ತುಮಕೂರು: ಅ.18ರಂದು ನಡೆಯಲಿರುವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಜಾರಿಗೆ ಸರ್ಕಾರ ನಿರ್ಧಾರ ಕೈಗೊಳ್ಳದೇ ಹೋದರೆ, ರಾಜ್ಯಾದ್ಯಂತ ಒಳಮೀಸಲಾತಿಗೆ ಪಕ್ಷಾತೀತವಾಗಿ ಹೋರಾಟ ಮಾಡಬೇಕಿದೆ, ಒಳ ಮೀಸಲಾತಿ ನಮ್ಮ ಹಕ್ಕು ಎನ್ನುವುದನ್ನು ಸರ್ಕಾರಕ್ಕೆ ಮನವರಿಕೆ ಮಾಡಬೇಕಿದ್ದು, ಈ ನಿಟ್ಟಿನಲ್ಲಿ ಮಾದಿಗ ಸಮುದಾಯ ಸಂಘಟನಾತ್ಮಕ ಹೋರಾಟಕ್ಕೆ ಸಿದ್ಧವಾಗಬೇಕಿದೆ ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಒಳ ಮೀಸಲಾತಿ ಚಿಂತನಾ-ಮಂಥನ ಹಾಗೂ ಒಳ ಮೀಸಲಾತಿ ಜಾರಿ ಹೋರಾಟದ ಸಭೆಯಲ್ಲಿ ಮಾತನಾಡಿದ ಅವರು, ಮಾದಿಗ ಸಮುದಾಯದ ಅಭಿವೃದ್ಧಿಗೆ ಒಳಮೀಸಲಾತಿ ಜಾರಿ ಅವಶ್ಯಕವಾಗಿದ್ದು, ಕಳೆದ 30 ವರ್ಷಗಳಿಂದಲೂ ಮಾದಿಗ ಸಮುದಾಯ ಹೋರಾಟದಲ್ಲಿ ತೊಡಗಿಸಿಕೊಂಡರು ಸಹ ಸರ್ಕಾರಗಳು ನಮ್ಮ ಬೇಡಿಕೆಗೆ ಗಮನ ಹರಿಸುತ್ತಿಲ್ಲ, ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಮಾದಿಗ ಸಮುದಾಯದ ಏಕೀಕೃತ ಹೋರಾಟ ನಡೆಸುವುದು ಅವಶ್ಯಕವಾಗಿದೆ ಎಂದರು.
ಮಾಜಿ ಸದಸ್ಯ ಕೆಂಚಮಾರಯ್ಯ ಮಾತನಾಡಿ ಒಳ ಮೀಸಲಾತಿ ಜಾರಿಗೆ ಸರ್ಕಾರ ಬದ್ಧವಾಗಬೇಕಿದೆ, ಪ್ರಣಾಳಿಕೆಯಲ್ಲಿ ಭರವಸೆ ನೀಡಿದ ಮೇಲೆ ಅದನ್ನು ಜಾರಿ ಮಾಡಲೇಬೇಕು, ಮಾದಿಗರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಬದ್ಧತೆ ತೋರಬೇಕು ಎಂದರು.
ಒಳ ಮೀಸಲಾತಿ ಜಾರಿ ಆಗಲು ಹೋರಾಟ ನಡೆಸಬೇಕಿದೆ, ಇದರಲ್ಲಿ ಯಾವುದೇ ಪಕ್ಷ, ವ್ಯಕ್ತಿ ಮುಖ್ಯವಲ್ಲ, ಸಿದ್ಧರಾಮಯ್ಯ ಆಗಿರಲಿ ಇನ್ಯಾರೇ ಆಗಿರಲಿ ಒಳ ಮೀಸಲಾತಿ ಜಾರಿಗೆ ಬದ್ಧವಾಗಬೇಕಿದೆ, ಮಾದಿಗ ಸಮುದಾಯದ ಹಿತ ಕಾಯುವುದಷ್ಟೇ ನಮ್ಮ ಉದ್ದೇಶ ಇದರಲ್ಲಿ ಯಾವುದೇ ಪಕ್ಷವಿಲ್ಲ ಎನ್ನುವುದನ್ನು ಸಮುದಾಯದ ಮುಖಂಡರು ಅರಿಯಬೇಕು ಎಂದರು.
ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ ಮಾತನಾಡಿ ರಾಜಕೀಯ ಪಕ್ಷಗಳ ಆದೇಶ ಪಾಲಿಸುತ್ತಾ ಪಕ್ಷದ ಗುಲಾಮಗಿರಿ ಮಾಡುತ್ತಿರುವ ಮಾದಿಗ ಸಮುದಾಯದ ಮುಖಂಡರು ಒಳ ಮೀಸಲಾತಿಗಾಗಿ ಒಂದಾಗಬೇಕಿದೆ ಎಂದರು.
ಸಮಾಜದ ಹಿತಕ್ಕಾಗಿ ರಾಜಕೀಯವನ್ನು ಬದಿಗಿಡಬೇಕು, ಯಾವ ರಾಜಕೀಯ ಪಕ್ಷಗಳು ಸಹ ಒಳ ಮೀಸಲಾತಿ ಜಾರಿ ಆಶ್ವಾಸನೆ ನೀಡುವುದನ್ನು ಬಿಟ್ಟರೆ ಸಮುದಾಯದ ಹಿತಕ್ಕೆ ಬದ್ಧರಾಗಿಲ್ಲ ಎಂದರು.
ಪಾವಗಡ ಶ್ರೀರಾಂ ಮಾತನಾಡಿ ಜಿಲ್ಲೆಯಲ್ಲಿ ಇಬ್ಬರು ಪ್ರಭಾವಿ ಸಚಿವರಿದ್ದಾರೆ, ಸಚಿವರು ಒಳಮೀಸಲಾತಿಗೆ ಬದ್ಧರಾಗದೇ ಹೋದಲ್ಲಿ ಮಾದಿಗ ಸಮುದಾಯದ ಶಕ್ತಿ ತೋರಿಸಬೇಕಾಗುತ್ತದೆ, ಒಳ ಮೀಸಲಾತಿ ಹೋರಾಟದಲ್ಲಿ ಪಕ್ಷಾತೀತ ಹೋರಾಟ ಅವಶ್ಯಕತೆ ಇದೆ. ಒಳ ಮೀಸಲಾತಿ ವಿರೋಧಿಗಳಿಗೆ ತಕ್ಕ ಪಾಠ ಕಲಿಸಬೇಕಾದ ಅವಶ್ಯಕತೆ ಇದೆ ಎಂದರು.
ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ನಡೆಯುವ ಹೋರಾಟಗಳನ್ನು ಬೆಂಬಲಿಸುತ್ತಾ , ಒಳಮೀಸಲತಿಗೆ ಒಂದು ಸಣ್ಣ ಹೋರಾಟವನ್ನೂ ಮಾಡಿದರೂ ಗೌರವಿಸುವುದು ನಮ್ಮೆಲ್ಲರ ಜವಬ್ದಾರಿ. ರಾಜ್ಯದಲ್ಲಿ ಅತಿ ಹೆಚ್ಚು ನಮ್ಮ ಸಮಾಜದ ಬಂಧುಗಳು ತುಮಕೂರಿನಲ್ಲಿದ್ದು ಮತ್ತು ರಾಜಧಾನಿಗೆ ಹತ್ತಿರ ವಿರುವ ಜಿಲ್ಲೆ ನಮ್ಮದಾಗಿರುವುದರಿಂದ ಒಂದು ಪ್ರಭಲವಾದ ಹೋರಾಟ ಮಾಡಬೇಕಾಗಿರುವುದು ನಮ್ಮ ಜವಾಬ್ದಾರಿಯಾಗಿದೆ. ಈಗ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಏಕ ಕಾಲಕ್ಕೆ ಮಾಡುತ್ತಿರುವ 16 ರ ಕಾರ್ಯಕ್ರಮಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವೀ ಮಾಡೋಣಾ ಎಂದರು.
ಹೋರಾಟಗಾರ ಕೊಟ್ಟಶಂಕರ್ ಮಾತನಾಡಿ ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೆ ತರಬೇಕು, ಒಳ ಮೀಸಲಾತಿ ಜಾರಿ ಹೋರಾಟದಲ್ಲಿ ಯಾವುದೇ ಸಂಘಟನೆ ಹೋರಾಟ ಮಾಡಿದರು ಅದಕ್ಕೆ ಸಮುದಾಯದ ಬೆಂಬಲ ನೀಡಬೇಕು ಎಂದರು.
ಒಳ ಮೀಸಲಾತಿ ಜಾರಿಗೆ ತುಮಕೂರಿನಲ್ಲಿ ಮಾದಿಗ ಸಮುದಾಯದ ಶಕ್ತಿ ತೋರಿಸಬೇಕಿದೆ, ಯಾವುದೇ ರೀತಿಯ ಹೋರಾಟಕ್ಕೂ ಸಮುದಾಯದ ಮುಖಂಡರು ಬದ್ಧರಾಗಬೇಕು, ಗ್ರಾಮ, ಹೋಬಳಿ, ತಾಲ್ಲೂಕು ಮಟ್ಟದಲ್ಲಿ ಸಮುದಾಯವನ್ನು ಸಂಘಟಿಸಬೇಕು, ಜಿಲ್ಲೆಯಲ್ಲಿ ಮಾದಿಗರ ಶಕ್ತಿಯನ್ನು ತೋರಿಸಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ವಕೀಲ ರಂಗಧಾಮಯ್ಯ, ನರಸಿಂಹಯ್ಯ, ಕುಣಿಗಲ್ ಪುರಸಭೆ ಸದಸ್ಯ ಶ್ರೀನಿವಾಸ್, ರಂಗನಾಥ್, ಲಕ್ಷ್ಮೀದೇವಮ್ಮ, ಪಿ.ಎನ್.ರಾಮಯ್ಯ, ಮರಳೂರು ಕೃಷ್ಣಮೂರ್ತಿ, ಹೆತ್ತೇನಹಳ್ಳಿ ಮಂಜುನಾಥ್, ಜಯಮೂರ್ತಿ, ಹೊಸಕೋಟೆ ನಾಗರಾಜು, ಆಟೋಶಿವರಾಜು, ರಮೇಶ್, ಗೋಪಿ ಮೊಸರುಕುಂಟೆ, ಸಾಗರ್, ಗಂಗಾಧರ್, ಮುಕುಂದ, ಟಿ.ಸಿ.ರಾಮಯ್ಯ, ಕೇಬಲ್ ರಘು, ಯೋಗೀಶ್ ಸೋರೆಕುಂಟೆ, ನಿಟ್ಟೂರು ರಂಗಸ್ವಾಮಿ, ರಂಜನ್, ಶ್ರೀನಿವಾಸ್, ನಾಗರಾಜು ಗೂಳಹರಿವೆ ಸೇರಿದಂತೆ ಇತರರಿದ್ದರು.