ತುಮಕೂರು, ರಾಜ್ಯ ಬಿಜೆಪಿಯಲ್ಲಿ ನಡೆದಿರುವ ಬೆಳವಣಿಗೆಗಳಿಂದ ಬೇಸರಗೊಂಡು ಪಕ್ಷದ ಚಟುವಟಿಕೆಯಿಂದ ದೂರ ಉಳಿದಿರುವ ಮಾಜಿ ಸಚಿವ ವಿ ಸೋಮಣ್ಣ ಅವರು, ಡಿ. 6 ರ ನಂತರ ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡಿ ತಮ್ಮ ಅಭಿಪ್ರಾಯ ತಿಳಿಸುವುದಾಗಿ ಇಂದಿಲ್ಲಿ ಹೇಳಿದರು.
ಡಿ. 7, 8 ಮತ್ತು 9 ರಂದು ಪಕ್ಷದ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ಅರವಿಂದ ಲಿಂಬಾವಳಿ, ರಮೇಶ್ ಜಾರಕಿಹೊಳಿ ರವರೊಂದಿಗೆ ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡಿ ತಮ್ಮ ಅಭಿಪ್ರಾಯ ಹೇಳಿಕೊಳ್ಳುತ್ತೇವೆ ಎಂದರು.
ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂ. ಡಾ. ಶ್ರೀ ಶಿವಕುಮಾರ ಸ್ವಾಮೀಜಿ ರವರ ಗದ್ದುಗೆ ದರ್ಶನ ಪಡೆದು ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ನಮ್ಮ ಪಕ್ಷದಲ್ಲಿಯಾರು ಅಸಮಾಧಾನಿತರಿಲ್ಲ. ನಮ್ಮದೇ ಆತಂಹ ಶಕ್ತಿ, ದೂರದೃಷ್ಟಿಯ ಚಿಂತನೆ ಇದೆ. ಹಾಗಾಗಿ ಡಿ. 7,8 ಮತ್ತು 9 ರಂದು ನಾವೆಲ್ಲರೂ ದೆಹಲಿಗೆ ಹೋಗಿ ಹೈಕಮಾಂಡ್ ಬಳಿ ನಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಹೇಳಿಕೊಳ್ಳಲು ನಿರ್ಧಾರ ಮಾಡಿದ್ದೇವೆ ಎಂದರು.
ಶ್ರೀ ಮಠದ ಆವರಣದಲ್ಲಿ ಗುರುಭವನ ನಿರ್ಮಾಣ ಮಾಡಲು ನಮ್ಮ ಕುಟುಂಬಕ್ಕೆ ಅವಕಾಶ ದೊರೆತಿದ್ದು, ಈ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ. ಡಿ. 6 ರಂದು ಗುರುಭವನ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದರು.
ಡಿ. 6 ರಂದು ಗುರುಭವನವನ್ನು ಉದ್ಘಾಟಿಸಿ ಶ್ರೀ ಮಠಕ್ಕೆ ಹಸ್ತಾಂತರ ಮಾಡಲಾಗುವುದು ಎಂದ ಅವರು, ಈ ಗುರು ಭವನ ನಿರ್ಮಾಣ ಮಾಡಲು ನಮ್ಮ ಕುಟುಂಬಕ್ಕೆ ಅವಕಾಶ ಸಿಕ್ಕಿರುವುದು ನಮ್ಮ ಪೂರ್ವಜನ್ಮದ ಪುಣ್ಯ ಎಂದರು.
ಗುರುಭವನ ಲೋಕಾರ್ಪಣೆ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರದ ಇಬ್ಬರು ಸಚಿವರು, ಸಂಸದರು, ಶಾಸಕರುಗಳು ಹಾಗೂ ವಿಧಾನಪರಿಷತ್ ಸದಸ್ಯರುಗಳು ಸೇರಿದಂತೆ ಪಕ್ಷಾತೀತವಾಗಿ ಎಲ್ಲರೂ ಭಾಗವಹಿಸಲಿದ್ದಾರೆ. ಈ ಪವಿತ್ರ ಕಾರ್ಯಕ್ರಮಕ್ಕೆ ರಾಜಕೀಯ ಲೇಪನ ಬೆರೆಸುವುದು ಬೇಡ ಎಂದರು.
ಇದೇ ಸಂದರ್ಭದಲ್ಲಿ ಸೋಮಣ್ಣ ಅವರು ಹಳೆಮಠದ ಪಕ್ಕದಲ್ಲಿ ನಿರ್ಮಿಸಲಾಗಿರುವ ಗುರುಭವನವನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಸಂಸದ ಜಿ.ಎಸ್. ಬಸವರಾಜು, ಶಾಸಕರಾದ ಜ್ಯೋತಿಗಣೇಶ್, ಅರುಣ್ ಸೋಮಣ್ಣ, ಶೈಲಜಾ ಸೋಮಣ್ಣ, , ಸಿ.ಎಂ. ರಾಜಪ್ಪ, ದಾಸೇಗೌಡ, ಬಿಬಿಎಂಪಿ ಮಾಜಿ ಕಾಪೆರ್Çೀರೇಟರ್ ಶ್ರೀಧರ್, ಪಾಲನೇತ್ರ, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ, ಬಾವಿಕಟ್ಟೆ ನಾಗಣ್ಣ, ಶಿವಪ್ರಸಾದ್, ಸಿದ್ಧಗಂಗಾ ಆಸ್ಪತ್ರೆಯ ಡಾ. ಪರಮೇಶ್ವರ್, ಆರ್. ಬಸವರಾಜು, ಗ್ಯಾಸ್ ಬಾಬು, ಪ್ರಕಾಶ್ ಅ ಮತ್ತಿತರರು ಉಪಸ್ಥಿತರಿದ್ದರು.