ವಿದ್ಯಾರ್ಥಿಗಳಿಗೆ ಒಳ್ಳೆಯ ಅಂಕಗಳ ಜೊತೆಗೆ, ಒಳ್ಳೆಯ  ನಡತೆ, ವ್ಯಕ್ತಿತ್ವ ಬೆಳೆಸಿಕೊಂಡಲ್ಲಿ  ಸಾಧನೆಗೆ ಪೂರಕ

ತುಮಕೂರು:ವಿದ್ಯಾರ್ಥಿಗಳಿಗೆ ಒಳ್ಳೆಯ ಅಂಕಗಳ ಜೊತೆಗೆ, ಒಳ್ಳೆಯ ನಡತೆ,ಹಿರಿಯರಲ್ಲಿ ಗೌರವ,ಎಲ್ಲವನ್ನು ಗ್ರಹಿಸುವ ಶಕ್ತಿ ಬೆಳೆಸಿಕೊಂಡಲ್ಲಿ,ಸಾಧನೆಗೆ ಪೂರಕ ವ್ಯಕ್ತಿತ್ವ ನಿಮ್ಮಲ್ಲಿ ರೂಪಗೊಳ್ಳುತ್ತದೆ ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ಡಾ.ಬಿ.ಆರ್.ಮಮತ ತಿಳಿಸಿದ್ದಾರೆ.

ಕುವೆಂಪು ನಗರದ ಕೃಷಿಕ್ ಸರ್ವೋದಯ ಫೌಂಡೇಶನ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವಿಕಲಚೇತನರು, ಅನಾಥರು, ಏಕಪೋಷಕ ಮಕ್ಕಳು, ಬಡತನದ ಪ್ರತಿಭಾವಂತ ಮಕ್ಕಳಿಗೆ ವೂಡೇ ಪ್ರತಿಷ್ಠಾನ ನೀಡಿದ ಪುರಸ್ಕಾರ ಹಾಗೂ ಪ್ರೋತ್ಸಾಹಧನ ವಿತರಿಸಿ ಮಾತನಾಡುತಿದ್ದ ಅವರು,ಪ್ರತಿಷ್ಠಾನ ಅಶಕ್ತ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುತ್ತಾ ಬಂದಿದೆ. ಈ ನೆರವು, ಅವಕಾಶವನ್ನು ಬಳಸಿಕೊಂಡು ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಮಾಡಿ ಉನ್ನತ ಸ್ಥಾನ ಪಡೆದು ಮುಂದೆ ನೀವೂ ಸಮಾಜದ ಅಶಕ್ತರಿಗೆ ನೆರವಾಗುವ ಶಕ್ತಿ ಬೆಳೆಸಿಕೊಳ್ಳಬೇಕು. ದೀಪದಿಂದ ದೀಪ ಹಚ್ಚಿ ಸಮಾಜ ಬೆಳಗುವಂತಾಗಬೇಕು ಎಂದು ಹೇಳಿದರು.ಎಲ್ಲಾ ಶಕ್ತಿ ಇರುವವರು ಅಶಕ್ತರಿಗೆ ಸಹಾಯ ಮಾಡಿ ಅವರನ್ನು ಮೇಲಕ್ಕೆ ತರುವಂತೆ ಎಲ್ಲಾ ಧರ್ಮಗಳು ಹೇಳುತ್ತವೆ. ದುಡಿದ ಹಣದಲ್ಲಿ ಇಂತಿಷ್ಟಾದರೂ ಸಮಾಜದ ಒಳಿತಿಗೆ ಬಳಸಬೇಕು ಆ ಮೂಲಕ ಸಮಾಜದ ಋಣ ತೀರಿಸುವ ಪ್ರಯತ್ನ ಮಾಡಬೇಕು. ಹೆಣ್ಣುಮಕ್ಕಳು ಉತ್ತಮ ಶಿಕ್ಷಣ ಪಡೆದು ತಮ್ಮ ಕಾಲ ಮೇಲೆ ತಾವು ನಿಂತು ಸ್ವಾಭಿಮಾನಿಗಳಾಗಬೇಕು, ಆದರೆ ಅಹಂಕಾರ ಪಡಬಾರದು. ಅಗತ್ಯವಿಲ್ಲದ ವಿಚಾರಗಳಿಗೆ ಆಕರ್ಷಿತರಾಗುವುದರಿಂದ ಓದಿನಲ್ಲಿ ಹಿನ್ನಡೆಯಾಗಿ ಗುರಿ ಸಾಧನೆಗೆ ತೊಡಕಾಗುತ್ತದೆ ಎನ್ನುವ ಎಚ್ಚರಿಕೆ ನೀಡಿದರು.

ಹೇರಿಟೇಜ್ ಫೌಂಡೇಷನ್‌ನ ಸಿಇಓ ಕಲ್ಪನಾ ಹಾಲಪ್ಪ ಮಾತನಾಡಿ,ಬದುಕಿನಲ್ಲಿ ಹಲವು ರೀತಿಯ ಸವಾಲುಗಳು ಎದುರಾಗುತ್ತವೆ. ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ಶಕ್ತಿ, ಮನಸ್ಥಿತಿ ಬೆಳೆಸಿಕೊಳ್ಳಬೇಕು. ಹೆಣ್ಣುಮಕ್ಕಳು ಹೆಚ್ಚಿನ ಶಿಕ್ಷಣ ಪಡೆಯುವುದರಿಂದ ಆರ್ಥಿಕ ಶಿಸ್ತು, ಸಮಾಜ ಮತ್ತು ಸಂಸಾರದಲ್ಲಿ ಬದಲಾವಣೆ, ಸ್ವಾವಲಂಬಿ ಬದುಕು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ನುಡಿಯನ್ನು ನಾವು ಬಹಳ ವರ್ಷಗಳಿಂದ ಕೇಳುತ್ತಿದ್ದೇವೆ.

ವಿದ್ಯೆಯ ಮೂಲಕ ಸ್ವಾವಲಂಭಿ ಜೀವನ ನಡೆಸಲು ಸಾಧ್ಯ ಒಮ್ಮೆ ಹೆಣ್ಣು ಮಗಳು ಅರ್ಥಿಕವಾಗಿ ಸದೃಢತೆಯನ್ನು ಗಳಿಸಿಕೊಂಡರೆ, ಅದರಿಂದ ಸಮಾಜಕ್ಕೆ,ಕುಟುಂಬಕ್ಕೆ, ದೇಶಕ್ಕೆ ಒಳಿತಾಗುತ್ತದೆ.ಇಂದಿನ ವೇದಿಕೆಯಲ್ಲಿಯೇ ವಿದ್ಯೆಯ ಮೂಲಕ ಸ್ವಾವಲಂಭಿ ಜೀವನ ನಡೆಸುತ್ತಿರುವ ಅನೇಕ ಮಾದರಿಗಳು ನಿಮ್ಮ ಮುಂದಿವೆ. ಇವರನ್ನು ಆದರ್ಶವಾಗಿಟ್ಟುಕೊಂಡು ನೀವುಗಳು ಒಳ್ಳೆಯ ಜೀವನದ ಕಡೆಗೆ ಮುನ್ನೆಡೆಯಬೇಕು ಎಂದು ಕಲ್ಪನಾ ಹಾಲಪ್ಪ ಸಲಹೆ ನೀಡಿದರು.

ವೇದಿಕೆಯಲ್ಲಿ ಮಹಿಳಾ ಠಾಣೆಯ ಇನ್ಸ್ಪೆಕ್ಟರ್ ವಿಜಯಲಕ್ಷಿ, ವುಡೇ ಪ್ರತಿಷ್ಠಾನದ ಅನುಪಮ, ಲಲಿತಾ ಮಲ್ಲಪ್ಪ, ಹಾಲಪ್ಪ ಫೌಂಡೇಶನ್ ಅಧ್ಯಕ್ಷ ಮುರಳಿಧರ ಹಾಲಪ್ಪ,ನಿವೃತ್ತ ಪ್ರಾಂಶುಪಾಲರಾದ ಪ್ರೊ.ಕೆ.ಚಂದ್ರಣ್ಣ,ಶುದ್ಧಿ ಚಾರಿಟಬಲ್ ಅಂಡ್ ಎಜುಕೇಷನಲ್ ಟ್ರಸ್ಟ್ನ ಸೌಮ್ಯ ಪ್ರದೀಪ್, ಕೃಷಿಕ್ ಫೌಂಡೇಶನ್‌ನ ಹೆಚ್.ವಿ.ಸುಗುಣ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *