ಹುಳಿಯಾರು: ಮುರಳೀಧರ ಹಾಲಪ್ಪಗೆ ಲೋಕಸಭೆ ಟಿಕೆಟ್ ನೀಡಲು ಕಾರ್ಯಕರ್ತರ ಒತ್ತಾಯ

ಹುಳಿಯಾರು: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಮುರುಳಿಧರ ಹಾಲಪ್ಪ ಅವರಿಗೆ ಟಿಕೆಟ್ ನೀಡಬೇಕು ಎಂದು ಹುಳಿಯಾರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಒತ್ತಾಯಿಸಿದ್ದಾರೆ.

ಹುಳಿಯಾರು ಪರಿವೀಕ್ಷಣಾ ಮಂದಿರದಲ್ಲಿ ನೂರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಸುದ್ಧಿಗೋಷ್ಠಿ ನಡೆಸಿ ಜಿಲ್ಲೆಯಲ್ಲಿ ಜಾತಿಧರ್ಮದ ತಾರತಮ್ಯ ಮಾಡದೆ ಬಡವಬಲಿದ ಎಂದು ಭೇದ ತೋರದೆ ಎಲ್ಲರ ಕಷ್ಟಕಾರ್ಪಣ್ಯಗಳಿಗೆ ಸ್ಪಂಧಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಿರುವ ಮುರುಳಿಧರ ಹಾಲಪ್ಪಗೆ ಟಿಕೆಟ್ ನೀಡಿದರೆ ಗೆಲುವು ಸುಲಭಸಾಧ್ಯ ಎಂದು ಹೇಳಿದರು.

ರಾಜ್ಯ ಸೇವಾದಳ ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ ಮಾತನಾಡಿ ಹಾಲಪ್ಪನವರು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ತಮ್ಮ ಟ್ರಸ್ಟ್ ಮೂಲಕ ರೈತ ಪರ ಕಾರ್ಯಕ್ರಮ ಸಂಘಟಿಸಿದ್ದಾರೆ. ಕಷ್ಟ ಎಂದು ಬಂದವರಿಗೆ ಕೈಲಾದ ಸಹಾಯ ಮಾಡಿದ್ದಾರೆ. ಪೊಲೀಸ್ ಅಧಿಕಾರಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಕಾರ್ಯಕರ್ತರ ಕೆಲಸ ಮಾಡಿಸಿಕೊಟ್ಟಿದ್ದಾರೆ. ಇಂತಹ ಸ್ಪಂಧಿಸುವ ಗುಣಉಳ್ಳವರಿಗೆ ಮೊದಲ ಆದತ್ಯೆಯಲ್ಲಿ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕು ಸೇವಾದಳದ ಅಧ್ಯಕ್ಷ ಗೋವಿಂದರಾಜು ಅವರು ಮಾತನಾಡಿ ಉತ್ತುಬಿತ್ತಿದವರನ್ನು ಬಿಟ್ಟು ಬೇರೆಯವರು ಫಲ ಕೀಳಲು ಬಿಡುವುದು ಒಳ್ಳೆಯದಲ್ಲ. ಜಿಲ್ಲೆಯ ಮತದಾರರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಮಾಡಿ ಟಿಕೆಟ್ ಕೊಡಬೇಕು. ಯಾವುದೇ ಅಧಿಕಾರ ಇಲ್ಲದಿದ್ದರೂ ಸಹ ಸ್ಪಂಧಿಸುವ ಗುಣವುಳ್ಳ ಯುವಕ ಹಾಲಪ್ಪಗೆ ಟಿಕೆಟ್ ನೀಡಿ ಗೆಲ್ಲಿಸಿದರೆ ರಾಜ್ಯದಲ್ಲೇ ತುಮಕೂರನು ಮಾಧರಿ ಕ್ಷೇತ್ರವನ್ನಾಗಿ ಮಾಡುತ್ತಾರೆ ಎಂದರು. 

ಕುಂಚಿಟಿಗರ ಸಂಘದ ಉಪಾಧ್ಯಕ್ಷ ಪ್ರಕಾಶ್ ಮಾತನಾಡಿ ಕೌಶಲ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅನೇಕ ನಿರುದ್ಯೋಗಿಗಳಿಗೆ ನೆರವಾಗಿ ರಾಜ್ಯಾಧ್ಯಂತ ಮನೆಮಾತಾಗಿದ್ದಾರೆ. ನಂತರದ ದಿನಗಳಲ್ಲೂ ಜಿಲ್ಲೆಯಾಧ್ಯಂತ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಿ ಪಕ್ಷ ಸಂಘಟಿಸಿದ್ದಾರೆ. ಅಲ್ಲದೆ ಮಧುಗಿರಿ, ಕೊರಟಗೆರೆ, ಚಿಕ್ಕನಾಯಕನಹಳ್ಳಿ, ಗುಬ್ಬಿ, ತುಮಕೂರಿನಲ್ಲಿ ಕುಂಚಿಟಿಗರ ಮತಗಳು ಹೆಚ್ಚಾಗಿದ್ದು ಮುರುಳಿಧರ ಹಾಲಪ್ಪಗೆ ಟಿಕೆಟ್ ನೀಡಿದರೆ ಗೆಲುವು ನಿಶ್ವಿತ ಎಂದರು.

ಪಿಎಲ್‌ಡಿ ಬ್ಯಾಂಕು ಮಾಜಿ ಅಧ್ಯಕ್ಷ ಲಿಂಗಣ್ಣ ಮಾತನಾಡಿ ಹಾಲಪ್ಪ ಅವರು ಪಕ್ಷದಿಂದ ಪಕ್ಷಕ್ಕೆ ಅಧಿಕಾರಕ್ಕಾಗಿ ಜಿಗಿಯುವವರಲ್ಲ, ಬೇರೆ ಪಕ್ಷದ ಅಭ್ಯರ್ಥಿಗಳ ಪರ ಮತ ಹಾಕಿಸಿದವರಲ್ಲ, ಪಕ್ಷದ ಶಿಸ್ತಿನ ಸಿಪಾಯಿಯ ತರ ಎಲ್ಲಾ ಚುನಾವಣೆಯಲ್ಲೂ ಎಲ್ಲಾ ಕ್ಷೇತ್ರದಲ್ಲೂ ಗೆಲುವಿಗೆ ಶ್ರಮಿಸಿದ್ದಾರೆ. ಸಾಮಾನ್ಯ ಜನರೂ ಸಹ ನೇರವಾಗಿ ಅವರನ್ನು ಮಾತನಾಡಿಸಿ ಸಹಾಯ ಪಡೆಯಬಹುದಾಗಿದೆ. ದೂರವಾಣಿಯಲ್ಲೇ ಸಮಸ್ಯೆ ಹೇಳಿಕೊಂಡು ಪರಿಹರಿಸಿಕೊಂಡವರು ಸಾಕಷ್ಟು ಮಂದಿ ಇದ್ದಾರೆ. ಇಂತಹ ಸೇವಾಗುಣವುಳ್ಳವರಿಗೆ ಟಿಕೆಟ್ ನೀಡಿದರೆ ಚುನಾವಣೆಯಲ್ಲಿ ಓಡಾಡಲು ಕಾರ್ಯಕರ್ತರಿಗೆ ಹುಮ್ಮಸ್ಸು ಇರುತ್ತದೆ ಎಂದರು. ಕಿರಣ್ ಕುಮಾರ್ ಜಿಲ್ಲಾ ಸೇವಾದಳ ಅಧ್ಯಕ್ಷ, ಸುಂದರ ಮೂರ್ತಿ, ಕಾರ್ಮಿಕ ಘಟಕ ತಾಲ್ಲೂಕು ಅಧ್ಯಕ್ಷ ಓಂಕಾರ್ ಮೂರ್ತಿ, ಕೃಷಿಕ ಸಮಾಜದ ತಿಮ್ಮಯ್ಯ, ಮಲ್ಲೇಶಯ್ಯ, ತಾ.ಪಂ ಮಾಜಿ ಅಧ್ಯಕ್ಷರು ಶಾರದಗೌಡರು, ಮುಖಂಡರುಗಳಾದ ರಾಜಣ್ಣ ಟಿ,ಪ್ರಮೀಳಮ್ಮ, ಪುಷ್ಪಲತಾ, ದಯಾನಂದ್, ರಂಗಸ್ವಾಮಯ್ಯ, ಪ್ರಸನ್ನಕುಮಾರ್, ಪುನೀತ್ ಹಾಗೂ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *