ಎನ್.ಸಿ.ಸಿ. ಕೆಡೆಟ್‌ಗಳಿಗೆ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮೀಸಲಾತಿಗೆ ಮುರಳೀಧರ ಹಾಲಪ್ಪ ಒತ್ತಾಯ

ತುಮಕೂರು: ಕೇಂದ್ರ ಸರಕಾರದ ಎಸ್.ಎಸ್.ಸಿ.ಯ ರೀತಿಯೇ ರಾಜ್ಯ ಸರಕಾರವೂ ಎನ್.ಸಿ.ಸಿ. ಕೆಡೆಟ್‌ಗಳಿಗೆ ಕೆಪಿಎಸ್‌ಸಿ ವತಿಯಿಂದ ನಡೆಯುವ ವಿವಿಧ ಹುದ್ದೆಗಳ ಪರೀಕ್ಷೆಯಲ್ಲಿ ಮೀಸಲಾತಿ ನೀಡುವ ಮೂಲಕ ಯುವಕರು ಹೆಚ್ಚು ಹೆಚ್ಚಾಗಿ ಎನ್.ಎಸ್.ಸಿ, ತರಬೇತಿ ಪಡೆಯಲು ನೆರವಾಗಬೇಕೆಂದು ಹಾಲಪ್ಪ ಪೌಂಢೇಷನ್‌ನ ಅಧ್ಯಕ್ಷ ಹಾಗೂ ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಒತ್ತಾಯಿಸಿದ್ದಾರೆ.

ನಗರದ ಟೌನ್‌ಹಾಲ್ ಮುಂಭಾಗದಲ್ಲಿ ಹಾಲಪ್ಪ ಪ್ರತಿಷ್ಠಾನ, ತುಮಕೂರು ವಿವಿ, ಎನ್.ಸಿ.ಸಿ., ಎನ್.ಎಸ್.ಎಸ್., ಸ್ಕೌಟ್ಸ್ ಅಂಡ್ ಗೈಡ್ಸ್, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಹಾಗೂ ಗೃಹರಕ್ಷಕ ದಳ ವತಿಯಿಂದ ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವದ ೨೫ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು, ರಾಜ್ಯದಲ್ಲಿಯೂ ಎನ್.ಸಿ.ಸಿ. ಖೋಟಾ ನೀಡುವುದರಿಂದ ಮಕ್ಕಳಲ್ಲಿ ಶಿಸ್ತು ಬದ್ದ ಜೀವನದ ಜೊತೆಗೆ, ಉತ್ತಮ ಪ್ರಜೆಗಳನ್ನು ರೂಪಿಸಲು ಸಾಧ್ಯವಾಗುತ್ತದೆ ಎಂದರು. ಯುವ ಸಬಲೀಕರಣವೇ ಇಂದಿನ ಕಾರ್ಗಿಲ್ ವಿಜಯೋತ್ಸವದ ಪ್ರಮುಖ ಉದ್ದೇಶವಾಗಿದೆ. ಜಿಲ್ಲೆಯಲ್ಲಿ ಮಾದಕ ವಸ್ತುಗಳ ವ್ಯಸನ ಹೆಚ್ಚಾಗಿದೆ. ಶಾಲಾ, ಕಾಲೇಜು ಮಕ್ಕಳು ಅತಿ ಹೆಚ್ಚಿನ ರೀತಿ ಇದಕ್ಕೆ ಬಲಿಯಾಗುತ್ತಿದ್ದು, ಇದನ್ನು ತಪ್ಪಿಸುವ ನಿಟ್ಟಿನ್ಲಲಿ ಎನ್.ಸಿ.ಸಿ, ಎನ್.ಎಸ್.ಎಸ್. ಹೋಂ ಗಾರ್ಡು, ಸ್ಕೌಟ್ಸ್ ಗೈಡ್‌ಗಳು ಮುಂದಾಗಬೇಕು. ದೇಶದ ಗಡಿಯನ್ನು ಸೈನಿಕರು ಕಾಯ್ದು ನಮ್ಮನ್ನು ರಕ್ಷಿಸುವ ರೀತಿ, ದೇಶದ ಒಳಗಿನ ಜನರನ್ನು ನಾವುಗಳು ವಿಚ್ಚಿದ್ರಕಾರಿ ಶಕ್ತಿಗಳಿಂದ ಕಾಪಾಡಲು ಒಂದಾಗಬೇಕಾಗಿದೆ. ತುಮಕೂರಿನಿಂದ ಇಡೀ ರಾಜ್ಯಕ್ಕೆ ಡ್ರಗ್ಸ್ ಮುಕ್ತ ಕ್ಯಾಂಪಸ್ ಎನ್ನುವ ಸಂದೇಶವನ್ನು ನಾವೆಲ್ಲರೂ ನೀಡಬೇಕಾಗಿದೆ ಎಂದು ಮುರುಳೀಧರ ಹಾಲಪ್ಪ ನೀಡಿದರು.

ಕಾರ್ಗಿಲ್ ಯುದ್ಧ ನಡೆದು ೨೫ ವರ್ಷಗಳು ಕಳೆದರು ಕೆಲ ಹುತಾತ್ಮ ಸೈನಿಕರ ಕುಟುಂಬಗಳಿಗೆ ಪರಿಹಾರ ದೊರೆತಿಲ್ಲ ಎಂಬ ಕೂಗು ಇದೆ.ಪರಿಹಾರ ದೊರೆಯದ ಸೈನಿಕರ ಕುಟುಂಬಗಳನ್ನು ಗುರುತಿಸಿ, ಅವರಿಗೆ ಪರಿಹಾರ ದೊರಕಿಸುವ ಕೆಲಸವನ್ನು ಮಾಡಬೇಕಿದೆ ಎಂದು ಮುರುಳೀಧರ ಹಾಲಪ್ಪ ನುಡಿದರು

ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಹವಾಲ್ದಾರ್ ನಾಗರಾಜು ಮಾತನಾಡಿ, ಕಾರ್ಗಿಲ್ ಯುದ್ದದಲ್ಲಿ ತಾವು ಪಾಲ್ಗೊಂಡ ರೀತಿಯನ್ನು ವಿವರಿಸಿ, ದೇಶದ ಅತ್ಯುತ್ತಮ ಸೇವೆಗಳಲ್ಲಿ ಸೇನೆಯೂ ಒಂದು. ದೇಶದ ಜನರನ್ನು ರಕ್ಷಿಸುವ ಹೊಣೆಗಾರಿಕೆ ಸೇನೆಯ ಮೇಲಿರುತ್ತದೆ. ಅದಕ್ಕೆ ತಮ್ಮ ಜೀವನದ ಕೊನೆಯ ಉಸಿರು ಇರುವವರೆಗೂ ಸೈನಿಕರು ಹೋರಾಡುತ್ತಾರೆ. ತುಮಕೂರಿಗೆ ಕಲ್ಪತರು ನಾಡು ಎಂಬ ಹೆಸರಿದೆ. ಇದರ ಜೊತೆಗೆ ಸೈನಿಕರ ನಾಡು ಎಂಬ ಹೆಸರು ತರುವ ನಿಟ್ಟಿನಲ್ಲಿ ನಾವೆಲ್ಲರೂ ಸೇನೆಗೆ ಸೇರುವತ್ತ ಗಮನಹರಿಸಬೇಕಾಗಿದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಎನ್.ಸಿ.ಸಿ. ಆಫಿಸರ್ ಕ್ಯಾಪ್ಟನ್ ರಾಮಲಿಂಗಾರೆಡ್ಡಿ, ಕಾರ್ಗಿಲ್ ಯುದ್ದ ಇಡೀ ವಿಶ್ವಕ್ಕೆ ಭಾರತೀಯ ಸೇನೆಯ ಶಕ್ತಿ, ಸಾಮರ್ಥ್ಯವನ್ನು ಪರಿಚಯಿಸುವ ಮೂಲಕ ವಿಶ್ವ ಗುರುವನ್ನಾಗಿಸಿದೆ. ೧೯೯೯ ಜುಲೈ ೨೬ ಇಡೀ ವಿಶ್ವಕ್ಕೆ ಭಾರತದ ಶಕ್ತಿಯನ್ನು ತೋರ್ಪಡಿಸಿದ ದಿನ. ಅತ್ಯಂತ ಕೊರೆಯುವ ಚಳಿಯಲ್ಲಿಯೂ ಲಡಾಕ್‌ನ ಕಾರ್ಗಿಲ್ ಪ್ರದೇಶದಲ್ಲಿ ಭಾರತೀಯ ಸೈನಿಕರ ಮೇಲೆ ದಾಳಿ ನಡೆಸುತ್ತಿದ್ದ ಉಗ್ರಗಾಮಿಗಳು ಮತ್ತು ಪಾಕ್ ಸೈನಿಕರನ್ನು ದೇಶದಿಂದ ಹೊಡೆದೊಡಿದ ದಿನ. ಇದು ಪಾಕಿಸ್ಥಾನದ ಮೇಲೆ ಭಾರತ ನಡೆಸಿದ ಮೂರನೇ ಯುದ್ದದ ವಿಜಯವಾಗಿದೆ. ಇದು ಚೀನಾ ಸೇರಿದಂತೆ ನೆರೆ ಹೊರೆಯ ರಾಷ್ಟ್ರಗಳಿಗೆ ಭಾರತ ನೀಡಿದ ಎಚ್ಚರಿಕೆಯ ಗಂಟೆಯಾಗಿದೆ. ಇದು ಭಾರತೀಯ ಸೈನಿಕರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಈ ಯುದ್ದದಲ್ಲಿ ೫೨೭ ಸೈನಿಕರು ವೀರ ಮರಣವನ್ನು ಹೊಂದಿದ್ದಾರೆ. ಇಂತಹ ದಿನವನ್ನು ನಾವೆಲ್ಲರೂ ಆಚರಿಸುವ ಮೂಲಕ ವೀರ ಮರಣ ಹೊಂದಿದ ಸೈನಿಕರಿಗೆ ಸಲ್ಲಿಸುವ ಗೌರವವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಎನ್.ಎಸ್.ಸಿ. ಮಕ್ಕಳಿಂದ ಶೋಕ ಚಕ್ರ ರಚಿಸಿ, ನೆರೆದಿದ್ದ ಗಣ್ಯರು ಶೋಕಚಕ್ರಕ್ಕೆ ಪುಷ್ಪಗುಚ್ಚ ಇರಿಸುವ ಮೂಲಕ ನಮನ ಸಲ್ಲಿಸಿದರು. ಕಾರ್ಗಿಲ್ ಯುದ್ದದ ಅಣುಕು ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ವೇದಿಕೆಯಲ್ಲಿ ಎನ್.ಎಸ್.ಸಿ ಹಿರಿಯ ಅಧಿಕಾರಿ ಕರ್ನಲ್ ಜಿ.ಎಸ್.ಗುಜ್ರಾಲ್, ಕರ್ನಲ್ ನರೇಂದ್ರ ಬಂಡಾರಿ, ಸುಬ್ಬೇದ್ದಾರ್ ಮೇಜರ್ ದಿನೇಶ್‌ಸಿಂಗ್,ಹೋಂ ಗಾರ್ಡ್ ಕಮಾಂಡೆಂಟ್ ಪಾತಣ್ಣ, ಸ್ಕೌಟ್‌ನ ಶ್ರೀಮತಿ ಸುಭಾಷಿಣಿ ರವೀಶ್, ಪಾಂಡುರಂಗಪ್ಪ, ಕ್ಯಾಪ್ಟನ್ ಜೈಪ್ರಕಾಶ್, ಹೆರಿಟೇಜ್ ಪೌಂಢಷನ್ ಸಿಇಓ ಕಲ್ಪನಾ ಮುರುಳೀಧರ್, ವಕೀಲ ಪೃಥ್ವಿ ಹಾಲಪ್ಪ, ಸಿದ್ದಲಿಂಗೇಗೌಡ, ಕ್ರೀಡಾಪುಟು ಟಿ.ಕೆ.ಆನಂದ್, ರೇವಣ್ಣಸಿದ್ದಯ್ಯ, ನಟರಾಜು, ಅದಿಲ್ ಪಾಷ, ಕುತುಬುದ್ದೀನ್, ಸುಕನ್ಯಾ, ವಸುಂಧರ, ಗೀತಾ, ವಿಪ್ರೋ, ಇನ್‌ಕ್ಯಾಪ್, ಕಿರ್ಲೋಸ್ಕರ್, ಹಿಮಾಲಯ ಹಾಗೂ ಮ್ಯಾನ್ ಅಂಡ್ ಹ್ಯುಮಲ್ ಕಂಪನಿಯ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *