ತುಮಕೂರು : ತುಮಕೂರಿನಲ್ಲಿ ಇಂದು ಮಧ್ಯಾಹ್ನ ಮತ್ತು ಸಂಜೆ ಸುರಿದ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡು, ತಗ್ಗಿನ ಪ್ರದೇಶದ ಮನೆಗಳಿಗೆ ನೀರು ನುಗ್ಗಿತು.ಇಷ್ಟೆಲ್ಲಾ ಮಳೆ ಅವಾಂತರ ಸೃಷ್ಠಿಸಿದರೂ ಜನ ಪ್ರತಿನಿಧಿಗಳು, ಜಿಲ್ಲಾಡಳಿತ, ಅಧಿಕಾರಿಗಳು ದಸರಾದ ಹೋಮ-ಹವನದ ಜಾಲಿ ಮೂಡಿನಲ್ಲಿ ಕಾಲ ಕಳೆಯುತ್ತಿದ್ದನ್ನು ಕಂಡ ನಾಗರಿಕರು ಬೇಸರ ವ್ಯಕ್ತ ಪಡಿಸಿದ್ದಾರೆ.
ಇಂದು ಮಧ್ಯಾಹ್ನ ಧಾರಕಾರವಾಗಿ ಮಳೆ ಸುರಿದಿದ್ದರಿಂದ ನಗರದ ರಸ್ತೆಗಳೆಲ್ಲಾ ಕೆರೆಯಂತಾಗಿ ವಾಹನಗಳು ಮತ್ತು ಪಾದಚಾರಿಗಳು ಓಡಾಡಲು ಭಯ ಪಡುವಂತಾಯಿತು. ರಸ್ತೆಗಳಲ್ಲಿ ದೊಡ್ಡ ದೊಡ್ಡ ಹಳ್ಳವಾಗಿ ನೀರು ಹರಿಯುತ್ತಿದ್ದರಿಂದ ರಸ್ತೆ ಯಾವುದು, ಚರಂಡಿ ಯಾವುದು ಎಂಬುದೇ ತಿಳಿಯದಂತೆ ಕೋಡಿ ನೀರಿನಂತೆ ರಸ್ತೆಗಳಲ್ಲಿ ನೀರು ಹರಿಯುತ್ತಿತ್ತು.

ಸ್ಮಾರ್ಟ್ ಸಿಟಿ ರಸ್ತೆಯಾಗಿರುವ ಬಾರ್ಲೈನ್ ರಸ್ತೆಯು ಕೆರೆಯಂತಾಗಿದ್ದರಿಂದ ಜನರು ಭಯ-ಭೀತರಾಗಿ ಆ ರಸ್ತೆಗೆ ಇಳಿಯದೆ ಓಡಾಡುತ್ತಿದ್ದು ಕಂಡು ಬಂದಿತು.
ಪ್ರಮುಖ ರಸ್ತೆಗಳಾದ ಬಿ.ಹೆಚ್.ರಸ್ತೆ,ಎಂ.ಜಿ.ರಸ್ತೆ, ಆಶೋಕ ರಸ್ತೆ, ಕೋತಿತೋಪು ರಸ್ತೆಗಳು ನೀರಿನಿಂದ ಆವೃತ್ತವಾಗಿ ಕಾರುಗಳು ಮತ್ತು ದ್ವಿಚಕ್ರ ವಾಹನಗಳು ಅರ್ಧಕ್ಕೂ ಹೆಚ್ಚು ಮುಳುಗಡೆಯಾಗಿದ್ದು ಕಂಡು ಬಂದಿತು.
ಬಿರುಸಿನ ಮಳೆಯಿಂದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದರಿಂದ ಮನೆಯವರು ನೀರನ್ನು ಹೊರಕ್ಕೆ ಹಾಕಿದರೆ ಮತ್ತೊಂದು ಕಡೆ ನೀರು ಒಳಕ್ಕೆ ನುಗ್ಗುತ್ತಿದ್ದರಿಂದ ಮಹಿಳೆಯರು, ಮಕ್ಕಳು ಮನೆಯಲ್ಲಿ ಎಲ್ಲಿರಬೇಕು ಎನ್ನುವಂತಾಯಿತು. ಮನೆ ಸಾಮಾನುಗಳೆಲ್ಲಾ ನೀರು ಪಾಲಾಗಿದ್ದರಿಂದ ಮನೆ ಇದ್ದು ಮಳೆಯಲ್ಲಿ ಇದ್ದಂತಹ ಸ್ಥಿತಿ ನಿರ್ಮಾಣವಾಗಿತ್ತು.
ನಗರದಲ್ಲಿ ಇಷ್ಟೆಲ್ಲಾ ಮಳೆಯ ಅವಾಂತರಲ್ಲಿ ಮುಳುಗಿದ್ದರೂ ಜನಪ್ರತಿನಿಧೀಗಳು ಮತ್ತು ಜಿಲ್ಲಾಡಳಿತ ದಸರಾ ಸಂಭ್ರಮದಲ್ಲಿ ಹೋಮ-ಹವನ ಮಾಡಿಕೊಂಡು ಜಾಲಿ ಮೂಡಿನಲ್ಲಿದ್ದರು.

ಜನಪ್ರತಿನಿಧೀಗಳು ಮತ್ತು ಜಿಲ್ಲಾಡಳಿತ ದಸರಾ ಸಂಭ್ರಮದಲ್ಲಿ ಹೋಮ-ಹವನ ಮಾಡಿಕೊಂಡು ಜಾಲಿ ಮೂಡಿನಲ್ಲಿರುವುದು.
ಎಂ.ಜಿ. ರೋಡಿನ ಅಂಗಡಿ ಮಾಲೀಕರೊಬ್ಬರು ರೋಂನಲ್ಲಿ ಬೆಂಕಿ ಬಿದ್ದಾಗ ರಾಜ ಪಿಟೀಲು ಬಾರಿಸುತ್ತಿದ್ದನಂತೆ, ಸ್ಮಾರ್ಟ್ ಸಿಟಿ ರಸ್ತೆ ಅಂತ ಮಾಡಿ ಕೆರೆ ರಸ್ತೆ ಮಾಡಿದ್ದಾರೆ, ಇವರೆಲ್ಲಾ ದಸರಾ ಹಬ್ಬದಲ್ಲಿ ಖುಷಿಯಾಗಿದ್ದಾರೆ ನಾವು ಇಲ್ಲಿ ಜೀವ ಕೈಯಲ್ಲಿಡಿದುಕೊಂಡಿದ್ದೇವೆ ಎಂದು ಮಹಾ ಮಂಗಳಾರತಿ ಎತ್ತುತ್ತಿದ್ದರು.