ಇತಿಹಾಸ ಪ್ರಸಿದ್ದ ಗೂಳೂರು ಗಣಪತಿ ಪ್ರತಿಷ್ಠಾಪನೆ-ಒಂದು ತಿಂಗಳ ಕಾಲ ದರ್ಶನ

ತುಮಕೂರು- ಇತಿಹಾಸ ಪ್ರಸಿದ್ದ ಗೂಳೂರು ಮಹಾ ಗಣಪತಿ ಮೂರ್ತಿಯನ್ನು ಬಲಿಪಾಢ್ಯಮಿಯಂದು 18 ಕೋಮಿನ ಜನರು ಸೇರಿ ವಿವಿಧ ಧಾರ್ಮಿಕ ವಿಧಿ ವಿಧಾನ ಹಾಗೂ ಸಂಪ್ರದಾಯದೊಂದಿಗೆ ಪ್ರತಿಷ್ಠಾಪಿಸಿ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಒಂದು ತಿಂಗಳ ಕಾಲ ಇತಿಹಾಸ ಪ್ರಸಿದ್ದ ಗಣೇಶಮೂರ್ತಿಯ ದರ್ಶನ ಪಡೆಯಬಹುದು.

ಪ್ರತಿ ವರ್ಷದಂತೆ ಈ ವರ್ಷವೂ ಬಲಿಪಾಡ್ಯಮಿ ದಿನದಂದು ಗಣೇಶಮೂರ್ತಿಗೆ ವಿಶೇಷ ಪೂಜೆಯೊಂದಿಗೆ ಕಣ್ಣುಧಾರಣೆ ಮಾಡಲಾಯಿತು.

ನಿನ್ನೆಯಿಂದ ಆರಂಭವಾಗಿರುವ ಗಣೇಶಮೂರ್ತಿಯ ವಿಶೇಷ ಪೂಜಾ ಕೈಂಕರ್ಯ ಇನ್ನು ಒಂದು ತಿಂಗಳ ಕಾಲ ಪ್ರತಿನಿತ್ಯ ನೆರವೇರಲಿದೆ.

ಈ ಬೃಹತ್ ಗಣೇಶ ಮೂರ್ತಿಗೆ ವಿಶೇಷ ಐತಿಹ್ಯವಿದ್ದು, 1 ತಿಂಗಳ ಕಾಲ ಗ್ರಾಮದ ಪ್ರತಿಯೊಂದು ಮನೆಯವರು ನಿತ್ಯ ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಕ್ತಿ ಸಮರ್ಪಿಸುವರು.

ಪ್ರತಿದಿನ ರಾತ್ರಿ 9 ಗಂಟೆಗೆ ಮಹಾಮಂಗಳಾರತಿ ನಡೆಯಲಿದೆ. 18 ಕೋಮಿನವರು ಗೂಳೂರು ಗಣಪನಿಗೆ ವಿವಿಧ ಸೇವೆ ಸಲ್ಲಿಸಲಿದ್ದಾರೆ.

ಗಣೇಶ ಚೌತಿ ಸಂದರ್ಭದ ಬದಲು ಕಾರ್ತಿಕ ಮಾಸದಲ್ಲಿ ಗೂಳೂರಿನಲ್ಲಿ ಗಣೇಶ ಉತ್ಸವ ನಡೆಯುವುದು ವಿಶೇಷವೆನಿಸಿದೆ. ಗಣೇಶ ಚೌತಿಯಂದು ಗಣೇಶಮೂರ್ತಿ ನಿರ್ಮಾಣ ಆರಂಭವಾಗಲಿದ್ದು, ಆಯುಧಪೂಜೆ, ವಿಜಯದಶಮಿ ಹೊತ್ತಿಗೆ ಮೂರ್ತಿ ಒಂದು ಆಕಾರಕ್ಕೆ ಬರಲಿದ್ದು, ಆ ಸಂದರ್ಭದಲ್ಲಿ ಅದರ ನಾಬಿಯೊಳಗೆ ಚಿಕ್ಕಗಣಪತಿ ಕೂರಿಸಲಾಗುವುದು. ಕಾರ್ತಿಕ ಪಾಡ್ಯ ಪ್ರಾರಂಭವಾಗುವ ವೇಳೆಗೆ ಸರ್ವಾಲಂಕಾರಭೂಷಿತನಾಗಿ ರೂಪುಗೊಂಡು ಬಲಿಪಾಢ್ಯಮಿಯಿಂದ ಭಕ್ತರಿಗೆ ದರ್ಶನ ಭಾಗ್ಯ ಪ್ರಾಪ್ತಿಯಾಗುತ್ತಿದೆ.

ಎರಡು ದಿನ ಜಾತ್ರೆ

ಬಲಿಪಾಢ್ಯಮಿ ದಿನದಿಂದ ಹಿಡಿದು ಡಿ. 7 ಮತ್ತು 8 ರ ವರೆಗೆ ಭಕ್ತರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿನಿತ್ಯ ಪೂಜಾ ಕೈಂಕರ್ಯಗಳು ನೆರವೇರಲಿದ್ದು, ಸುಗಮ ಸಂಗೀತ, ಪೌರಾಣಿಕ ನಾಟಕ ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮಗಳು ನೆರವೇರಲಿವೆ ಎಂದು ಗೂಳೂರು ಶ್ರೀ ಮಹಾಗಣಪತಿ ಭಕ್ತ ಮಂಡಳಿ ಅಧ್ಯಕ್ಷ ಹಾಗೂ ಜಿ.ಪಂ. ಮಾಜಿ ಸದಸ್ಯ ಜಿ.ಎಸ್. ಶಿವಕುಮಾರ್ ಹಾಗೂ ದೇವಾಲಯದ ಅರ್ಚಕರಾದ ಶಿವಕುಮಾರ ಶಾಸ್ತ್ರಿಗಳು ತಿಳಿಸಿದರು.

ಡಿ. 7 ಮತ್ತು 8 ರಂದು ಗಣೇಶ ಜಾತ್ರೆ ನಡೆಯಲಿದ್ದು, ಊರಿನ ಎಲ್ಲ ಕೋಮಿನವರು ಸೇರಿ ಜಾತ್ರಾ ಮಹೋತ್ಸವವನ್ನು ನೆರವೇರಿಸಲಿದ್ದಾರೆ. ಈ ವರ್ಷವೂ ಸಹ ಗೂಳೂರು ಕೆರೆ ಭರ್ತಿಯಾಗಿದ್ದು, ಅತ್ಯಾಕರ್ಷಕ ಸಿಡಿಮದ್ದಿನ ಪ್ರದರ್ಶನದೊಂದಿಗೆ ಡಿ. 8 ರಂದು ರಾತ್ರಿ ಗಣೇಶಮೂರ್ತಿಯ ವಿಸರ್ಜನಾ ಮಹೋತ್ಸವ ನಡೆಯಲಿದೆ ಎಂದರು.

ಡಿ. 7 ರಂದು ರಾತ್ರಿ 18 ಕೋಮಿನ ಜನರ ಸಮ್ಮುಖದಲ್ಲಿ ಗಣೇಶಮೂರ್ತಿಯನ್ನು ದೇವಾಲಯದಿಂದ ಹೊರ ತಂದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಸಲಾಗುವುದು. ಡಿ. 8 ರಂದು ಸಂಜೆ 5 ಗಂಟೆಯ ನಂತರ ಗೂಳೂರು ಕೆರೆಯಲ್ಲಿ ವೈಭವಯುತವಾಗಿ ವಿಸರ್ಜಿಸಲಾಗುವುದು ಎಂದು ಅವರು ಹೇಳಿದರು.

ಒಂದು ತಿಂಗಳ ಕಾಲ ಗಣೇಶ ಮೂರ್ತಿಯ ದರ್ಶನೋತ್ಸವಕ್ಕೆ ಜಿಲ್ಲೆ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ಭಕ್ತಾದಿಗಳು ಬರುತ್ತಾರೆ ಎಂದು ಅವರು ತಿಳಿಸಿದರು.

Leave a Reply

Your email address will not be published. Required fields are marked *