ಕುಣಿಗಲ್ ಮೂಲಕ ಮಾಗಡಿ ತಾಲ್ಲೂಕಿಗೆ ಹೇಮಾವತಿ ಎಕ್ಸ್‍ಪ್ರೆಸ್ ಕೆನಾಲ್ ಮೂಲಕ ನೀರು ತೆಗೆದುಕೊಂಡು ಹೋಗುವ ಕಾಮಗಾರಿಗೆ ನನ್ನ ವಿರೋಧವಿದೆ. ಕುಡಿಯುವ ನೀರಿನ ಉದ್ದೇಶಕ್ಕಾಗಿ ತುಮಕೂರು ಜಿಲ್ಲೆಗೆ ನಿಗದಿಯಾಗಿರುವ ಹೇಮಾವತಿ ನೀರಿನ ಪ್ರಮಾಣ 24.08 ಟಿ.ಎಂ.ಸಿ.ಯಾಗಿದ್ದು. ಇಂದಿನ ವರೆಗೂ ನಮಗೆ ಸಿಗಬೇಕಾದ ಸಂಪೂರ್ಣ ಪಾಲು ಇಂದಿಗೂ ಸಹ ನಮ್ಮ ಜಿಲ್ಲೆಗೆ ಸಿಕ್ಕಿಲ್ಲ ಎಂಬ ಬೇಸರ ನಮಗೆ ಇದೆ.
2019 ರಲ್ಲಿ ಕುಣಿಗಲ್ ಮೂಲಕ ಮಾಗಡಿ ತಾಲ್ಲೂಕಿಗೆ ಹೇಮಾವತಿ ಎಕ್ಸ್‍ಪ್ರೆಸ್ ಕೆನಾಲ್ ಯೋಜನೆಯನ್ನು ಅಂದಿನ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ತಡೆ ನೀಡಿ, ಹೇಮಾವತಿ ನಾಲಾ ಆಧುನೀಕರಣ ಯೋಜನೆಗೆ ಟಿ.ಬಿ.ಸಿ. 0 ಕೀಮೀ ಯಿಂದ 70 ನೇ ಕೀಮಿ ವರೆಗೂ ಹಾಗೂ 71 ಕೀಮಿ ಯಿಂದ 165 ಕೀಮಿಯ ವರೆಗೂ ಸಾವಿರಾರು ಕೋಟಿ ಅನುದಾನವನ್ನು ಘೋಷಣೆ ಮಾಡಿದ್ದರು. ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರ ಅಧಿಕಾರದ ಅವಧಿಯಲ್ಲಿ ಹೇಮಾವತಿ ನಾಲಾ ಅಧುನಿಕರಣ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು. ಈ ಕಾಮಗಾರಿಯು ಭಾಗಶಃ ಪೂರ್ಣಗೊಂಡಿದೆ.
ಅದರೆ ಈ ಹೇಮಾವತಿ ನಾಲಾ ಅಧುನಿಕರಣ ಕಾಮಗಾರಿಯು ಪೂರ್ಣಗೊಳ್ಳುತ್ತಿರುವ ಸಮಯದಲ್ಲಿ ಅನವಶ್ಯಕವಾಗಿ ಸಾವಿರಾರು ಕೋಟಿ ವೆಚ್ಚದಲ್ಲಿ 34 ಕೀಮಿ ಉದ್ದದ ಎಕ್ಸ್‍ಪ್ರೆಸ್ ಕೆನಾಲ್ ಪೈಪ್ ಲೈನ್ ನನ್ನು ಮಾಡಲು ಹೊರಟಿರುವ ರಾಜ್ಯ ಸರ್ಕಾರದ ಉದ್ದೇಶವು ದುರುದ್ದೇಶದಿಂದ ಕೂಡಿದ್ದು, ಈ ಯೋಜನೆಯ ತುಮಕೂರು ಜಿಲ್ಲೆಯ ಸಾರ್ವಜನಿಕರಿಗೆ ಹಾಗೂ ರೈತರಿಗೆ ಮರಣ ಶಾಸನವಾಗಲಿದೆ.
ಯಾವುದೇ ಕಾರಣಕ್ಕೂ ಈ ಯೋಜನೆಯ ಕಾಮಗಾರಿಯನ್ನು ಕೈಗೊಳ್ಳಲು ನಾವು ಬಿಡುವುದಿಲ್ಲ. ತುಮಕೂರು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ, ಮಾಜಿ ಜನಪ್ರತಿನಿಧಿಗಳ ಹಾಗೂ ವಿವಿಧ ಸಂಘಟನೆಗಳ, ಹೋರಾಟಗಾರರ ಹಾಗೂ ನಾಗರೀಕ ವೇದಿಕೆಗಳ ಪಕ್ಷಾತೀತ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿರುತ್ತದೆ. ನಮಗೆ ಆಗುತ್ತಿರುವ ಅನ್ಯಾಯದ ವಿರುದ್ದ ಧ್ವನಿಯಾಗುವುದು ನಮ್ಮ ಕರ್ತವ್ಯವಾಗಿರುತ್ತದೆ. ಹೇಮಾವತಿ ಎಕ್ಸ್‍ಪ್ರೆಸ್ ಕೆನಾಲ್ ಯೋಜನೆಗೆ ನನ್ನ ವಿರೋಧವಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.