ತುಮಕೂರು:ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಅವರ ಬಗ್ಗೆ ತೀರ ಹಗುರವಾಗಿ ಮಾತನಾಡುವುದನ್ನೇ ಚಟವಾಗಿ ಮಾಡಿಕೊಂಡಿರುವ ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶಗೌಡ,ಪ್ರಚಾರಕ್ಕಾಗಿ ಸರಕಾರವನ್ನು ಹಿಯಾಳಿಸುವುದನ್ನು ಕೈಬಿಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ತಾಕೀತು ಮಾಡಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಪದೇ ಪದೇ ಸರಕಾರ ಸತ್ತು ಹೋಗಿದೆ.ಜಿಲ್ಲೆಯಲ್ಲಿ ಅಭಿವೃದ್ದಿ ಕುಂಠಿತವಾಗಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ.ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವ ದಲ್ಲಿಯೇ ಜಿಲ್ಲೆಯಲ್ಲಿ ಎರಡು ಬೃಹತ್ ಫಲಾನುಭವಿಗಳ ಸಮಾವೇಶ ನಡೆದಿದೆ.ಸುಮಾರು 1500 ಕೋಟಿ ರೂ.ಗಳ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಸವಲತ್ತುಗಳ ವಿತರಣೆ ಮಾಡಲಾಗಿದೆ.ಆ ಸಮಾರಂಭ ಗಳಲ್ಲಿ ಸ್ವತಹಃ ಶಾಸಕರೇ ಉಪಸ್ಥಿತರಿದ್ದು, ಹತ್ತಿರದಿಂದ ನೋಡಿದ್ದರೂ,ಟೀಕಿಸುವುದು ತರವಲ್ಲ ಎಂದರು.
ಜಿಲ್ಲೆಗೆ ಸರಕಾರದ ಗ್ಯಾರಂಟಿ ಯೋಜನೆಗಳಿಂದ ಸುಮಾರು 3500 ಕೋಟಿ ರೂಗಳ ಅನುಧಾನ ನೀಡಲಾಗಿದೆ. ಮಹಾತ್ಮಗಾಂಧಿ ಕ್ರೀಡಾಂಗಣ,ದೇವರಾಜ ಅರಸು ಬಸ್ ನಿಲ್ದಾಣ ನಿರ್ಮಾಣಕ್ಕೆ ಸರಕಾರದಿಂದ ಹಣ ನೀಡಲಾಗಿದೆ. ಹಾಗಿದ್ದರೂ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಕೇವಲ ಸಿದ್ದಾರ್ಥ ಕಾಲೇಜಿಗೆ ಬಂದು ಹೋಗುವುದರಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಹೇಳಿಕೆ ನೀಡುವ ಸುರೇಶಗೌಡರು, ಬೆಳಗಾದ ತಕ್ಷಣ,ಡಾ.ಜಿ.ಪರಮೇಶ್ವರ್ ಮನೆಗೆ ಹೋಗಿ ಕುಳಿತಿರುತ್ತಾರೆ. ಈ ರೀತಿಯ ದ್ವಂದ್ವ ಬಿಡಿ,ಪದೇ ಪದೇ ಈ ರೀತಿಯ ಅವಹೇಳನಕಾರಿ ಹೇಳಿಕೆಯನ್ನು ಕೈಬಿಡದಿದ್ದರೆ ನಾವು ಕೂಡ ನಿಮ್ಮಗೆ ಘೇರಾವ್ ಹಾಕುವ ಕಾಲ ದೂರವಿಲ್ಲ.ನಮ್ಮ ಕಾರ್ಯಕರ್ತರ ತಾಳ್ಮೆಗೂ ಮಿತಿ ಇದೆ ಎಂದು ಚಂದ್ರಶೇರಗೌಡ ನುಡಿದರು.
ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ,ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿಯೇ ಸಾಕಷ್ಟು ಸಮಸ್ಯೆಗಳಿವೆ. ತುಮಕೂರು ವಿಶ್ವವಿದ್ಯಾಲಯಕ್ಕೆ ಸರಿಯಾಗಿ ಮೂಲಭೂತ ಸೌಕರ್ಯಗಳಿಲ್ಲ. ಕುಡಿಯುವ ನೀರಿನ ಸಮಸ್ಯೆ ಇದೆ.ಹೈನುಗಾರರು ಸಾಕಷ್ಟು ಸಂಕಷ್ಟದಲ್ಲಿದ್ದಾರೆ.ಮೊದಲು ಆ ಕಡೆಗಳಿಗೆ ಗಮನ ಹರಿಸಲಿ.ಜಿಲ್ಲೆಯಲ್ಲಿ ಅಭಿವೃದ್ದಿ ಕಾರ್ಯ ಗಳು ನಡೆಯುತ್ತಿದೆ.ಇದಕ್ಕೆ ಸಾಕ್ಷಿ ಎಂಬಂತೆ ಆರ್.ಡಿ.ಪಿ.ಆರ್.ಗೆ ಮತ್ತು ಕಂದಾಯ ಇಲಾಖೆಗೆ ಎರಡು ಪ್ರಶಸ್ತಿಗಳು ಬಂದಿವೆ. ಪ್ರಚಾರದ ಹುಚ್ಚಿಗೆ ಬಿದ್ದ ಅಸಂಬದ್ದ ಹೇಳಿಕೆ ನೀಡುವುದನ್ನು ಕೈಬಿಡಬೇಕು.ಹೊಂದಾಣಿಕೆ ರಾಜಕಾರಣ ಮಾಡುವ ನಿಮ್ಮಿಂದ ಕಾಂಗ್ರೆಸ್ ಪಕ್ಷ ಬುದ್ದಿ ಹೇಳಿಸಿಕೊಳ್ಳುವ ಮಟ್ಟದಲ್ಲಿ ಇಲ್ಲ.ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮೇಲಿನ ನಿಮ್ಮ ರೋಷವೇಷ ಕಡಿಮೆಯಾಗಲು ಕಾರಣ ಏನು ಎಂಬುದನ್ನು ಜನತೆಯ ಮುಂದಿಡಿ ಎಂದರು.
ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿ, ತುಮಕೂರು ಗ್ರಾಮಾಂತರ ಶಾಸಕರಾಗಿರುವ ಬಿ.ಸುರೇಶಗೌಡ ಓರ್ವ ಫಲಾಯನವಾದಿ ರಾಜಕಾರಣಿ.2023ರ ವಿಧಾನಸಭಾ ಚುನಾವಣೆಯ ವೇಳೆ ಮತದಾರರಿಗೆ ನೀಡಿದ ಒಂದು ಭರವಸೆಯನ್ನು ಈಡೇರಿಸಿಲ್ಲ.ನನ್ನ ಕಾಲದಲ್ಲಿ ಮಂಜೂರಾದ ಜೆ.ಜೆ.ಎಂ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡುತಿರು ವುದು ಬಿಟ್ಟರೆ ಒಂದು ನೈಯಾ ಪೈಸೆ ಅನುದಾನ ತಂದಿಲ್ಲ.ಕುಂಭಮೇಳಕ್ಕೆ ಹೋಗಿ ಪುಣ್ಯ ಸ್ಥಾನ ಮಾಡಿ ಬಂದ ಮೇಲಾದರೂ ಬದಲಾಗಿದ್ದಾರೆ ಎಂದು ಕೊಂಡಿದ್ದೆ.ಅವರು ಮತ್ತೆ ಹಳೆಯ ಚಾಳಿಯನ್ನೇ ಮುಂದುವರೆಸಿದ್ದಾರೆ.ಅವರ ಹಳೆಯ ಚಾಳಿಯನ್ನು ಬಿಡುವಂತೆ ಮಾಡಲು ರಾಜ್ಯ ಸರಕಾರ ಟಿ.ನರಸೀಪುರ ತಾಲೂಕಿನ ತಿರುಮಕೂಡಲದಲ್ಲಿ ಹಮ್ಮಿಕೊಂಡಿರುವ ಕುಂಭ ಮೇಳಕ್ಕೆ ನಾನೇ ಕರೆದುಕೊಂಡು ಹೋಗುತ್ತೇನೆ ಎಂದು ಕುಟುಕಿದರು.
ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಾ.ಜಿ.ಪರಮೇಶ್ವರ್ ಆಗಲಿ, ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ ಅವರಾಗಲಿ ಒಳ್ಳೆಯ ಕೆಲಸ ಮಾಡುತಿದ್ದಾರೆ. ಆದರೆ ಪದೇ ಪದೇ ಪರಮೇಶ್ವರ್ ಅವರನ್ನು ವಾಮಾಗೋಚರವಾಗಿ ಟೀಕಿಸುವ ಮೂಲಕ ಅವರ ತೇಜೋವಧೆಗೆ ಯತ್ನಿಸುತ್ತಿರುವುದು ಗ್ರಾಮಾಂತರ ಶಾಸಕರಿಗೆ ಶೋಭ ತರುವುದಿಲ್ಲ.150 ಕೋಟಿ ವೆಚ್ಚದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಎತ್ತಿನ ಹೊಳೆ ಯೋಜನೆಗೆ 350 ಕೋಟಿ ರೂ ಹೆಚ್ಚುವರಿ ಅನುದಾನ ನೀಡಿದೆ. ತುಮಕೂರು ನಗರಕ್ಕೆ 200 ಕೋಟಿ ರೂ ವಿಶೇಷ ಅನುದಾನ ನೀಡಲಾಗಿದೆ.ನೀವೇ ಗುದ್ದಲಿ ಪೂಜೆ ನೆರವೇರಿಸಿದ ಬೆಳ್ಳಾವಿ ಸರಕಾರಿ ಪ್ರಥಮ ದರ್ಜೆಕಾಲೇಜು ನಿರ್ಮಾಣಕ್ಕೆ ಅನುದಾನ ನೀಡಿದ್ದು ಯಾರು,ಕೈದಾಳದ ಚನ್ನಕೇಶವ ದೇವಾಲಯವನ್ನು ಪ್ರವಾಸಿ ತಾಣವಾಗಿ ಅಭಿವೃದ್ದಿ ಪಡಿಸಲು ನೀಲ ನಕ್ಷೆ ತಯಾರಾಗಿದೆ. ಇದರ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಿದ್ದಾರೆ ಎಂದ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್, ತುಮಕೂರು ಗ್ರಾಮಾಂತರದಲ್ಲಿ ಅಭಿವೃದ್ದಿ ಎಂಬುದೇ ಸ್ತಬ್ದವಾಗಿದೆ.ಮೊದಲು ಕ್ಷೇತ್ರದ ಅಭಿವೃದ್ದಿಯತ್ತ ಗಮನಹರಿಸಲಿ ಎಂದು ತಾಕೀತು ಮಾಡಿದರು.
ಈ ವೇಳೆ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಇಕ್ಬಾಲ್ ಅಹಮದ್,ಸುಲ್ತಾನ್ ಮೊಹಮದ್, ಆರ್.ರಾಮಕೃಷ್ಣ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹೇಶ್,ಫೈಯಾಜ್,ಷಣ್ಮುಗಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.