ಆಸ್ಪತ್ರೆಗಳು NQAS ಪ್ರಮಾಣೀಕರಣ ಪಡೆಯದಿದ್ದಲ್ಲಿ ಕ್ರಮ

ತುಮಕೂರು : ಜಿಲ್ಲಾಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸೇರಿದಂತೆ ಜಿಲ್ಲೆಯಲ್ಲಿರುವ ಎಲ್ಲಾ ತಾಲೂಕು ಸಾರ್ವಜನಿಕ ಆಸ್ಪತ್ರೆಗಳು ಸೆಪ್ಟೆಂಬರ್ ಮಾಹೆಯ ಅಂತ್ಯದೊಳಗಾಗಿ ರಾಷ್ಟ್ರೀಯ ಗುಣಮಟ್ಟ ಭರವಸೆ (NQAS – National Quality Assurance Standards) ಪ್ರಮಾಣೀಕರಣ ಹೊಂದಿರಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿಂದು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲಾಸ್ಪತ್ರೆಯು 2000 ರಿಂದ ಈವರೆಗೂ NQAS ಪ್ರಮಾಣೀಕರಣ ಹೊಂದಿರುವುದಿಲ್ಲ. ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಡೆಂಗ್ಯೂ ಪ್ರಕರಣಗಳನ್ನು ನಿಯಂತ್ರಿಸಲು ಜಿಲ್ಲೆಯಲ್ಲಿರುವ ಎಲ್ಲ ಆಸ್ಪತ್ರೆಗಳು NQAS ಪ್ರಮಾಣೀಕರಣ ಹೊಂದಿರುವುದು ಕಡ್ಡಾಯ. ಇತ್ತೀಚೆಗೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭದಲ್ಲಿ ಸೊಳ್ಳೆಗಳಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ರೋಗಿಗಳ ಆರೋಗ್ಯ ಹಿತ ದೃಷ್ಟಿಯಿಂದ NQAS ಪ್ರಮಾಣೀಕರಣ ಹೊಂದುವುದು ಅಗತ್ಯವೆಂದು ತಿಳಿಸಿದರು.

ಸಾರ್ವಜನಿಕ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ರಾಷ್ಟ್ರೀಯ ಗುಣಮಟ್ಟ ಭರವಸೆ ಮಾನದಂಡಗಳನ್ನು ಪಾಲಿಸಬೇಕು. ನ್ಯೂನ್ಯತೆಗಳಿದ್ದಲ್ಲಿ ಕೂಡಲೇ ಸರಿಪಡಿಸಲು ಕ್ರಮಕೈಗೊಂಡು ವರದಿ ನೀಡಬೇಕು. ಆಸ್ಪತ್ರೆಯಲ್ಲಿರುವ ವೈದ್ಯಕೀಯ ಸಲಕರಣೆಗಳು ಸುಸ್ಥಿತಿಯಲ್ಲಿರಬೇಕು. ಅನುದಾನ ಲಭ್ಯವಿಲ್ಲವೆಂದು ಯಾವುದೇ ಆಸ್ಪತ್ರೆಗಳಿಂದ ನೆಪ ಕೇಳಿ ಬಂದರೆ ಹಿಂದಿನ ವರ್ಷಗಳ ಖರ್ಚು-ವೆಚ್ಚಗಳನ್ನು ತನಿಖೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *