ಬಿಜೆಪಿಗೆ ಸವಾಲಾಕಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್

ತುಮಕೂರು : ನಾವು ಮುದ್ದಹನುಮೇಗೌಡರನ್ನು ಈ ಬಾರಿ ಲೋಕಸಭೆಗೆ ಕಳಿಸೇ ಕಳಿಸುತ್ತೇವೆ ಈ ಸವಾಲನ್ನು ಬಿಜೆಪಿಯವರು ಸ್ವೀಕರಿಸುತ್ತಾರಾ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸವಾಲಾಕಿದರು.

ಅವರಿಂದು ತುಮಕೂರಿನ ಸ್ಟಾರ್ ಕನ್ವೆಷನ್ ಹಾಲ್ ನಲ್ಲಿ ಏರ್ಪಡಿಸಿದ್ದ ತುಮಕೂರು ನಗರ ಬ್ಲಾಕ್ 1,2ರ ಕಾರ್ಯಕರ್ತರ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಮಾತನಾಡುತ್ತಿದ್ದರು.

ಕೆ.ಎನ್.ರಾಜಣ್ಣ, ಎಸ್.ಆರ್.ಶ್ರೀನಿವಾಸ್, ಹೆಚ್.ವಿ.ವೆಂಕಟೇಶ್, ನಾನು ಸೇರಿದಂತೆ 7ಜನ ಶಾಸಕರು, ಷಫಿಅಹ್ಮದ್, ರಫೀಕ್ ಅಹ್ಮದ್, ಇಕ್ಬಾಲ್ ಅಹ್ಮದ್ ಸೇರಿದಂತೆ ಅನೇಕರಿದ್ದೂ ಕಾಂಗ್ರೆಸ್ ಅಭ್ಯರ್ಥಿ ಸೋತರೆ ಮುಖ ಇಟ್ಟುಕೊಂಡು ಓಡಾಡಲು ಆಗುತ್ತೇನ್ರಿ, ಇಷ್ಟೆಲ್ಲಾ ಜನ ಇರುವಾಗ ನಾವೇಕೆ ಸೋಲಬೇಕು, ನಾವು ಮುದ್ದಹನುಮೇಗೌಡರನ್ನು ಲೋಕಸಭೆಗೆ ಕಳಿಸೇ ಕಳಿಸುತ್ತೇವೆ ಈ ಸವಾಲನ್ನು ಬಿಜೆಪಿಯವರು ಸ್ವೀಕರಿಸಲಿ ಎಂದು ಹೇಳಿದರು.

ಹಾಲಿ ಸಂಸದರಾದ ಜಿ.ಎಸ್.ಬಸವರಾಜುರವರಿಗೆ ಇಲ್ಲೆಲ್ಲಾ ಗೆಳೆಯರಿದ್ದಾರೆ, ಷಫೀಅಹ್ಮದ್, ಕೆ.ಎನ್.ರಾಜಣ್ಣ ಅವರೆಲ್ಲಾ ಗೆಳೆಯರು, ಅವರೆಲ್ಲಾ ಸಂಸದರ ಮನೆಗೆ ಊಟಕ್ಕೆ ಹೋಗ್ತಾರೆ, ಷಫೀಅಹ್ಮದ್‍ರವರಿಗೆ ಬೆಳಗಿನ ಜಾವ 5ಕ್ಕೆ ಪೋನ್ ಬರುತ್ತದೆ, ಚುನಾವಣೆ ಮುಗಿಯುವ ತನಕ ಪೋನ್ ಕಟ್ ಮಾಡಿ ಬಿಡಿ, ಚುನಾವಣೆ ಮುಗಿದ ನಂತರ ಊಟಕ್ಕೆ ಹೋಗಿ ಎಂದು ಮಾರ್ಮಿಕವಾಗಿ ಹೇಳಿದರು.

ಈ ಸಂದರ್ಭದಲ್ಲಿ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ನಿಮಗೆ ಸ್ನೇತರಲ್ಲವೇ ಎಂದು ಪರಮೇಶ್ವರ್ ಅವರನ್ನು ಛೇಡಿಸಿದಾಗ, ಈಗಿಲ್ಲ ಮೊದಲಿದ್ದರು ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.

ಕೊಬ್ಬರಿ ಬೆಲೆ ಕುಸಿದು ಎಂಟು ಸಾವಿರಕ್ಕೆ ಇಳಿದಿದೆ, ಹದಿನೆಂಟು ಸಾವಿರವಿದ್ದ ಕೊಬ್ಬರಿ ಬೆಲೆ ಹೀಗೆ ಕುಸಿದರೆ ಯಾವ ರೈತ ತೆಂಗಿನ ತೋಟ ಇಟ್ಟು ಕೊಳ್ಳುವುದಕ್ಕೆ ಸಾಧ್ಯ, ಜಿಲ್ಲೆಯ ತೆಂಗು ಬೆಳೆಗಾರರು ಮೇಲೇಳಾಗದಂತಹ ಪರಿಸ್ಥಿತಿ ಇದ್ದರೂ ಒಂದು ದಿನವೂ ಈ ಬಗ್ಗೆ ಸಂಸತ್ತಿನಲ್ಲಿ ಈಗಿನ ಸಂಸದರು ಮಾತನಾಡಲಿಲ್ಲ ಎಂದು ಹೇಳಿದರು.

ಕಾಂತರಾಜು ವರದಿ ಜಾರಿಗೆ ಕೆಲವರು ಅಡ್ಡಿ ಪಡಿಸುತ್ತಿದ್ದಾರೆ, ಹಾಗಾದರೆ ಇನ್ನು ಎಷ್ಟು ದಿನ ಅಲ್ಪ ಸಂಖ್ಯಾತರು, ಹಿಂದುಳಿದವರು, ದಲಿತರು ಬಡರಾಗಿಯೇ ಇರಬೇಕು, ವರದಿ ಜಾರಿಗೆ ಎಲ್ಲಾರು ಮುಂದಾಗಬೇಕೆಂದರು.

ಸಭೆಯಲ್ಲಿ ಸಹಕಾರ ಸಚಿವ ಕೆ.ಎನ್.ರಾಜಣ್ಣ, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿದರು.

ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ, ಮಾಜಿ ಶಾಸಕರುಗಳಾದ ಎಸ್.ಷಫೀಅಹ್ಮದ್, ಡಾ.ರಫಿಕ್ ಅಹ್ಮದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಮುರುಳೀಧರ ಹಾಲಪ್ಪ, ನಿಖೇತರಾಜ್ ಮೌರ್ಯ , ಇಕ್ಬಾಲ್ ಅಹ್ಮದ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *