿ ಫಾರಂ ಮಾಡಿದ್ದೆ ಕಣಯ್ಯ, ಅವುಗಳನ್ನು ನೋಡಿಕೊಳ್ಳೋರು ಸಿಗಲ್ಲ, ಕೋಳಿಗಿನ್ನ, ಕೋಳಿ ನೋಡಿಕೊಳ್ಳೋರನ್ನ ನಾನು ಸಾಕೋದು ಕಷ್ಟ ಕಣಯ್ಯ ಅದ್ಕೆ ಬಿಟ್ಟೆ ಅಂತ ಪಕಾರನೇ ನಗುವ ಗೋಪಿ, ನೀನು ವ್ಯವಸಾಯ ಮಾಡೋದಾರೆ ನೀರಾವರಿ ಇದ್ರೆ ಮಾಡು, ಬೋರ್ ಹಾಕ್ಸಿ ಮಾಡಬೇಡ ಅಂತ ಹೇಳುವ ಗೋಪಿ, ವ್ಯವಸಾಯ ಮಾಡಲು ದುಡ್ಡು, ತಾಳ್ಮೆ ಎರಡೂ ಇರಬೇಕು ಕಣಯ್ಯ ಅನ್ನುತ್ತಾನೆ.

Right Hearter ಎಷ್ಟು ಪ್ರಜ್ಞಾವಂತನೋ ಅಷ್ಟೇ ಸಮಾಜಮುಖಿಯುಳ್ಳ ವ್ಯಕ್ತಿ, ತನ್ನ ಗೆಳೆಯರಿರಬಹುದು, ಸಂಬಂಧಿಗಳಿರಬಹುದು ತಪ್ಪು ಮಾಡಿದಾಗ ಬಾರಲೇ ತಪ್ಪು ಮಾಡಿದೋನು ಅನುಭವಿಸ್ಕಂತಾನೆ ಅಂತ ನಮ್ಮನ್ನು ಇನ್ನೊಂದು ಮಗ್ಗುಲಿನ ಮಾತಿಗೆ ಎಳೆಯುವ ಗೋಪಿ ತುಂಬಾ ಒಳ್ಳೆಯ ಗೆಳೆಯ.

ಆತನಿಗೆ ಯಾವ ಆಧುನಿಕ ಸೋಂಕು ತಗುಲದೇ ತನ್ನದೇಯಾದ ಪ್ರಜ್ಞೆಯಲ್ಲಿ ಪೂರ್ಣಚಂದ್ರ ತೇಜಸ್ವಿಯಂತೆ ಹೊಸ ಹೊಸ ಕೃಷಿಗೆ ತನ್ನನ್ನು ತಾನು ಒಡ್ಡಿಕೊಳ್ಳುತ್ತಲೇ ಇರುತ್ತಾನೆ. ಆತನನ್ನು ನೋಡಿದಾಗ ಕ್ರೀಯಾಶೀಲತೆಗೆ ನಗುವಿರಬೇಕು Right Hearter ಆಗಿರಬೇಕೆಂದು, ಅಂದರೆ, ಒಳ್ಳೆಯ ಮನಸ್ಸಿನವರಾಗಿರಬೇಕು, ನಮ್ಮ ಸುತ್ತಲಿನ ಸಮಾಜಕ್ಕಿಂತ ನನ್ನ ಜೊತೆಗಿನ ಸಮಾಜದೊಳಿತನ್ನೇ ಬಯಸಬೇಕೆಂದು ಬಯಸುವ.

ಮೊನ್ನೆ ಭೇಟಿ ಮಾಡಿದ ನಂತರ ಹಾಸ್ಯಭರಿತ ಧಾಟಿಯಲ್ಲಿ ಈ ದೇಶದ ಸಮಸ್ಯೆ ಇರುವುದೇ ಇನ್ನೊಬ್ಬರನ್ನು ಮೇಲತ್ತದೆ ಇರುವುದು ಕಣಯ್ಯ, ವಿರೂಪಾಕ್ಷ ಇರಬಹುದು, ನೀನಿರಬಹುದು, ನಾನಿರಬಹುದು ನಮ್ಮ ಚಿಂತನೆಗಳು ತುಂಬಾ ಪ್ರಕರ ಆದರೆ ಇವು ಈಗ ಬೇಕಿಲ್ಲ, ಇತ್ತಿಚೆಗೆ ವೈಚಾರಿಕತೆ ಮಾತುಗಳು ಕುಡಿದಾಗ ಮಾತ್ರ ಬರೋದು, ಇಲ್ಲದಿದ್ದರೆ ಬರೋಲ್ಲ ಕಣಯ್ಯ, ಸಮಾಜವಾದಿಗಳು ಆದರ್ಶ ಪುರುಷರಾಗಿರಬೇಕು, ಕುಡಿದು ಆದರ್ಶ ಹೇಳಬಾರದು,  ನೋಡಿದ ಸಮಾಜ ಆ ರೀತಿ ಬದುಕಬೇಕು ಅಂತ ಇಷ್ಟ ಪಡಬೇಕು, ಅಂತಹ ಸಮಾಜವಾದಿಗಳು ಬರಬೇಕು ಕಣಯ್ಯ, ಸಮಾಜವಾದಿಗಳೇ ಕುಡಿತಾರೆ, ನಾವ್ಯಾಕೆ ಕುಡಿಯಬಾರದು ಅಂತಹ ಮೆಸ್ಸೇಜ್ ಪಾಸ್ ಆಗಬಾರದು ಕಣಯ್ಯ, ನಾನಂತೂ ಆ ನಿಟ್ಟಿನಲ್ಲಿ ಇರೋನು ಅಂತ ಮತ್ತೊಮ್ಮೆ ನಗುವ ಗೋಪಿ ಇಂದಿಗೂ Right Hearter ಆಗಿರೋದಕ್ಕೆ ಹೆಮ್ಮೆ.

      -ವೆಂಕಟಾಚಲ.ಹೆಚ್.ವಿ.

Leave a Reply

Your email address will not be published. Required fields are marked *