ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರನ್ನು ಭೇಟಿಮಾಡಿ ಹೆಚ್.ಎಸ್.ಆರ್.ಪಿ. ನಂಬರ್ ಪ್ಲೇಟ್ ಅಳವಡಿಕೆಗೆ ಸಮಯವಕಾಶ ವಿಸ್ತರಿಸಲು ಹಾಗೂ ನಿಗದಿಪಡಿಸಿದ ಮೊತ್ತವನ್ನು ಕಡಿತಗೊಳಿಸಲು ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್‌ಗಳಿಗೆ ಟೋಲ್‌ಗಳಲ್ಲಿ ವಿನಾಯಿತಿ ನೀಡಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ಪ್ರಸ್ತುತ ಹೆಚ್.ಎಸ್.ಆರ್.ಪಿ. ನಂಬರ್ ಪ್ಲೇಟ್ ಅಳವಡಿಕೆಗೆ ಜಿಲ್ಲಾ ಕೇಂದ್ರಗಳಿಗೆ ವಾಹನಗಳನ್ನು ತೆಗೆದುಕೊಂಡು ಹೋಗಬೇಕಾಗಿದ್ದು, ಜನಸಾಮಾನ್ಯರು ಕೇವಲ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ತಮ್ಮ ವಾಹನಗಳನ್ನು ಜಿಲ್ಲಾ ಕೇಂದ್ರಗಳಿಗೆ ತೆಗೆದುಕೊಂಡು ಹೋಗುವುದು ಕಷ್ಟಕರವಾಗಿದ್ದು, ತಾಲ್ಲೂಕು ಕೇಂದ್ರಗಳಲ್ಲಿಯೂ ಅಳವಡಿಸಲು ಕ್ರಮ ಕೈಗೊಳ್ಳಬೇಕಾಗಿರುತ್ತದೆ. ಅಲ್ಲದೇ ಆನ್‌ಲೈನ್‌ನಲ್ಲಿ ನೊಂದಣಿ ಮಾಡಲು ಸರ್ವರ್ ಸಮಸ್ಯೆ, ಗ್ರಾಮೀಣ ಭಾಗದ ಜನರಿಗೆ ಮಾಹಿತಿ ಕೊರತೆ ಸೇರಿದಂತೆ ಹಲವಾರು ಸಮಸ್ಯೆಗಳಿರುವುದರಿಂದ ಸಮಯವಕಾಶ ವಿಸ್ತರಿಸಲು ಹಾಗೂ ಪ್ರಸ್ತುತ ಹೆಚ್.ಎಸ್.ಆರ್.ಪಿ. ನಂಬರ್ ಪ್ಲೇಟ್ ಅಳವಡಿಕೆಗೆ ನಿಗದಿಪಡಿಸಿದ ಮೊತ್ತವು ದುಬಾರಿಯಾಗಿದ್ದು, ಇದರಿಂದಾಗಿ ಬಡ ಹಾಗೂ ಗ್ರಾಮೀಣ ಭಾಗದ ಜನರಿಗೆ ತುಂಬಾ ತೊಂದರೆ ಆಗುತ್ತಿದ್ದು, ಹೆಚ್.ಎಸ್.ಆರ್.ಪಿ. ನಂಬರ್ ಪ್ಲೇಟ್ ನಿಗದಿಪಡಿಸಿದ ಮೊತ್ತದಲ್ಲಿ ಶೇ.೫೦% ರಷ್ಟು ಕಡಿತಗೊಳಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲು ಕೋರಿದರು ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಜೊತೆಗೆ ಕ.ರಾ.ರ.ಸಾ.ನಿಗಮಗಳಲ್ಲಿ ಪ್ರಯಾಣಿಸುವ ಬಡ ಹಾಗೂ ಮಧ್ಯಮ ವರ್ಗದ ಜನರನ್ನು ಬಲಿಷ್ಠಗೊಳಿಸಲು ಕೆ.ಎಸ್.ಆರ್.ಟಿ.ಸಿ ಬಸ್‌ಗಳಿಗೆ ಎಲ್ಲಾ ಟೋಲ್‌ಗಳಲ್ಲಿ ವಿನಾಯಿತಿ ನೀಡಿದರೆ ಪ್ರಸ್ತುತ ಪ್ರಯಾಣಿಕರಿಂದ ಪಡೆಯುತ್ತಿರುವ ಹಣವನ್ನು ಪಡೆಯುವುದು ತಪ್ಪುವುದಲ್ಲದೇ ಬಸ್ಸಿನ ಪ್ರಯಾಣ ದರ ಮತ್ತಷ್ಟು ಕಡಿಮೆಯಾಗಿ ಜನರಿಗೆ ಅನುಕೂಲವಾಗುವುದರಿಂದ ಕೂಡಲೇ ಟೋಲ್‌ಗಳಲ್ಲಿ ವಿನಾಯಿತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲು ಕೋರಿದರು.
ಮೈಸೂರು ಮಹಾರಾಜರು ಹಾಗೂ ನಾಡಪ್ರಭು ಕೆಂಪೇಗೌಡರಂತೆ ತಮ್ಮ ದೂರದೃಷ್ಟಿ ಪರಿಕಲ್ಪನೆ ಹಾಗೂ ಇಚ್ಛಾಶಕ್ತಿ ಮನೋಭಾವನೆಯಿಂದ ಇಂದು ಸಾರಿಗೆ ಹಾಗೂ ಮುಜರಾಯಿ ಇಲಾಖೆಯಲ್ಲಿ ಪ್ರಗತಿಯ ಪರ್ವ ಆರಂಭವಾಗಿದೆ ಎಂದು ಶ್ಲಾಘಿಸಿದರು.