
ತುಮಕೂರು: ಸನ್ಮಾನ್ಯ ಮುಖ್ಯಮಂತ್ರಿಗಳ ಜನತಾದರ್ಶನ ಕಾರ್ಯಕ್ರಮದಲ್ಲಿ ಜಿಲ್ಲೆಗೆ ಸಂಬಂಧಿಸಿದಂತೆ ಸ್ವೀಕರಿಸಲಾದ ಸುಮಾರು 300 ಸಾರ್ವಜನಿಕರ ಅರ್ಜಿಗಳನ್ನು ಮಾನವೀಯ ಹಿನ್ನಲೆಯಲ್ಲಿ ಪರಿಶೀಲಿಸಿ ವಿಲೇವಾರಿ ಮಾಡುವಂತೆ ಮತ್ತು ಈ ಮಾಸಾಂತ್ಯದೊಳಗಾಗಿ ಅರ್ಜಿಗಳ ವಿಲೇವಾರಿಗೆ ಸಂಬಂಧಿಸಿದಂತೆ ವರದಿ ನೀಡುವಂತೆ ಪ್ರಾದೇಶಿಕ ಆಯುಕ್ತರು ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ ಅವರು ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ 2023-24ನೇ ಸಾಲಿನ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲೆಗೆ ಸಂಬಂಧಿಸಿದಂತೆ ಸುಮಾರು 300 ಅರ್ಜಿಗಳು ಸ್ವೀಕೃತವಾಗಿದ್ದು, ಯಾವ ಅರ್ಜಿ ವಿಲೇವಾರಿ ಸಾಧ್ಯವಿಲ್ಲವೋ ಅಂತಹ ಅರ್ಜಿಗಳಿಗೆ ಸೂಕ್ತ ಹಿಂಬರಹ ನೀಡುವಂತೆ ತಿಳಿಸಿದರು.
ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ಶಾಲಾ ಕಾಲೇಜು ಮಕ್ಕಳುಗಳು ಬಸ್ಸಿನ ಫುಟ್‍ಬೋರ್ಡ್ ಮೇಲೆ ನಿಂತು ಪ್ರಯಾಣಿಸುತ್ತಿರುವುದು ತಮ್ಮ ಗಮನಕ್ಕೆ ಬಂದಿದ್ದು, ಇದು ಅತ್ಯಂತ ಅಪಾಯಕಾರಿ. ಆದುದರಿಂದ ಶಾಲಾ ಮಕ್ಕಳು ಫುಟ್‍ಬೋರ್ಡ್‍ನಲ್ಲಿ ನಿಂತು ಪ್ರಯಾಣಿಸದಂತೆ ಬಸ್ ನಿರ್ವಾಹಕರಿಗೆ ಸೂಚನೆ ನೀಡುವಂತೆ ಮತ್ತು ಪ್ರಯಾಣಿಕರು ಬಸ್ ಹತ್ತಿದ ತಕ್ಷಣ ಬಸ್ಸಿನ ಬಾಗಿಲುಗಳನ್ನು ಮುಚ್ಚುವ ನಿಟ್ಟಿನಿಲ್ಲಿ ಸೂಕ್ತ ಸುತ್ತೋಲೆ ಹೊರಡಿಸುವಂತೆ ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸೂಚಿಸಿದರು.
ಲೋಕೋಪಯೋಗಿ ಇಲಾಖೆ ನಿಯಂತ್ರಣದಲ್ಲಿರುವ ವಸತಿ ಗೃಹಗಳನ್ನು ಆದಷ್ಟು ಭರ್ತಿ ಮಾಡಬೇಕು. ಕ್ವಾಟ್ರಸ್‍ಗಳು ಖಾಲಿ ಉಳಿಯದಂತೆ ಕ್ರಮಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
2023-24ನೇ ಸಾಲಿನ ಎಂಪಿಕ್ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಲಿಂಕ್ ಡಾಕ್ಯುಮೆಂಟ್ ಕಾಮಗಾರಿಗಳನ್ನು ಸಾಧ್ಯವಾದಷ್ಟು ಈ ಮಾಸಾಂತ್ಯದೊಳಗೆ ಮುಗಿಸುವಂತೆ ಸೂಚಿಸಿದರು.
ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗವು ಒಂದು ಪ್ರಮುಖ ಇಲಾಖೆಯಾಗಿದ್ದು, ವಿವಿಧ ಇಲಾಖಾವಾರು ಯಾವ ಯಾವ ಕೆಲಸಗಳು ಪಿಆರ್‍ಇಡಿ ವಿಭಾಗದಲ್ಲಿ ಬಾಕಿ ಇದೆ ಎಂಬುದರ ಕುರಿತು ಪಟ್ಟಿ ನೀಡಿ ವರದಿ ನೀಡಲು ಜಿಲ್ಲಾ ಪಂಚಾಯತ್ ಸಿಇಓ ಅವರಿಗೆ ಸೂಚಿಸಿದರು.
ಪ್ರಸವ ಪೂರ್ವ ಲಿಂಗ ಪತ್ತೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಜನರಿಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವ ಸಂಬಂಧ ಒಂದು ಹೆಲ್ಪ್‍ಲೈನ್ ಸ್ಥಾಪಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಎಲ್ಲಾ ಇಲಾಖೆಗಳಲ್ಲಿ ಅನುಮೋದನೆಯಾಗಿರುವ ಕಾಮಗಾರಿಗಳು ಇಲ್ಲಿಯವರೆಗೆ ಶೇ.70ರಷ್ಟು ಪೂರ್ಣಗೊಂಡಿದ್ದು, ಇನ್ನೆರಡು ತಿಂಗಳೊಳಗಾಗಿ ಎಲ್ಲಾ ಕಾಮಗಾರಿಗಳು ಶೇ. 100ರಷ್ಟು ಪೂರ್ಣಗೊಳ್ಳಬೇಕು ಎಂದು ತಾಕೀತು ಮಾಡಿದರು.
ತದನಂತರ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಮತ್ತು ಶಕ್ತಿ ಯೋಜನೆಯ ಪ್ರಗತಿ ಪರಿಶೀಲನೆಯನ್ನು ಪ್ರಾದೇಶಿಕ ಆಯುಕ್ತರು ಈ ಸಂದರ್ಭ ನಡೆಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಸಿಇಓ ಪ್ರಭು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.