ಕನ್ನಡದ ಅಸ್ಮಿತೆ ಉಳಿಯಬೇಕಾದರೆ ಕನ್ನಡವನ್ನು ಆತ್ಮ ವಿಶ್ವಾಸದಿಂದ ಬಳಸಬೇಕು

ತುಮಕೂರು: ಪ್ರತಿಯೊಬ್ಬ ಕನ್ನಡಿಗನು ಕನ್ನಡವನ್ನು ಆತ್ಮವಿಶ್ವಾಸದಿಂದ ಮಾತನಾಡುವುದರಿಂದ ಕನ್ನಡದ ಅಸ್ಮಿತೆ ಉಳಿಯುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನೀಸ ಅವರು ಅಭಿಪ್ರಾಯಪಟ್ಟರು.

ತುಮಕೂರು ಹೊರವಲಯದಲ್ಲಿರುವ ಶ್ರೀ ಸಿದ್ಧಾರ್ಥ ಸ್ಕೂಲ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನ.30ರಂದು ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಂಗ್ಲ ಭಾಷಯ ವ್ಯಾಮೋಹದಿಂದ ಮಾತೃಭಾಷೆಯನ್ನು ಮರೆಯುವಂತಹ ಪರಿಸ್ಥಿತಿ ಬಂದಿದೆ. ನಮ್ಮ ಮಾತೃ ಭಾಷೆ ಯಾವುದೇ ಇರಲಿ, ಹೃದಯದ ಭಾಷೆ ಮಾತ್ರ ಕನ್ನಡವೇ ಆಗಿರಲಿ. ಜೀವನದ ಪ್ರತೀ ಹಂತದಲ್ಲಿ ಕನ್ನಡದ ಅಸ್ಮಿತೆಯನ್ನು ಉಳಿಸೋಣ ಎಂದು ಕರೆ ನೀಡಿದರು,

ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಕೆ.ಬಿ ಲಿಂಗೇಗೌಡರು ಮಾತನಾಡಿ, ವಿದ್ಯಾರ್ಥಿಗಳು ಸಾಧನೆಗಳನ್ನು ಮಾಡಲು ಬೇಲಿಯನ್ನು ನಿರ್ಮಿಸಿಕೊಳ್ಳುವ ಅಗತ್ಯವಿಲ್ಲ. ಇವತ್ತು ಪ್ರಪಂಚ ವಿಶಾಲವಾಗಿ ತೆರೆದುಕೊಂಡಿರುವುದರಿಂದ ಯಾವುದೇ ಕ್ಷೇತ್ರದಲ್ಲಿ ಬೇಕಾದರೂ ಸಾಧನೆಯನ್ನು ಮಾಡಲು ನಿಮಗೆ ಅವಕಾಶ ಇದೆ. ಇದನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಸಾಹೇ ವಿಶ್ವ ವಿದ್ಯಾಲಯದ ಕುಲಸಚಿವರಾದ ಡಾ.ಎಂ.ಝಡ್ ಕುರಿಯನ್ ಮಾತನಾಡಿ, ಇಂದಿನ ಶಿಕ್ಷಣ ವ್ಯವಸ್ಥೆ ಕೇವಲ ವೃತ್ತಿಪರ ವಿದ್ಯೆಯನ್ನು ನೀಡುತ್ತಿದೆಯೇ ಹೊರತು,ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣವನ್ನು ನೀಡುತ್ತಿಲ್ಲ. ಇದರಿಂದ ವಿದ್ಯಾವಂತರಿಂದಲೇ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ. ಹಾಗಾಗಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣವನ್ನು ನೀಡಿ ಉತ್ತಮ ಮನಷ್ಯರನ್ನಾಗಿ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಾಹೇ ವಿಶ್ವವಿದ್ಯಾನಿಲಯ ಪರೀಕ್ಷಾಂಗ ನಿಯಂತ್ರಕರಾದ ಡಾ. ಜಿ. ಗುರುಶಂಕರ್, ಕುಲಾಧಿಪತಿಗಳ ಸಲಹೆಗಾರರಾದ ಡಾ. ವಿವೇಕ್ ವೀರಯ್ಯ, ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಎಸ್.ರವಿಪ್ರಕಾಶ್, ಸಿದ್ದಾರ್ಥ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರವೀಣ್ ಕುಡುವಾ, ಎಸ್‍ಎಸ್‍ಎಸ್‍ಇ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಲ್. ಸಂಜೀವ್ ಕುಮಾರ್ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು, ವಿದ್ಯಾರ್ಥಿಗಳು ಹಾಜರಿದ್ದರು.

Leave a Reply

Your email address will not be published. Required fields are marked *