ಫೆಬ್ರವರಿ 18ರಂದು ದಲಿತ ಸಂಘರ್ಷ ಸಮಿತಿಯ 50ನೇ ವರ್ಷದ ಸುವರ್ಣ ಮಹೋತ್ಸವ ಅದ್ಭುತವಾದ ಕಾರ್ಯಕ್ರಮವೊಂದು ತುಮಕೂರಿನಲ್ಲಿ ನಡೆಯುತ್ತಿರುವುದು ಅಭಿನಂದನೀಯ.
ಅಂಬೇಡ್ಕರ್ ಇರದಿದ್ದರೆ ಈ ದಲಿತ ಸಂಘರ್ಷ ಸಮಿತಿ ಹುಟ್ಟುತ್ತಿರಲಿಲ್ಲ, ಈ ಹೊತ್ತಿನಲ್ಲಿ ಅಂಬೇಡ್ಕರ್ ಅವರನ್ನು ಯಾವುದೇ ಭಾರತದ ಪ್ರಜೆ ಮರೆಯುವಂತಿಲ್ಲ, ಯಾಕೆಂದರೆ ಸಂವಿಧಾನವನ್ನು ಎಲ್ಲಾರನ್ನು ಒಳಗೊಂಡಂತೆ ಬರೆದು ಕೊಟ್ಟಿದ್ದು ಸಣ್ಣ ವಿಷಯವೇನಲ್ಲ.
ಕರ್ನಾಟಕ ಸರ್ಕಾರ ಸಂವಿಧಾನ ಜಾಗೃತಿ ಜಾಥ ನಡೆಯುತ್ತಿರುವ ಹೊತ್ತಿನಲ್ಲೇ ದಸಂಸ ಸುವರ್ಣ ಮಹೋತ್ಸವ ನಡೆಯುತ್ತಿರುವುದಕ್ಕೆ ತುಂಬಾ ಮಹತ್ವ ಬರುವಂತಾಗಬೇಕಿತ್ತು.
ಯಾಕೆಂದರೆ ಸರ್ಕಾರ ನಡೆಸುತ್ತಿರುವ ಸಂವಿಧಾನ ಜಾಗೃತಿ ಜಾಥವನ್ನು ಕೇವಲ ಶಾಲೆ ಮತ್ತು ದಲಿತರಿಗಷ್ಟೇ ಸೀಮಿತ ಎಂಬಂತೆ ಆಚರಿಸುತ್ತಿರುವುದನ್ನು ಈ ಹೊತ್ತಿನಲ್ಲಿ ದಸಂಸ ಅಂತಹ ಸಂಘಟನೆಗಳು ಅಧಿಕಾರ ವರ್ಗಕ್ಕೆ ಚಾಟಿ ಬೀಸಿ ಈ ಕಾರ್ಯಕ್ರಮವನ್ನು ಪ್ರತಿ ಪಂಚಾಯತಿಗಳಲ್ಲಿ ಎಲ್ಲಾ ಜನ ಪಾಲ್ಗೊಳ್ಳುವಂತೆ ಮಾಡಬೇಕು, ಸಂವಿಧಾನ ಇಡೀ ಭಾರತದ ಪ್ರತಿಯೊಬ್ಬ ಪ್ರಜೆಗೂ ಸೇರಿದ್ದು ಎಂದು ದಡ್ಡ ಶಿಖಾಮಣಿ ಅಧಿಕಾರಿಗಳಿಗೆ ಹೇಳಬೇಕಿತ್ತು.
ಈ ಸಂವಿಧಾನ ಜಾಗೃತಿ ಕಾರ್ಯಕ್ರಮವನ್ನು ದೇವರ ಉತ್ಸವದಂತೆ ಅರೆ-ವಾದ್ಯ, ಹೂವಿನ ತೋರಣಗಳಿಂದ ಭರ ಮಾಡಿಕೊಳ್ಳುತ್ತಿರುವುದು ಎಷ್ಟು ಸರಿ ಎಂಬುದನ್ನಾದರೂ ಪ್ರಶ್ನಿಸಬೇಕಿತ್ತು, ಅಂಬೇಡ್ಕರ್ ದಲಿತರಿಗೆ ಅಕ್ಷರ ಕಲಿಸಿ ಮೌಢ್ಯ ಭಿತ್ತಿ ಮೂಡರನ್ನಾಗಿ ಮಾಡಬೇಡಿ ಎಂದು ಹೇಳಿದವರು, ಈಗ ಅಕ್ಷರ ಕಲಿಸುವುದಕ್ಕಿಂತ ಶಿಕ್ಷಣ ಪಡೆದಿದ್ದೇವೆಂಬ ಕನ್ನಡಿಯೊಳಗೆ ನೋಡಿಕೊಳ್ಳುತ್ತಾ ಸಂವಿಧಾನವನ್ನು ನಾಶ ಮಾಡಲು ಹೊರಟಿರುವವರ ಜೊತೆಯೇ ಸೇರಿಕೊಂಡು ಕ್ಷಣಿಕ ರಾಜಕೀಯ ಸವಲತ್ತುಗಳಿಗೆ ಇಡೀ ದಲಿತ ಕುಲವನ್ನು ಬಲಿ ಕೊಡುತ್ತಿರುವುದರ ಬಗ್ಗೆಯಾದರೂ 50ನೇ ಸುವರ್ಣೋತ್ಸವ ಸಂದರ್ಭದಲ್ಲಿ ದಸಂಸ ಕೆಲವರಿಗಷ್ಟೇ ಸೀಮಿತಗೊಳಿಸಿಕೊಳ್ಳದೆ ಎಲ್ಲಾ ದಲಿತರನ್ನು, ದಲಿತ ಸಂಘಟನೆಗಳನ್ನು ಒಳಗೊಂಡು ಒಂದು ಆತ್ಮಾವಲೋಕನ ಸಭೆ ನಡೆಸಿ ಇಡೀ ರಾಜ್ಯದ ದಲಿತ ಸಂಘದ 60ರಷ್ಟಾದರೂ ಒಟ್ಟಾಗಿ ಕಾರ್ಯಕ್ರಮ ರೂಪಿಸಬೇಕಿತ್ತು.
ಇದಲ್ಲದೆ ಇಂದಿನ ದಲಿತ ಯುವಕರು ತಮ್ಮ ಜವಾಬ್ದಾರಿಯನ್ನು ಅರಿಯದೇ ಪಿಯುಸಿ ಹಂತದಲ್ಲೇ ಶಿಕ್ಷಣವನ್ನು ನಿಲ್ಲಿಸಿ ಮೊಬೈಲ್, ಮತ್ತು ಬೈಕ್‍ನಂತಹ ವಾಹನಗಳು ಸಿಕ್ಕ ಕೂಡಲೇ ಮೇಲ್ಜಾತಿಯವರ ಮನೆಗಳಲ್ಲಿ ಹೈಟೆಕ್ ಜೀತ ಪ್ಧತಿಗೆ ಒಳಗಾಗುತ್ತಿರುವುದನ್ನಾದರೂ ಇಂದಿನ ಈ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ದಲಿತ ಯುವಕರನ್ನು ಸರಿ ದಾರಿಗೆ ತರಲು ಏನು ಮಾಡಬಹುದು ಎಂಬುದನ್ನಾದರೂ ಯೋಚನೆ ಅಥವಾ ಆತ್ಮಾವಲೋಕನ ಮಾಡಿಕೊಳ್ಳಬಹುದಿತ್ತು.
ಇದರ ಜೊತೆಗೆ ಸ್ವಾತಂತ್ರ ಬಂದು 78 ವರ್ಷಗಳಾದರೂ ದಲಿತರ ಮೇಲಿನ ದೌರ್ಜನ್ಯ, ಹಲ್ಲೆ, ಕೊಲೆ, ಬಹಿಷ್ಕಾರ ನಿಂತಿಲ್ಲ ಇಂತಹವುಗಳು ನಿಲ್ಲಿಸಲಾದರೂ ಎಲ್ಲಾ ದಲಿತ ಸಂಘಟನೆಗಳು ಒಂದಾಗುವ ಪಣ ತೊಡಬೇಕಿತ್ತು.
ಜಿಲ್ಲೆಯಲ್ಲಿ ಬೆಲ್ಲದಮಡು ರಂಗಸ್ವಾಮಿ, ಅಥವಾ ಕೆ.ಬಿ.ಸಿದ್ದಯ್ಯನವರು ದಸಂಸ ಕಟ್ಟುವಲ್ಲಿ ತಮ್ಮ ತನು, ಮನ,ಧನ ಎಲ್ಲಾವನ್ನು ಧಾರೆ ಎರದವರು, ಈ 50ರ ಸುವರ್ಣ ಮಹೋತ್ಸವವನ್ನು ಇವರ ಹೆಸರಿನಡಿಯಲ್ಲಿ ಮಾಡಿದ್ದರೆ ಬದುಕಿರದ ಜೀವಗಳಿಗೆ ಚಳುವಳಿಗಾಗಿ ತ್ಯಾಗ ಮಾಡಿದ ಈ ಜೀವಿಗಳಿಗೆ ನ್ಯಾಯ ಒದಗಿಸದಂತಾಗುತಿತ್ತು.
ದಸಂಸವನ್ನು ಕೆಲವರದನ್ನಷ್ಟಾಗಿಯೇ ಮಾಡುತ್ತಿರುವುದನ್ನು, ನೋಡುತ್ತಿರುವುದನ್ನು ಪ್ರಗತಿಪರರು ಎಂದು ಹೇಳಿಕೊಳ್ಳುವ, ವೇದಿಕೆಗಳಲ್ಲಿ ನಿಂತು ದಲಿತರ ಬಗ್ಗೆ ಮಾತನಾಡುವವರಾದರೂ ಇಂತಹವರಿಗೆ ಸೂಕ್ಷ್ಮವಾಗಿ ಕರೆದು ಎಲ್ಲಾರನ್ನು ಕರೆದು, ಎಲ್ಲಾರನ್ನೂ ಈ ಮುಖಾಂತರವಾದರೂ ತೋರಿಕೆಗಾದರೂ ಒಂದಾಗಿ ಒಡಕು ತೋರಿಸಬೇಡಿ ಎಂದು ಹೇಳಬೇಕಿತ್ತು, ಇಂತಹ ಸೋಗಲಾಡಿ ಪ್ರಗತಿಪರ ದಲಿತ ಬುದ್ದಿ ಜೀವಿಗಳು ಮಾಡದಿರುವುದು ಒಂದು ಮಾಗಿದ ಕಾಲದಲ್ಲಿ ಬಂದಂತಹ ದಸಂಸ 50ರ ಸುವರ್ಣೋತ್ಸವ ಕಾರ್ಯಕ್ರಮ ಆತ್ಮಾವಲೋಕನವಿಲ್ಲದೆ ನಡೆದರೆ ದಲಿತರ ಬಾಗಿಲಿಗೆ ಬಂಗಾರದ ತಗಡು ಬಪ್ಪುದೇ….! ಎಂಬಂತೆ ಈ ಕಾರ್ಯಕ್ರಮವೂ ಎರಡನೆಯದರಲ್ಲಿ ಮೂರನೆಯದಾಗುತ್ತಿರುವುದು ನನ್ನಂತವನಿಗೆ ವಿಷಾದ ಕಾಡಲಿದೆ.
ಇಂತಹ ಕಾರ್ಯಕ್ರಮಗಳು ಸಣ್ಣ-ಪುಟ್ಟ ಜಾತಿಗಳನ್ನು ಸೇರಿಸಿಕೊಂಡು ಹೊಸ ರೂಪವನ್ನು ದಸಂಸಗೆ ಕೊಟ್ಟಿದ್ದರೆ ಹೊಸ ಒಂದು ಆಲೋಚನೆ, ಸಂಘಟನೆ ಹೊರ ಹೊಮ್ಮಲು ಸಹಕಾರಿಯಾಗುತ್ತಿತ್ತು.
ನನ್ನನ್ನೂ ಒಳಗೊಂಡಂತೆ ಹತ್ತಾರು ದಲಿತ, ದಲಿತ ಸಂಘಟನೆ ಚಳುವಳಿಗಳಲ್ಲಿ ಭಾಗವಹಿಸಿದ ಪತ್ರಕರ್ತರಿದ್ದೇವೆ, ನೂರಾರು ಜನ ಚಿಂತಕರು, ಪ್ರಗತಿಪರರಿದ್ದಾರೆ ಇಂತಹವರಿಗೆಲ್ಲಾ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ತಲುಪಿಸಬೇಕಾಗಿತ್ತು, ಹಲವಾರು ಜನ ನನ್ನನ್ನೇ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬೇಕೆಂದಾಗ ಏನು ಹೇಳುಬೇಕೆಂಬುದೇ ತೋಚಲಿಲ್ಲ, ನಾವು ಕೂಡ ನಮ್ಮ ಆತ್ಮಗಳನ್ನು ಆತ್ಮಾವಲೋಕನ ಮಾಡಿಕೊಳ್ಳುವ ಕಾಲ ಸನ್ನಿಹಿತವಾಗಿದೆ ಎಂದುಕೊಳ್ಳೋಣ.
ದಸಂಸ 50ರ ಸುವರ್ಣೋತ್ಸವ ಯಶಸ್ಸಾಗಲಿ.
-ವೆಂಕಟಾಚಲ.ಹೆಚ್.ವಿ.