ಜಾತಿ ಕಟ್ಟಳೆಗಳಾಚೆಗಿನ ಮನುಷ್ಯ ಪ್ರೀತಿಯೇ ದೊಡ್ಡದು: ಕವಯಿತ್ರಿ ಮಲ್ಲಿಕಾ ಬಸವರಾಜು

ತುಮಕೂರು: ಅಂತರ್ಜಾತಿ ವಿವಾಹ ಮನುಷ್ಯರು ಸೃಷ್ಟಿಸಿಕೊಂಡಿರುವ ಅನೇಕ ತಾರತಮ್ಯದ ಗೋಡೆಗಳನ್ನು ಒಡೆದು ಸಮಸಮಾಜವನ್ನು ನಿರ್ಮಿಸುವ ಒಂದು ಮಹತ್ವದ ದಾರಿಯಾಗಿದೆ. ಶಿಕ್ಷಣವೂ ಇಂತಹದ್ದೇ ಮಹತ್ವದ ದಾರಿ. ಒಲವಿನ ಅಥವಾ ಅಂತರ್ಜಾತಿ ವಿವಾಹಗಳು ಜಾತಿಯ ಕಟ್ಟಳೆಗಳನ್ನು ಒಡೆಯುವ ಪ್ರಯತ್ನ ಮಾಡಿದರೆ, ಶಿಕ್ಷಣ ನಮ್ಮ ಅರಿವಿನ ಎಲ್ಲೆಗಳನ್ನು ವಿಸ್ತರಿಸಿ ಅನಂತ ಸಾಧ್ಯತೆಗಳನ್ನು ನಮಗೆ ಕಾಣಿಸುವ ಕೆಲಸ ಮಾಡುತ್ತದೆ ಎಂದು ಕವಯಿತ್ರಿ ಹಾಗೂ ಕರ್ನಾಟಕ ಲೇಖಕಿಯರ ಸಂಘ, ತುಮಕೂರು ಜಿಲ್ಲಾ ಶಾಖೆಯ ಅಧ್ಯಕ್ಷೆ ಮಲ್ಲಿಕಾ ಬಸವರಾಜು ಅಭಿಪ್ರಾಯಪಟ್ಟರು.

ತುಮಕೂರು ವಿಶ್ವವಿದ್ಯಾನಿಲಯದ ಡಿವಿಜಿ ಕನ್ನಡ ಅಧ್ಯಯನ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ‘ನನ್ನ ಕತೆ ನಿಮ್ಮ ಜೊತೆ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾವು ಪಿಯುಸಿ ಮುಗಿಸಿ ಪದವಿಯ ಹಂತಕ್ಕೆ ಬಂದಾಗ ಭಾರತದ ಶ್ರೇಷ್ಠ ತತ್ತ್ವಜ್ಞಾನಿಗಳಾದ ಮಹಾತ್ಮ ಗಾಂಧಿ, ರಾಮ್‍ಮನೋಹರ ಲೋಹಿಯಾ, ಡಾ ಬಿ ಆರ್ ಅಂಬೇಡ್ಕರ್, ಕುವೆಂಪು ಮತ್ತು ಕಿಶನ್ ಪಟ್ನಾಯಕ್ ಇವರ ಚಿಂತನೆಗಳು ತಮ್ಮ ಯೋಚನೆಯ ದಾರಿಯನ್ನು ಬದಲಾಯಿಸಿದವು ಎಂದು ಹೇಳಿದರು.

ಯೋಚನೆಯ ದಾರಿ ಬದಲಾದುದರಿಂದ ನಮ್ಮ ಬದುಕಿನ ದಾರಿಯು ಬದಲಾಯಿತು. ಇದಕ್ಕೆ ಕಾರಣ ಅಂತಹ ಮಹನೀಯರ ಚಿಂತನೆಗಳ ನಿಕಟವಾದ ಓದು. ತುಮಕೂರಿನ ಸಮಾಜವಾದಿ ಅಧ್ಯಯನ ಕೇಂದ್ರ ಮತ್ತು ಸಮತಾ ಬಳಗದ ಒಡನಾಟ, ಹಾಗೂ ದಲಿತ ಚಳವಳಿ, ರೈತ ಚಳವಳಿಗಳ ಸಾಹಚರ್ಯ, ಲಂಕೇಶ್ ಪತ್ರಿಕೆಯ ಓದು ಇವೆಲ್ಲವೂ ಹೇಗೆ ತಮ್ಮನ್ನು ಸಮಾಜಮುಖಿಯಾಗುವತ್ತ ಪ್ರಭಾವಿಸಿದವು ಎಂಬುದನ್ನು ಸ್ಮರಿಸಿದರು.

ಸಾಮಾಜಿಕ ಸಂರಚನೆಗಳಿಗೆ ಎದುರಾಗಿ ಹೊರಟವರು ಅನುಭವಿಸಬೇಕಾಗಿ ಬರುವ ಅನೇಕ ಸಂಕಟಗಳು ಮತ್ತು ಜವಾಬ್ದಾರಿಗಳನ್ನು ತಮ್ಮದೇ ಬದುಕಿನ ಅಂತರ್ಜಾತಿ ಪ್ರೇಮ ವಿವಾಹದ ಉದಾಹರಣೆಯೊಂದಿಗೆ ವಿವರಿಸಿದರು.
ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ನಿತ್ಯಾನಂದ ಬಿ. ಶೆಟ್ಟಿ, ಪ್ರಾಧ್ಯಾಪಕಿ ಪ್ರೊ. ಅಣ್ಣಮ್ಮ, ಸಹ ಪ್ರಾಧ್ಯಾಪಕಿ ಡಾ. ಗೀತಾ ವಸಂತ, ಕಥೆಗಾರ ಮಿರ್ಜಾ ಬಷೀರ್, ಲೇಖಕಿಯರಾದ ಮುಮ್ತಾಜ್, ಇಂದಿರಮ್ಮ, ಅಕ್ಷತಾ, ರಂಗಮ್ಮ ಹೊದೇನಕಲ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *