ಹುಂಡಿ ಹಣ ಮುಜರಾಯಿ ದೇವಸ್ಥಾನಗಳ ಅಭಿವೃದ್ಧಿಗೆ ಬಳಸಲು ಮುರಳೀಧರ ಹಾಲಪ್ಪ ಒತ್ತಾಯ

ಕೊರಟಗೆರೆ: ತಾಲ್ಲೂಕಿನ ಮುಜರಾಯಿ ಇಲಾಖೆಗೆ ಸಂಬಂಧಪಟ್ಟ ದೇವಸ್ಥಾನಗಳ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಮುರಳೀಧರ ಹಾಲಪ್ಪ ಅವರು ತಹಶೀಲ್ದಾರ್ ಮುನಿಶಾಮಿರೆಡ್ಡಿ ಮತ್ತಿತರೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ತಾಲ್ಲೂಕಿನ ಪ್ರಸಿದ್ಧ ವಡ್ಡಗೆರೆ ಶ್ರೀ ವೀರನಾಗಮ್ಮ ದೇವಸ್ಥಾನದ ಆವರಣದಲ್ಲಿ ಸೋಮವಾರ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಮುರಳೀಧರ ಹಾಲಪ್ಪ ಅವರು, ಮಾ.23 ರಂದು ವಡ್ಡಗೆರೆ ಶ್ರೀ ವೀರನಾಗಮ್ಮ ಜಾತ್ರಾ ಮಹೋತ್ಸವದ ಅಂಗವಾಗಿ ಭಕ್ತಾಧಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸುವಂತೆ ಮನವಿ ಮಾಡಿದರು.

ರಾಜ್ಯಾದಾದ್ಯಂತ ಸರ್ಕಾರದ ಅಧೀನದಲ್ಲಿರುವ ದೇವಸ್ಥಾನಗಳಲ್ಲಿ ಪರಿಸ್ಥಿತಿಗಳು ತುಂಬಾ ಕಷ್ಟಕರವಾಗಿದ್ದು, ದೇವಸ್ಥಾನಗಳಿಂದ ಬರುವ ಆದಾಯ ಮುಜರಾಯಿ ಇಲಾಖೆ ಮೂಲಕ ಸರ್ಕಾರಕ್ಕೆ ಹೋಗುತ್ತಿದೆಯೇ ವಿನಃ ದೇವಸ್ಥಾನಗಳ ಅಭಿವೃದ್ಧಿಯಾಗುತ್ತಿಲ್ಲ ಎಂದರು.

ವಡ್ಡಗೆರೆ ಶ್ರೀ ವೀರನಾಗಮ್ಮ ದೇವಸ್ಥಾನದ ಪ್ರತಿ ವರ್ಷದ ಆದಾಯ ಸುಮಾರು 17-18 ಲಕ್ಷ ರೂ. ಇರಬಹುದು. ಇಷ್ಟುಮೊತ್ತದ ಹಣ ಮುಜರಾಯಿ ಇಲಾಖೆಗೆ ಸೇರುತ್ತಿದ್ದು, ಇಲಾಖೆಯಿಂದ ಈ ದೇವಸ್ಥಾನದ ನಿರ್ವಹಣೆಗಾಗಿ ವರ್ಷಕ್ಕೆ ಕೇವಲ ಏಳೆಂಟು ಸಾವಿರ ರೂ.ಗಳು ಮಾತ್ರ ಕೊಡುತ್ತಿರುವುದು ಬೇಸರ ತರಿಸಿದೆ. ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆಗೆ ಈಗಾಗಲೇ ಮನವಿಯನ್ನು ಸಹ ಸಲ್ಲಿಸಿ ದೇವಸ್ಥಾನ ಸುವ್ಯವಸ್ಥೆಗೆ, ಜಾತ್ರೆ ಹಾಗೂ ವಿಶೇಷ ಸಂದರ್ಭಗಳಲ್ಲಿ ಹೆಚ್ಚಿನ ಹಣವನ್ನು ಮಂಜೂರು ಮಾಡಬೇಕೆಂದು ಮುರಳೀಧರ ಹಾಲಪ್ಪ ಒತ್ತಾಯಿಸಿದರು.

Add

ಇಲ್ಲಿರುವ ವಡ್ಡಗೆರೆ ವೀರನಾಗಮ್ಮ ದೇವಸ್ಥಾನಕ್ಕೆ ಊಟದ ಹಾಲ್, ದೊಡ್ಡ ಸಭಾ ಭವನ ಅಗತ್ಯವಿದೆ. ಶೌಚಾಲಯ ಕೊರತೆ ಇದೆ. ಪೆನ್ಸಿಂಗ್ ಕಾಂಪೌಂಡ್ ನಿರ್ಮಾಣವಾಗಬೇಕಿದೆ. ನೀರಿನ ಸಮಸ್ಯೆ ಇದೆ. ಈ ಎಲ್ಲಾ ಸಮಸ್ಯೆಗಳಿಗೆ ಭಕ್ತಾಧಿಗಳು ಕೊಡುವ ಕಾಣಿಕೆಯಿಂದಲೇ ಈ ಎಲ್ಲವನ್ನೂ ಮಾಡಬಹುದು. ದೇವಸ್ಥಾನಗಳಲ್ಲಿ ಮೂಲಭೂತ ಸೌಲಭ್ಯಗಳ ಜೊತೆಗೆ ದೇವಸ್ಥಾನಗಳನ್ನು ಅಚ್ಚುಕಟ್ಟಾಗಿ ಇಡಬೇಕೆಂದು ಸಮಸ್ತ ಭಕ್ತಾಧಿಗಳ ಪರವಾಗಿ ತಾಲ್ಲೂಕು ಆಡಳಿತದ ಮುಖಾಂತರ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದೇವೆ ಎಂದರು.

ದೇವಸ್ಥಾನಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿದಲ್ಲಿ ವರ್ಷಕ್ಕೆ ಎರಡು ಮೂರು ಮಧುವೆಗಳು ನಡೆಯಲಿವೆ. ಭಕ್ತಾಧಿಗಳು ಸಹ ಮನಃಪೂರಕವಾಗಿ ಭಾಗವಹಿಸುತ್ತಾರೆ. ದೇವಸ್ಥಾನದ ಸ್ವಚ್ಚತೆಗಾಗಿ ಗ್ರೂಪ್ ಡಿ ನೌಕರರಿಬ್ಬರನ್ನು ನೇಮಕ ಮಾಡಿಕೊಂಡರೆ ದೇವಸ್ಥಾನ ನಿರ್ವಹಣೆ ಮತ್ತು ಸೆಕ್ಯೂರಿಟಿಯೂ ಇರುತ್ತದೆ. ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ದೇವಸ್ಥಾನ, ಪಟ್ಟಣದಲ್ಲಿರುವ ಗಂಗಾಧರೇಶ್ವರಸ್ವಾಮಿ ದೇವಸ್ಥಾನ, ಶ್ರೀರಾಮ ದೇವಸ್ಥಾನ, ವೆಂಕಟೇಶ್ವರಸ್ವಾಮಿ ದೇವಸ್ಥಾನ, ಹೀಗೆ ತಾಲ್ಲೂಕಿನಲ್ಲಿ 145ಕ್ಕೂ ಹೆಚ್ಚು ದೇವಸ್ಥಾನಗಳು ಮುಜರಾಯಿ ಇಲಾಖೆಗೆ ಒಳಪಟ್ಟಿವೆ. ಇಡೀ ಜಿಲ್ಲೆಯಾದ್ಯಂತ 1600ಕ್ಕೂ ಹೆಚ್ಚಿನ ದೇವಸ್ಥಾನಗಳು ಮುಜರಾಯಿ ಇಲಾಖೆಗೆ ಒಳಪಟ್ಟಿವೆ. ಈ ಎಲ್ಲಾ ದೇವಸ್ಥಾನಗಳಿಂದ ಪ್ರತೀವರ್ಷ ಕೋಟ್ಯಾಂತರ ರೂ. ಮುಜರಾಯಿ ಇಲಾಖೆಗೆ ಹೋಗುತ್ತಿದ್ದು, ಮುಜರಾಯಿ ಇಲಾಖೆಯಿಂದ ದೇವಸ್ಥಾನಗಳ ನಿರ್ವಹಣೆಗಾಗಿ ಕಡಿಮೆ ಹಣ ನೀಡಿ ದೇವಸ್ಥಾನಗಳ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಆದುದರಿಂದ ದೇವಸ್ಥಾನಗಳ ಅಭಿವೃದ್ಧಿಗೆ ದೇವಸ್ಥಾನಗಳಿಂದ ಬರುವ ಆದಾಯ ಬಹುಪಾಲು ಇಲ್ಲೇ ಬಳಕೆಯಾಗುವಂತೆ ಮಾಡಿದರೆ ದೇವಸ್ಥಾನಗಳು ಅಭಿವೃದ್ಧಿಯಾಗಲಿವೆ ಎಂದು ತಿಳಿಸಿದರು.

ಇದರ ಜೊತೆಗೆ ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿಗಳಲ್ಲಿ ಅತಿಹೆಚ್ಚು ಅಂಕ ಪಡೆದು ತೇರ್ಗಡೆಹೊಂದಿರುವಂತಹ ಭಕ್ತಾಧಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅವರನ್ನು ಉತ್ತೇಜಿಸುವಂತಹ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಹಾಜರಿದ್ದ ತಹಶೀಲ್ದಾರ್ ಮುನಿಶಾಮಿರೆಡ್ಡಿ ಮಾತನಾಡಿ, ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದರು.

ವಡ್ಡಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ವಸಂತರಾಜು ಮಾತನಾಡಿ, ಮಾ.23 ರಂದು ನಡೆಯಲಿರುವ ವಡ್ಡಗೆರೆ ಶ್ರೀ ವೀರನಾಗಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ಪಂಚಾಯಿತಿಯಿಂದ ಕುಡಿಯುವ ನೀರು, ಸ್ವಚ್ಚತೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ವಡ್ಡಗೆರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಂಗಶಾಮಯ್ಯ, ವಡ್ಡಗೆರೆ ವೀರನಾಗಮ್ಮ ದೇವಸ್ಥಾನ ಟ್ರಸ್ಟ್ ನಿರ್ದೇಶಕರಾದ ರಾಮಚಂದ್ರಯ್ಯ, ವೀರನಾಗಪ್ಪ, ರಾಮಯ್ಯ, ವಿ.ಸಿ ಕ್ಯಾತಯ್ಯ, ಕಾರ್ಯದರ್ಶಿ ವಿ.ನಾಗೇಶ್, ಮಾಜಿ ನಿರ್ದೇಶಕ ಮಂಜುನಾಥ್, ಅರ್ಚಕ ಶಿವಕುಮಾರಸ್ವಾಮಿ, ಮುಖಂಡರಾದ ಪುಟ್ಟಹರಿಯಪ್ಪ, ಮಹಿಳಾ ಮುಖಂಡರಾದ ಜಯಮ್ಮ, ಲಕ್ಷ್ಮಮ್ಮ ಹಾಗೂ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *