ಈಗ ದೇಶದಲ್ಲಿ ರಾಮ ಭಜನೆ ತುಂಬಾ ಜೋರಾಗಿ ನಡೆಯುತ್ತಾ ಇದೆ, ರಾಮನ ನೆನೆಯುವಾಗ ನನಗೆ ನೆನಪಾಗುವುದು ಎರಡು ಚಿತ್ರಗಳು, ನಮ್ಮ ಮನೆಯಲ್ಲಿದ್ದ ರಾಮ, ಸೀತೆ ಮತ್ತು ಲಕ್ಷ್ಮಣ ಬಿಲ್ಲು ಬಾಣ ಹಿಡಿದು ಸೌಮ್ಯದಿಂದ ಕೆಳಗೆ ಕೈಮುಗಿದು ಕುಳಿತಿರುವ ಆಂಜನೇಯನಿಗೆ ಆಶೀರ್ವದಿಸುತ್ತಿರುವ ಚಿತ್ರ, ಮತ್ತೊಂದು ಮಹಾತ್ಮ ಗಾಂಧಿಯವರು ಹಾಡುತ್ತಿದ್ದ ಪತೀತ ಪಾವನ ಸೀತಾರಾಮ ಈ ಎರಡೂ ಸಹ ನಾನು ಚಿಕ್ಕವನಿರುವಾಗಿನಿಂದಲೂ ನೋಡುತ್ತಾ, ಕೇಳುತ್ತಾ ಬಂದಿದ್ದೇನೆ.
ಈ ಎರಡರಲ್ಲಿಯೂ ಯಾವ ದ್ವೇಷವಾಲಿ, ಈರ್ಸೆಯಾಗಲಿ ನನಗೆ ಎಳ್ಳಷ್ಟು ಕಾಣಿಸುವುದಿಲ್ಲ, ನನಗೂ ರಾಮನ ಮೇಲೆ ಭಕ್ತಿ ಬರುತ್ತೆ, ಭಕ್ತಿಯಿಂದ ಕೈ ಮುಗಿಯುತ್ತೇನೆ. ಆ ಹಿನ್ನಲೆಯಲ್ಲಿಯೇ ನಮ್ಮೂರ ರಾಮಮಂದಿರದಲ್ಲಿ ನಡೆಯುತ್ತಿದ್ದ ರಾಮನವಮಿಗೆ ನನ್ನಲಿದ್ದ ಒಂದೋ, ಎರಡೋ ರೂಪಾಯಿ ಕೊಟ್ಟು ರಾಮ ನವಮಿಯ ದಿನ ನಮ್ಮೂರ ರಾಮಮಂದಿರಕ್ಕೆ ಹೋಗಿ ಕೈ ಮುಗಿದು ಅಲ್ಲಿ ಕೊಡುತ್ತಿದ್ದ ಫಲ್ಲಾರ, ಪಾನಕ ಕುಡಿದು, ರಾಮನವಮಿಯ ಪಾನಕ ಚೆನ್ನಾಗಿದೆ ಇನ್ನೊಂದು ಲೋಟ ಹಾಕು ಎಂದು ಬೆಲ್ಲದ ಪಾನಕ ಕುಡಿದು ಡರನೇ ತೇಗಿಕೊಂಡು ಮನೆಕಡೆ ಬಂದರೆ ಮನೆಯವರು ರಾಮ ಮಂದಿರಕ್ಕೆ ಹೋಗಿ ಪಾನಕ, ಫಲ್ಲಾರ ಇಸ್ಕೊಂಡ ಅಂತಿದ್ದರು, ಇದು ನಮ್ಮೂರ ರಾಮ, ಅವನಿಗೆ ಇಂದಿಗೂ ಅದೇ ಹಳೇ ಗೋಡೆಯ ಮುರಕಲು ದೇವಸ್ಥಾನ, ಪಾಮರ ಪೂಜಾರಿ ಒಂದೆರಡು ಹೂ ಇಟ್ಟು ಊದುಬತ್ತಿ ಹಚ್ಚಿ, ಕರ್ಪೂರ ಇದ್ದರೆ ಹಚ್ಚಿದರಾಯಿತು, ಇಲ್ಲದಿದ್ದರೆ ಹತ್ತಿ ದೀಪದ ಆರತಿ ಎತ್ತಿ ರಾಮ ರಾಮ ಎಂದು ಕೈ ಮುಗಿದರೆ ಅಲ್ಲಿಗೆ ಆ ದಿನದ ರಾಮನ ಕಥೆ ಮುಗಿಯಿತು, ದೇವಸ್ಥಾನದ ಹಳೇ ಬಾಗಿಲನ್ನು ಹಾಕಿದರೂ ಒಂದೇ, ಬಿಟ್ಟರೂ ಒಂದೇ ನೆಪ ಮಾತ್ರಕ್ಕೆ ಮುಚ್ಚುವುದಷ್ಟೇ ಅಷ್ಟು ಬಡ ದೇವರು ನಮ್ಮೂರ ರಾಮ.
ಇನ್ನ ಗಾಂಧಿಯವರು ಹೇಳುತ್ತಿದ್ದ ಪತೀತ ಪಾವನ ಸೀತಾರಾಮ ಎಂಬುದರ ಬಗ್ಗೆ ಹೇಳುವುದಾದರೆ ಗಾಂಧಿಯವರು ರಾಮನ ಪರಮ ಭಕ್ತರು, ಅವರಿಗೆ ಗುಂಡು ಹೊಡೆದಾತನಿಗೂ ರಾಮನು ಒಳ್ಳೆಯದು ಮಾಡು ಎಂದು, ಹರೇ ರಾಮ ಹರೇ ರಾಮ ಎಂದು ಪ್ರಾಣ ಬಿಟ್ಟರು. ಪತೀತ ಪಾವನ ಸೀತಾರಾಮ ಎಂದರೇನು? ರಾಮನು ತನ್ನ ಪವಿತ್ರವಾದ ಹೆಂಡತಿ ಸೀತೆಯನ್ನು ಪಡೆಯಲು ಹತ್ತಾರು ಜನರ ಸಹಾಯ ಪಡೆದು ಅವರ ಸುಖ-ದುಃಖಗಳನ್ನು ಆಲಿಸಿ ಉದಾಹರಣೆಗೆ ಆಂಜನೇಯ, ವಾಲಿ, ಜಟಾಯು ಮುಂತಾದವರನ್ನು ಸಂತೈಯಿಸಿ ರಾವಣನೊಡನೆ ಯುದ್ಧ ಮಾಡಿ ಸೀತೆಯನ್ನು ಪಡೆದ ರಾಮ ಪತಿಯಾಗಿ ಪವಿತ್ರನಾದವನು, ತನ್ನ ಹೆಂಡತಿಗಾಗಿ ಪವಿತ್ರ ಕೆಲಸವನ್ನು ಮಾಡಿದವನು ಎಂದುಕೊಂಡು ಮಹಾತ್ಮ ಗಾಂಧೀಜಿಯವರು ಪತೀತ ಪಾವನ ಸೀತಾರಾಮ ಎಂದು ಪ್ರಾರ್ಥನೆಯನ್ನು ಅವರ ಹೆಂಡತಿ ಕಸ್ತುರಬಾ ಕುರಿತು ಪ್ರಾರ್ಥಿಸುತ್ತಿದ್ದರು, ರಾಮನಂತೆ ನಾನೂ ಕೂಡ ಏಕ ಪತ್ನಿಯ ವ್ರತಸ್ಥನಾಗಿ ಪವಿತ್ರನಾಗಿರಬೇಕು ಎಂಬುದು ಇದರ ಅರ್ಥ.
ಹೌದು ನಮಗೆ ನಮ್ಮೂರ ದೇವಸ್ಥಾನದ ರಾಮನೇ ಬೇಕಿರುವುದು, ಏಕೆಂದರೆ ಅವನು ನಮಗೆ ಸುಲಭವಾಗಿ ಸಿಗಬಲ್ಲ, ನಮ್ಮ ಕಷ್ಟಸುಖಗಳನ್ನು ಕೇಳಬಲ್ಲ, ಮಳೆ, ಬೆಳೆ ಆಗದೆ ಇದ್ದಾಗ ಬೈಯುವ ಅಧಿಕಾರ ರಾಮ ನಮಗೆ ಕೊಟ್ಟಿದ್ದಾನೆ, ಯಾಕೆಂದರೆ ಅವನು ಜನಕನ ರಾಮ ಅಥವಾ ಜನರ ರಾಮ, ಇಂತಹ ರಾಮ ಯಾರದೋ ಒಂದು ಲಾಲಸೆಗೆ ಸಿಕ್ಕಿ ಈಗ ಅಯ್ಯೋಧ್ಯೆಯ ರಾಮನಾಗಿ ಬಿಟ್ಟಿದ್ದಾನೆ.
ಅಯ್ಯೋಧ್ಯೆಯ ರಾಮನಾಗುವುದನ್ನು ನಾನು ಬೇಡ ಅನ್ನುವುದಿಲ್ಲ, ಅವನ ಮಂದಿರ ಕಟ್ಟಿ ಪೂಜಿಸುವುದನ್ನೂ ಬೇಡ ಅನ್ನುವುದಿಲ್ಲ, ಆದರೆ ರಾಮಮಂದಿರ ಕಟ್ಟುವವರಿಗೆ, ರಾಮನನ್ನು ಪೂಜಿಸುವವರಿಗೆ ರಾಮನ ಶಾಂತ ಸ್ವಭಾವ, ರಾಮನು ತನ್ನ ಜನಗಳನ್ನು ರಕ್ಷಿಸಿದಂತೆ, ಕಾಪಾಡುವಂತಹ ಮನಸ್ಸು ಮತ್ತು ಪ್ರೀತಿ, ಕರುಣೆ ಯಾರಲ್ಲಿದೆ ಎಂಬುದೇ ಈಗ ಎದ್ದಿರುವ ಪ್ರಶ್ನೆ.
ರಾಮ ಮಂದಿರಕ್ಕಾಗಿ ಅರ್ಧಶತಮಾನವನ್ನು ಎಲ್ಲಾ ಪಕ್ಷಗಳೂ ರಾಜಕೀಯಕ್ಕಾಗಿ ಬಳಸಿಕೊಂಡಿರುವುದು ಎಷ್ಟು ಸರಿ, ರಾಮನ ಹೆಸರಲ್ಲಿ ಮಾರಣ ಹೋಮ, ರಕ್ತ ಹರಿದದ್ದು ಯಾರಿಗಾಗಿ, ರಾಮ ಮಂದಿರ ಎಲ್ಲಾ ಊರುಗಳಲ್ಲಿದ್ದರೂ ಅಯ್ಯೋಧ್ಯೆಯ ರಾಮ ಮಂದಿರಕ್ಕಾಗಿ ಪವಿತ್ರ ಇಟ್ಟಿಗೆಯ ಹೆಸರಲ್ಲಿ ರಕ್ತದೋಕುಳಿ ಹರಿಸಿ ರಾಜಕೀಯವನ್ನು ಮಾಡುವ ರಾಜಕೀಯ ಪಕ್ಷಗಳಿಗೆ ಸೀತೆಯ ರಾಮನಾಗಲಿ, ಚಿತ್ರದಲ್ಲಿ ಆಂಜನೇಯನಿಗೆ ಆಶೀರ್ವದಿಸುತ್ತಿರುವ ರಾಮನಾಗಲಿ ಅರ್ಥವಾಗಿದ್ದಾನೆಯೇ, ಅಷ್ಟಕ್ಕೂ ಈಗಿನ ರಾಮ ಯಾವ ಅವತಾರದಲ್ಲಿ ಅವತಾರ ಪುರುಷನಾಗಿದ್ದಾನೆ ಎಂಬುದ ಸಹ ಬಹಳ ಮುಖ್ಯ.
ತಂದೆಯ ಪರಿಪಾಲಕನಾದ ರಾಮ ಎಂದೂ ಸಹ ನಿರುಪಜೀವಿಗಳಿಗೆ ಬಾಣ ಎತ್ತಿದವನಲ್ಲ ಎಂದು ವಾಲ್ಮಿಕಿ ರಾಮಯಾಣದಲ್ಲಿ ಬರೆಯಲಾಗಿದೆ, ರಾಮ ಜನರ ರಾಮನೇ ಹೊರತು ಜನರಿಂದ ಸೃಷ್ಠಿಯಾದ ರಾಮನಲ್ಲ, 90ರ ದಶಕದಲ್ಲಿ ರಾಮಮಂದಿರಕ್ಕಾಗಿ ರಥ ಎಳೆದ ಎಲ್.ಕೆ.ಅಡ್ವಾನಿ, ಮುರಳೀಮನೋಹರ ಜೋಷಿ ಇನ್ನೂ ಅನೇಕರಿರಬಹುದು, ಅವರ ಅನಿಸಿಕೆಗಳೇನಿತ್ತು, ಅವರಿಗೆ ಅಯ್ಯೋಧ್ಯೆಯಲ್ಲಿ ಯಾವ ರಾಮ ಬೇಕಿತ್ತು ಅನ್ನುವ ಸೌಜ್ಯನ್ಯಕ್ಕಾದರೂ ಅವರನ್ನು ಇದುವರೆವಿಗೂ ತಾಳ್ಮೆಯಿಂದ ಯಾಕೆ ಕೇಳಲಿಲ್ಲ.
ಅಡ್ವಾಣಿಯವರಿಗೆ ನಿಜವಾದ ರಾಮ ಬೇಕಿತ್ತೋ ಅಥವಾ ರಾಜಕೀಯಕ್ಕಾಗಿ ರಾಮ ಬೇಕಿತ್ತೋ ಎಂಬುದು ಸಹ ಬಹುಮುಖ್ಯವಲ್ಲವೆ? ಈ ಪ್ರಶ್ನೆಯನ್ನು ಏಕೆ ಎತ್ತಿದ್ದೇನೆ ಎಂದರೆ ದಿನಾಂಕ:5-01-2024ರಂದು ತುಮಕೂರಿನ ನನ್ನ ಹಿರಿಯ ಗೆಳೆಯರೊಬ್ಬರು ರಾಮಮಂದಿರ ಉದ್ಘಾಟನೆಯಾಗುತ್ತಿರುವುದಕ್ಕೆ ಈ ಕಿರಿಯ ಗೆಳೆಯನಿಗೆ ಅಯ್ಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರದ ಮಂತ್ರಾಕ್ಷತೆ, ಅಯ್ಯೋಧ್ಯೆಯ ರಾಮಮಂದಿರದ ಪೋಟೋ ಮತ್ತು ರಾಮಮಂದಿರ ಉದ್ಘಾಟನೆಯ ದಿನ ರಾಮನ ಭಕ್ತರು ಏನು ಮಾಡಬೇಕೆಂಬ ವಿವರಣೆ ಮತ್ತು ಪರಿಚಯದ ಕರಪತ್ರವನ್ನು ಕೊಟ್ಟು ತಬ್ಬಿಕೊಂಡು ಅಂದು ಸಂಜೆಗೆ ಪ್ರತಿ ಮನೆಯಲ್ಲೂ ದೀಪ ಹಚ್ಚೋಣ ಎಂದರು.
ನಾನು ಆಯಿತು, ಬನ್ನಿ ಕೂತುಕೊಳ್ಳಿ ಎಂದು ಕೂರಿಸಿ, ಕೊನೆಯ ಪಕ್ಷ ರಾಮಮಂದಿರ ನಿರ್ಮಾಣಕ್ಕೆ ತಮ್ಮ ಜೀವನ ಸವೆಸಿದ, ರಾಜಕೀಯ ಸ್ಥಾನಮಾನ ಸಿಗದೆ ಮೂಲೆಗುಂಪಾಗಿರುವ ಅಡ್ವಾಣಿಯಿಂದ ರಾಮ ಮಂದಿರ ಉದ್ಘಾಟನೆ ಮಾಡಿಸಿದ್ದರೆ ಚೆನ್ನಾಗಿರಲಿಲ್ಲವೆ ಎಂದು ಮಾತಿಗೆಳೆದಾಗ ರಾಜಕೀಯದ ಮಜಲುಗಳನ್ನು ಒಂದೊಂದೇ ಬಿಚ್ಚಿಟ್ಟರು, ಕೊನೆಗೆ ನಮಗೆ ರಾಮ ಬೇಕು ಸಾರ್, ರಾಜಕೀಯ ಬೇಡ ಅಂದರು.
ಹಾಗಾದರೆ ರಾಮನ ಹೆಸರಿನಲ್ಲಿ ನಡೆದ ಹಿಂಸಾಚಾರ, ರಕ್ತಪಾತ ಮರೆಯುವಂತಹವುದೇ, ನಮ್ಮ ಶಾಂತವಾಗಿರುವ ರಾಮ ಇದಕ್ಕೆ ಉತ್ತರಿಸಬಹುದೇ, ಅಯ್ಯೋಧ್ಯೆಯಲ್ಲಿ ಕೆಳ ಹಂತದ ಕಟ್ಟಡ ಮಾತ್ರ ನಿರ್ಮಾಣವಾಗಿರುವುದನ್ನು ತರಾತುರಿಯಲ್ಲಿ ಉದ್ಘಾಟನೆ ಮಾಡುತ್ತಿರುವುದು ಯಾವ ರಾಮನಿಗಾಗಿ, ರಾಮಮಂದಿರ ಪೂರ್ಣಗೊಂಡ ಮೇಲೆ ಯಾವುದೇ ರಾಜಕೀಯವವಿಲ್ಲದೆ ಎಲ್ಲರನ್ನೂ ಒಳಗೊಂಡು ಉದ್ಘಾಟನೆಯಾಗಿದ್ದರೆ ಎಷ್ಟು ಚೆನ್ನ ಇರುತಿತ್ತು, ರಾಮನೂ ನಗುತ್ತಾ ಎಲ್ಲರನ್ನೂ ಆಂಜನೇಯನನ್ನು ಅಪ್ಪಿಕೊಂಡಂತೆ ಅಪ್ಪಿಕೊಳ್ಳುತ್ತಿರಲಿಲ್ಲವೇ?
ಈಗ ಅಯೋಧ್ಯೆಯಲ್ಲಿ ರಾಮಂದಿರ ಉದ್ಘಾಟನೆಯಾದ ಮೇಲೆ ರಾಮನವಮಿಯಂದು ಪಾನಕ ಫಲ್ಲಾರ ಹಂಚುತ್ತಿದ್ದ ನಮ್ಮೂರ ರಾಮಮಂದಿರ, ರಾಮದೇವರ ಬೆಟ್ಟ, ರಾಮನು ಬಾಣ ಬಿಟ್ಟು ನೀರು ತರಿಸಿದ ನಾಮದ ಚಿಲುಮೆ ಇವುಗಳ ಗತಿಯೇನು, ಇವು ಅಭಿವೃದ್ಧಿ ಕಾಣುವುದು ಬೇಡವೇ, ಇವು ಜನರ ಹೃದಯದ ಮಂದಿರಗಳಲ್ಲವೇ? ಪವಿತ್ರ ರಾಮ ಅಯ್ಯೋಧ್ಯೆಯಲ್ಲಿದ್ದರೂ ಒಂದೇ,ರಾಮದೇವರ ಬೆಟ್ಟದಲ್ಲಿದ್ದರೂ ಒಂದೇ, ಗಾಂಧಿಯ ಪತೀತ ಪಾವನ ಸೀತಾರಾಮದಲ್ಲಿದ್ದರೂ ಒಂದೇ, ನಮ್ಮ ಮನೆಯ ಪಟದಲ್ಲಿರುವ ರಾಮನೂ ಒಂದೇ ಅಲ್ಲವೇ. ರಾಮ ರಾಮ ರಾಮನಲ್ಲವೇ. ರಾಮನ ಬಿಟ್ಟು ಸೀತೆಯುಂಟೆ, ಇವರಿಬ್ಬರನ್ನು ಬಿಟ್ಟು ಲಕ್ಷ್ಮಣ ಉಂಟೇ, ಈ ಮೂವರನ್ನೂ ಬಿಟ್ಟು ಆಂಜನೇಯ ಉಂಟೇ ಇವರನ್ನೆಲ್ಲಾ ಬಿಟ್ಟು ಭಾರತದ ಜನ ಇರಲುಂಟೆ, ಯಾಕೆಂದರೆ ಅವರವರ ಹೃದಯದ ರಾಮ ಅವರವರಲ್ಲೇ ಇದ್ದಾನಲ್ಲ, ಪವಿತ್ರ ರಾಮ.
ಈಗ ರಾಮ ಮಂದಿರ ಕಟ್ಟಿದ್ದೇವೆ ದೇಶದ ಎಲ್ಲಾರಿಗೂ ಮನೆ ಎಂಬ ಮಂದಿರ ಇದೆಯೇ, ಮನೆ ಎಂಬ ಮಂದಿರ ಇಲ್ಲದೆ ರಾಮನಿಗೆ ಎಲ್ಲಿ ನಿಂತು ಕೈ ಮುಗಿಯಬೇಕು, 14 ವರ್ಷ ರಾಮ ಯಾರಿಗಾಗಿ ವನವಾಸ ಮಾಡಿದ್ದು, ತನ್ನ ನಂಬಿದ ಜನರ ಮಾತಿಗೆ, ಅಂದರೆ ಅವರಿಗೆ ಜನ್ಮ ಕೊಟ್ಟ ತಾಯಿ ಮಾತಿಗಾಗಿ ಕಾಡಿಗೆ ಹೋದ, ತಂದೆಯ-ತಾಯಿಯ ಮಾತಿನ ಪರಿಪಾಲಕನಿಗೆ ಮಂದಿರ ಕಟ್ಟಿರುವಾಗ, ದಿನಾ ರಾಮನನ್ನು ಧ್ಯಾನಿಸುವ ಭಾರತ ದೇಶದ ರಾಮನ ಮಕ್ಕಳಿಗೆ ಮನೆ ಎಂಬ ಮಂದಿರ ಬೇಕಲ್ಲವೇ? ಅಯ್ಯೋಧ್ಯೆಯಲ್ಲಿ ರಾಮನಿಗೆ ಮನೆ ಕಟ್ಟಿದ ಮೇಲಾದರೂ ಈ ದೇಶದ ಮತದಾರ ರಾಮನಿಗೆ ಮನೆ ಎಂಬ ಮಂದಿರ ಸಿಗುತ್ತದೆ ಎಂದು ರಾಮನಲ್ಲಿ ಕೈ ಮುಗಿದು ಪ್ರಾರ್ಥಿಸೋಣ, ಗಾಳಿಯಿರಬಹುದು, ಬೆಳಕಿರಬಹುದು, ಮಳೆಯಿರಬಹುದು ಇವುಗಳಿಂದ ನಮ್ಮನ್ನು ರಕ್ಷಿಸಲು ನಮಗೊಂದು ಮನೆಯೆಂಬ ಮಂದಿರ ಕೊಡು ನಮ್ಮೂರ ರಾಮ, ಶ್ರೀರಾಮ.
-ವೆಂಕಟಾಚಲ.ಹೆಚ್.ವಿ.
ರಾಮನ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆ ಬಹಳ ಸತ್ಯ ವಾಗಿದೆ
ನಿಮಗೆ ಅನಿಸಿದ ಹಾಗೆ ನನಗೂ ಕೂಡ ರಾಮ ಆದರ್ಶ ಪುರುಷ ಎಂದೇ ಭಾಸವುಗುತ್ತದೆ…
ರಾಮನಿಗೊಂದು ಮಂದಿರ ನಿರ್ಮಾಣ ಸಲುವಾಗಿ ಕೋಟಿ ಹಣ ಕರ್ಚು ಮಾಡುವಷ್ಟು ಸಲೀಸಾಗಿ ಬಡಬಗ್ಗರಿಗೆ ದೀನ ದಲಿತರಿಗೆ ಅವಶ್ಯ ಇರುವುದನ್ನು ಏಕೆ ಮಾಡಲಾಗುತ್ತಿಲ್ಲ???
ರಾಮನ ಕಥೆ ಹೇಳಿ ಕೇಳಿ ಗಾಂಧಿ ಮನುಷ್ಯ ಮಹತ್ಮನಾದ.
ರಾಮಾಯಣ ಟಿವಿ serial ನೋಡಲು ತುಂಬಾ ಪ್ರೀತಿಯಿಂದ ಹೋಗುತಿದ್ದ ನಾವೂ ಅ ರಾಮನ ಕಥೆ ನೋಡಿ ಸರ್ವಜನಾಂಗದ ರಕ್ಷಣೆ ಮಾಡುವ ಭರವಸೆಯ ಬೆಳಕು ಅ ನಮ್ಮ ರಾಮ …. ಈ ಬಿಜೆಪಿಯ ರಸ್ತೆ ಉದ್ದಕ್ಕೂ ರಕ್ತಸ್ರಾವದ ರಾಮನಿಗೂ ನಮ್ಮಾ ರಾಮನಿಗೂ ಸಂಭಂದ ಇಲ್ಲಾ. ಬೇಕಾದರೆ DNA test ಮಾಡಿಸಿ ನೋಡಿ.. ಜೈ ಭೀಮ್ ಜೈ ಭಾರತ್ ಜೈ ಕರ್ನಾಟಕ
ತಾಜುದ್ದೀನ್ ಷರೀಫ್, ತುಮಕೂರು.