ಮಾರ್ಚ್ 28ರಂದು ‘ಜ್ಞಾನಸಿರಿ’ ಕ್ಯಾಂಪಸ್‍ನಲ್ಲಿ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರ ಉದ್ಘಾಟನೆ

ತುಮಕೂರು ವಿಶ್ವವಿದ್ಯಾನಿಲಯದ ನೂತನ ಕ್ಯಾಂಪಸ್ ‘ಜ್ಞಾನಸಿರಿ’ಯಲ್ಲಿ ನಿರ್ಮಿಸಲಾಗಿರುವ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ರಾಜ್ಯ ಸಣ್ಣ ನೀರಾವರಿ, ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್. ಎಸ್. ಬೋಸರಾಜು ಅವರು ಮಾರ್ಚ್ 28 ರಂದು ಶುಕ್ರವಾರ ಬೆಳಗ್ಗೆ 10 ಕ್ಕೆ ಲೋಕಾರ್ಪಣೆಗೊಳಿಸಲಿದ್ದಾರೆ.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಮೋಶನ್ ಸೊಸೈಟಿ (ಕೆಸ್ಟೆಪ್ಸ್) ಅನುದಾನದಲ್ಲಿ ಈ ವಿಜ್ಞಾನ ಕೇಂದ್ರವನ್ನು ನಿರ್ಮಿಸಲಾಗಿದೆ.

ಕೇಂದ್ರ ಜಲಶಕ್ತಿ ಹಾಗೂ ರೈಲ್ವೇ ಖಾತೆ ರಾಜ್ಯ ಸಚಿವರು ಹಾಗೂ ತುಮಕೂರು ಸಂಸದರಾದ ಮಾನ್ಯ ಶ್ರೀ ವಿ. ಸೋಮಣ್ಣ, ಕರ್ನಾಟಕದ ಗೃಹಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ, ಉನ್ನತ ಶಿಕ್ಷಣ ಸಚಿವರಾದ ಮಾನ್ಯ ಡಾ. ಎಂ. ಸಿ. ಸುಧಾಕರ್, ಸಹಕಾರ ಸಚಿವರಾದ ಕೆ. ಎನ್. ರಾಜಣ್ಣ ಅವರು ಈ ಕಾರ್ಯಕ್ರಮದಲ್ಲಿ ಘನ ಉಪಸ್ಥಿತಿ ವಹಿಸಲಿದ್ದಾರೆ. ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಬಿ. ಸುರೇಶ್ ಗೌಡ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಉಪಪ್ರಾದೇಶಿಕ ವಿಜ್ಞಾನ ಕೇಂದ್ರದ ಅಧ್ಯಕ್ಷರೂ ಆಗಿರುವ ಕುಲಪತಿಗಳಾದ ಪ್ರೊ. ಎಂ. ವೆಂಕಟೇಶ್ವರಲು, ಕುಲಸಚಿವರಾದ ಶ್ರೀಮತಿ ನಾಹಿದಾ ಜûಮ್ ಜûಮ್ ಉಪಸ್ಥಿತರಿರುವರು.

ವಿಜ್ಞಾನವನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ರೂ. 3.65 ಕೋಟಿ ವೆಚ್ಚದಲ್ಲಿ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಿದ್ದು, ಇದರಲ್ಲಿ ಒಳಾಂಗಣ ಮತ್ತು ಹೊರಾಂಗಣ ಪ್ರಾತ್ಯಕ್ಷಿಕೆಗಳು ಇರುತ್ತವೆ. ತುಮಕೂರಿನ ನಿರ್ಮಿತಿ ಕೇಂದ್ರವು ಈ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ವಿಜ್ಞಾನ ಕೇಂದ್ರಕ್ಕಾಗಿ ಬಿದರಕಟ್ಟೆ ‘ಜ್ಞಾನಸಿರಿ’ ಕ್ಯಾಂಪಸಿನಲ್ಲಿ ಐದು ಎಕರೆ ಜಾಗವನ್ನು ಮೀಸಲಿಡಲಾಗಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈ ಕೇಂದ್ರಕ್ಕೆ ಭೇಟಿ ನೀಡಲು ಅವಕಾಶವಿರುತ್ತದೆ.

Leave a Reply

Your email address will not be published. Required fields are marked *