ತುಮಕೂರು- ಕಲ್ಪತರುನಾಡಿನ ಜಿಲ್ಲಾ ಕೇಂದ್ರವಾದ ತುಮಕೂರು ನಗರದ ಹೃದಯ ಭಾಗದ ಟೌನ್‍ಹಾಲ್‍ನಲ್ಲಿರುವ ಮಹಾನಗರ ಪಾಲಿಕೆ ಆವರಣದಲ್ಲಿ ಅಳವಡಿಸಲು ಉದ್ದೇಶಿಸಿರುವ ಹೆಚ್‍ಎಎಲ್ ಕಂಪೆನಿಯ ಹೆಲಿಕಾಪ್ಟರ್ ಮಾದರಿ ಉದ್ಘಾಟನೆಗೆ ಸಜ್ಜಾಗಿದೆ.
ಇಲ್ಲಿನ ಮಹಾನಗರ ಪಾಲಿಕೆ ಆವರಣದಲ್ಲಿ ಏ. 14 ರಂದು ಅಂಬೇಡ್ಕರ್ ಜಯಂತಿ ಪ್ರಯುಕ್ತ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ರವರ ಕಂಚಿನ ಪುತ್ಥಳಿ ಅನಾವರಣಗೊಳಿಸಲು ಸಿದ್ದತೆ ನಡೆಸಲಾಗಿದೆ. ಹಾಗೆಯೇ ಇದರೊಂದಿಗೆ ಗುಬ್ಬಿ ಬಳಿ ಇರುವ ಹೆಚ್‍ಎಎಲ್ ಘಟಕದ ಪ್ರತೀಕವಾಗಿ ಹೆಲಿಕಾಪ್ಟರ್ ಮಾದರಿಯನ್ನು ಅಳಡಿಸಿ ಉದ್ಘಾಟಿಸಲು ಸಿದ್ದತೆ ನಡೆಸಲಾಗಿದೆ.
ಈಗಾಗಲೇ ಹೆಲಿಕಾಪ್ಟರ್ ಅಳವಡಿಕೆ ಕಾರ್ಯ ಬಹುತೇಕ ಸಂಪೂರ್ಣಗೊಂಡಿದ್ದು, ಇಂದು ಮುಂಜಾನೆ ಮಾದರಿ ಹೆಲಿಕಾಪ್ಟರ್‍ನ್ನು ಹೆಚ್‍ಎಎಲ್ ಘಟಕದ ವತಿಯಿಂದ ತಂದು ಪಾಲಿಕೆ ಆವರಣದಲ್ಲಿ ಇಳಿಸಲಾಗಿದೆ.
ಏ. 14 ರಂದು ಪಾಲಿಕೆ ಆವರಣದಲ್ಲಿ ಅಂಬೇಡ್ಕರ್ ಪುತ್ಥಳಿ ಹಾಗೂ ಹೆಚ್‍ಎಎಲ್ ಹೆಲಿಕಾಪ್ಟರ್ ಮಾದರಿ ಉದ್ಘಾಟನೆಗೊಳ್ಳಲಿದ್ದು, ಈ ಎರಡೂ ಸಹ ತುಮಕೂರು ನಗರಕ್ಕೆ ಆಗಮಿಸುವ ಜನರ ಪ್ರಮುಖ ಆಕರ್ಷಣೆಯಾಗಲಿವೆ.
ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಸೂಚನೆ ಮೇರೆಗೆ ಜಿಲ್ಲಾಡಳಿತ ಅಂಬೇಡ್ಕರ್ ಪುತ್ಥಳಿ ಅನಾವರಣ ಹಾಗೂ ಹೆಲಿಕಾಪ್ಟರ್ ಮಾದರಿ ಉದ್ಘಾಟನೆಗೆ ಸಕಲ ಸಿದ್ದತೆ ಮಾಡಿಕೊಂಡಿದೆ.