ತುಮಕೂರು : ಆರ್.ಟಿ.ಇ. ಪ್ರವೇಶಾತಿಗೆ ಸಂಬಂಧಿಸಿದಂತೆ ಪೋಷಕರಲ್ಲಿ ವ್ಯಾಪಕ ಅರಿವು ಮೂಡಿಸಿ ಜಿಲ್ಲೆಯ ಖಾಸಗಿ ಶಾಲೆಗಳಲ್ಲಿ ಆರ್‍ಟಿಇ ಪ್ರವೇಶಾತಿ ಹೆಚ್ಚಿನ ಸಂಖ್ಯೆಯಲ್ಲಿ ನೆಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಡಿಡಿಪಿಐ ಹಾಗೂ ಬಿಇಓಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿಂದು ನಡೆದ ಪತ್ರಿಕಾಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಿರೀಕ್ಷಿತ ಪ್ರಮಾಣದಲ್ಲಿ ಆರ್.ಟಿ.ಇ.ಸೀಟುಗಳು ಭರ್ತಿಯಾಗುತ್ತಿಲ್ಲ, ಆರ್.ಟಿ.ಇ. ಸೀಟುಗಳಿಗೆ ಸಂಬಂಧಿಸಿದಂತೆ ಪೋಷಕರು ತಮಗಾಗುತ್ತಿರುವ ಸಮಸ್ಯೆಗಳ ಕುರಿತಂತೆ ಹೆದರದೆ ದೂರು ಕೊಡಬೇಕು ಮತ್ತು ನಿಗಧಿತ ಶುಲ್ಕಕ್ಕಿಂತ ಹೆಚ್ಚು ಶುಲ್ಕವನ್ನು ಆರ್‍ಟಿಇ ಸೀಟುಗಳಿಗೆ ಖಾಸಗಿ ಶಾಲೆಗಳು ವಸೂಲಿ ಮಾಡುವಂತಿಲ್ಲ ಎಂದು ತಿಳಿಸಿದರು.
ಇಂದಿರಾ ಕ್ಯಾಂಟಿನ್‍ಗಳಲ್ಲಿ ಶುಚಿತ್ವ ಹಾಗೂ ಗುಣಮಟ್ಟ ಕಾಪಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಆಹಾರದ ಮೆನು ಬದಲಾಯಿಸುವಂತೆ ತಿಳಿಸಲಾಗಿದೆ. ಮುಚ್ಚಲಾಗಿದ್ದ ಶೌಚಾಲಯಗಳನ್ನು ತೆರೆಯಲಾಗಿದೆ ಮತ್ತು ಇಂದಿರಾ ಕ್ಯಾಂಟೀನ್ ಇರುವ ಕಡೆ ಕಡ್ಡಾಯವಾಗಿ ಸಿಸಿ ಟಿವಿ ಅಳವಡಿಸುವಂತೆ ಸಹ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳ ಸಾವಿನ ಪ್ರಕರಣಗಳನ್ನು ತಗ್ಗಿಸಲು ಅಗತ್ಯ ಮಕ್ಕಳ ತಜ್ಞರು, ಗೈನಾಕಲಾಜಿಸ್ಟ್ ಮತ್ತು ಆರೈಕೆ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಬೇಕಾಗುತ್ತದೆ. ಈ ಕುರಿತಂತೆ ಡಿಹೆಚ್‍ಓಗೆ ಸೂಚನೆ ನೀಡಲಾಗುವುದು ಮತ್ತು ಜಿಲ್ಲಾಸ್ಪತ್ರೆಗೆ ಸ್ವತಃ ಭೇಟಿ ನೀಡುವುದಾಗಿ ತಿಳಿಸಿದ ಜಿಲ್ಲಾಧಿಕಾರಿಗಳು, ನಕಲಿ ವೈದ್ಯರುಗಳು ಮತ್ತು ಭ್ರೂಣಲಿಂಗ ಪತ್ತೆ ಅಕ್ರಮಗಳಿಗೆ ಸಂಬಂಧಿಸಿದಂತೆ ಅಗತ್ಯ ತಪಾಸಣೆಗಳನ್ನು ಕೈಗೊಳ್ಳುವಂತೆ ಡಿಹೆಚ್‍ಓಗೆ ಸೂಚಿಸುವುದಾಗಿ ತಿಳಿಸಿದರು.
ಮನೆಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿರುವ ಬಗ್ಗೆ ದೂರು ಬಂದಲ್ಲಿ ಅಬಕಾರಿ ನಿರೀಕ್ಷಕರುಗಳನ್ನು ತಕ್ಷಣವೇ ದೂರು ಬಂದ ಕಡೆ ನಿಯೋಜಿಸಿ ಅಕ್ರಮ ಮದ್ಯ ಮಾರಾಟವನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಅಬಕಾರಿ ಡಿಸಿ ಅವರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಹಿಂದೂ ರುದ್ರಭೂಮಿ ಭರ್ತಿಯಾಗಿ ಶವ ಸಂಸ್ಕಾರಕ್ಕೆ ಸ್ಥಳಾವಕಾಶ ಇಲ್ಲದಿದ್ದಲ್ಲಿ ಜಾಗ ಮಂಜೂರು ಮಾಡಲು ಅರ್ಜಿ ಸಲ್ಲಿಸಿದ್ದಲ್ಲಿ ಮಂಜೂರು ಮಾಡಲಾಗುವುದು. ಮುಂದಿನ ದಿನಗಳಲ್ಲಿ ಪಾಲಿಕೆ ವತಿಯಿಂದ ಶವ ಸಂಸ್ಕಾರಕ್ಕೆ ಸಂಬಂಧಿಸಿದ ವಿದ್ಯುತ್ ದಹನದ ವ್ಯವಸ್ಥೆ ಮಾಡಲು ಆಯುಕ್ತರಿಗೆ ಸೂಚಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂದಾಯ ಪ್ರಕರಣಗಳನ್ನು ಬಹುತೇಕ ಇತ್ಯರ್ಥಗೊಳಿಸಲಾಗಿದೆ. 665 ಅರ್ಜಿಗಳು ಪಿಂಚಣಿಗೆ ಬಾಕಿ ಇದ್ದು, ಇವುಗಳನ್ನೂ ಸಹ ಇತ್ಯರ್ಥಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಅವರು ಮಾತನಾಡಿ, ಸುಮಾರು 2500 ಕೋಟಿ ರೂ. ವೆಚ್ಚದಲ್ಲಿ ಜಿಲ್ಲೆಯಲ್ಲಿ ಮಹತ್ವಾಕಾಂಕ್ಷಿ ಜಲಜೀವನ್ ಮಿಷನ್ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು, ಶೇ.8ರಷ್ಟು ಯೋಜನೆ ಪೂರ್ಣಗೊಂಡಿದ್ದು, ಶೇ. 92ರಷ್ಟು ಬಾಕಿ ಇದೆ. ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಪಾರದರ್ಶಕವಾಗಿ ಹಂತ-ಹಂತವಾಗಿ ಅನುಷ್ಟಾನಗೊಳಿಸಲಾಗುವುದು ಎಂದರು.
ಜಿಲ್ಲೆಯಾದ್ಯಂತ ಕಾರ್ಯ ನಿರ್ವಹಿಸುತ್ತಿರುವ ಆರ್‍ಓ ಘಟಕಗಳಿಗೆ ಇನ್ನು ಮುಂದೆ ಆರ್‍ಓ ಘಟಕ ಸುಸ್ಥಿತಿಯಲ್ಲಿರುವ ಪ್ರಮಾಣ ಪತ್ರ ಆಧರಿಸಿ ಪಾವತಿ ಮಾಡಲಾಗುವುದು ಎಂದ ಅವರು, ಮುಂದಿನ ಮೂರು ತಿಂಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿದ್ದಲ್ಲಿ ಕಳೆದ 10 ವರ್ಷಗಳ ಆಕ್ಷನ್ ಪ್ಲಾನ್ ಆಧರಿಸಿ ಯಾವ ಯಾವ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ ಆ ಗ್ರಾಮಗಳಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ತಾವು ಅಧಿಕಾರಿ ವಹಿಸಿಕೊಂಡ ದಿನದಿಂದ 30 ಇಲಾಖೆಗಳ ಪರಿಶೀಲನಾ ಸಭೆಯನ್ನು ನಡೆಸಿದ್ದು, ಪ್ರತಿ 15 ದಿನಗಳಿಗೊಮ್ಮೆ ಇಲಾಖೆಗಳು ಕಾಮಗಾರಿಗಳಿಗೆ ಸಂಬಂಧಿಸಿದಂತೆ ಓಪನಿಂಗ್ ಬ್ಯಾಲೆನ್ಸ್ ಮತ್ತು ಕ್ಲೋಸಿಂಗ್ ಬ್ಯಾಲೆನ್ಸ್ ಮಾಹಿತಿಯನ್ನು ತಮಗೆ ಸಲ್ಲಿಸಬೇಕು. ಯಾವುದೇ ಕಡತಗಳು 30 ದಿನಗಳೊಳಗಾಗಿ ವಿಲೇವಾರಿಯಾಗಬೇಕು. ಹಾಜರಾತಿ ಮತ್ತು ಶಿಸ್ತು ಕಾಪಾಡಿಕೊಳ್ಳುವ ಬಗ್ಗೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಪಾಲಿಕೆ ಆಯುಕ್ತ ದರ್ಶನ್ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ಜಿಲ್ಲೆಯ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮದ ಪತ್ರಕರ್ತರು ಉಪಸ್ಥಿತರಿದ್ದರು.