ಬಡವರಿಗೆ ಸ್ವಾಭಿಮಾನದ ಬದುಕು ಕಲ್ಪಿಸುವ ಕೇಂದ್ರದ ಪರಿಣಾಮಕಾರಿ ಅನುಷ್ಟಾನಕ್ಕೆ ಸೂಚನೆ

ತುಮಕೂರು : ಕುಶಲಕರ್ಮಿಗಳು ಹಾಗೂ ಬಡವರಿಗೆ ಸ್ವಾಭಿಮಾನದ ಬದುಕು ಕಲ್ಪಿಸಿ ಜೀವನಮಟ್ಟ ಸುಧಾರಿಸಲು ಹಾಗೂ ಅವರಿಗೆ ಆರ್ಥಿಕ ಬಲ ನೀಡುವ ಮೂಲಕ ದೇಶದ ಆರ್ಥಿಕ ಪ್ರಗತಿಗೆ ಅನುವು ಮಾಡಿಕೊಡಲು ಕೇಂದ್ರ ಸರ್ಕಾರ ಪಿಎಂ ವಿಶ್ವಕರ್ಮ, ಪಿಎಂ ಸ್ವನಿಧಿ, ಸ್ವನಿಧಿ ಸೇ ಸಮೃದ್ಧಿ ಮುಂತಾದ ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಯೋಜನೆಗಳಡಿ ಫಲಾನುಭವಿಗಳನ್ನು ಗುರುತಿಸಿ, ನೋಂದಣಿ ಮಾಡಿ, ಕೌಶಲ್ಯಾಧಾರಿತ ತರಬೇತಿ ನೀಡಿ, ಸಾಲ ಸೌಲಭ್ಯ ಕಲ್ಪಿಸಿ, ಅವರಿಗೆ ನೆಲೆ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಮಾಣಿಕವಾಗಿ ಕರ್ತವ್ಯ ನಿರ್ವಹಿಸುವಂತೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರು ಹಾಗೂ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದರೂ ಆದ ಎ.ನಾರಾಯಣಸ್ವಾಮಿ ಅವರು ಸೂಚಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ‘ದಿಶಾ’ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಕ್ಕಸಾಲಿಗರು, ಕುಂಬಾರರು, ಬಡಗಿಗಳು, ಶಿಲ್ಪಿಗಳು, ಮೇಸ್ತ್ರಿಗಳು ಹೀಗೆ ಅಸಂಖ್ಯಾತ ಕುಶಲಕರ್ಮಿಗಳ ಶ್ರಮವನ್ನು ಬೆಂಬಲಿಸಲು ದೇಶವು ಮೊದಲ ಬಾರಿಗೆ ವಿವಿಧ ಪ್ರೋತ್ಸಾಹ ಯೋಜನೆಗಳನ್ನು ತಂದಿದ್ದು, ಪಿಎಂ ವಿಶ್ವಕರ್ಮ ಯೋಜನೆಯಡಿ ಇಂತಹವರಿಗೆ ತರಬೇತಿ, ತಂತ್ರಜ್ಞಾನ, ಸಾಲ ಮತ್ತು ಮಾರುಕಟ್ಟೆ ಬೆಂಬಲಕ್ಕಾಗಿ ಉತ್ತೇಜನ ನೀಡಲಾಗುತ್ತಿದೆ ಎಂದು ತಿಳಿಸಿದರು. 

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿವೇಶನ ಮುಕ್ತ ನಿಜವಾದ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ನಿವೇಶನ ಒದಗಿಸಿ ಮನೆ ನಿರ್ಮಾಣ ಮಾಡಿ, ಹಕ್ಕುಪತ್ರ ನೀಡುವ ಕೆಲಸ ಅತ್ಯಂತ ಮಹತ್ವಪೂರ್ಣವಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರಿ ಹಾಗೂ ಖಾಸಗಿ ಭೂಮಾಪಕರನ್ನು ಬಳಸಿಕೊಂಡು ಯೋಜನೆಗೆ ಗುರುತಿಸಲಾದ ಜಮೀನುಗಳ ಸರ್ವೇ ಕಾರ್ಯವನ್ನು ತ್ವರಿತಗತಿಯಲ್ಲಿ ಕೈಗೊಳ್ಳಬೇಕು. ಸಂಬಂಧಿಸಿದ ಅಧಿಕಾರಿಗಳು ಪ್ರತಿ ತಿಂಗಳು ಗುರಿ ನಿಗಧಿಪಡಿಸಿಕೊಂಡು ಕೆಲಸ ಮಾಡಿದಲ್ಲಿ ಸೂರು ಇಲ್ಲದ ಬಡವರಿಗೆ ವಸತಿ ಸೌಲಭ್ಯ ಕಲ್ಪಿಸಿದಂತಾಗುತ್ತದೆ ಎಂದರು.

ತುಮಕೂರು-ರಾಯದುರ್ಗ ಹೊಸ ರೈಲ್ವೆ ಮಾರ್ಗ, ತುಮಕೂರು-ದಾವಣಗೆರೆ ಹೊಸ ರೈಲ್ವೆ ಮಾರ್ಗ ಮತ್ತು ತುಮಕೂರು-ಅರಸೀಕೆರೆ ದ್ವಿಪಥ ರೈಲ್ವೆ ಮಾರ್ಗಗಳ ಯೋಜನೆಗೆ ಸಂಬಂಧಿಸಿದಂತೆ ನೋಟಿಫಿಕೇಷನ್, ಟೆಂಡರ್ ಪ್ರಕ್ರಿಯೆ, ಭೂಸ್ವಾಧೀನ, ಅವಾರ್ಡ್ ವಿತರಣೆ ಕಾರ್ಯಗಳು  ಮತ್ತು ಯಾವುದೇ ವಿಳಂಬಕ್ಕೆ ಆಸ್ಪದ ನೀಡದಂತೆ ಕಾಮಗಾರಿಗಳು ತ್ವರಿತಗತಿಯಲ್ಲಿ ಸಾಗಬೇಕು.  ಇನ್ನೊಂದು ತಿಂಗಳಲ್ಲಿ ಈ ಕುರಿತಂತೆ ತಮಗೆ ಪ್ರಗತಿ ವರದಿ ನೀಡಬೇಕು, ರೈಲ್ವೇ ಯೋಜನೆಗಳಿಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ಪ್ರತ್ಯೇಕ ಸಭೆ ಕರೆಯಲಾಗುವುದು ಎಂದು ತಿಳಿಸಿದರು. 

ಅಪೌಷ್ಠಿಕತೆಯಿಂದ ಬಳಲುತ್ತಿರುವಂತಹ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿರುವ  ಹೋಬಳಿ, ಗ್ರಾಮಗಳನ್ನು ಸಮುದಾಯವಾರು ಗುರುತಿಸಿ, ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳಿಗೆ ಪೌಷ್ಠಿಕಾಂಶಯುಕ್ತ ಆಹಾರ ಒದಗಿಸಬೇಕು.  ಈ ಸಂಬಂಧ ತಮಗೆ ವರದಿ ಸಲ್ಲಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. 

ಕೇಂದ್ರ ಸರ್ಕಾರದ ಯೋಜನೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಬಹುತೇಕ ಮಾಹಿತಿ ಇರುವುದಿಲ್ಲ.  ಆದುದರಿಂದ ಬ್ಯಾಂಕುಗಳು ತೆರೆದ ಮನಸ್ಸಿನಿಂದ ಸಾರ್ವಜನಿಕರೊಂದಿಗೆ ಮಾತನಾಡಬೇಕು ಮತ್ತು ಕೇಂದ್ರ ಪುರಸ್ಕøತ ಯೋಜನೆಗಳ ಕುರಿತಂತೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ವಿವಿಧ ಯೋಜನೆಗಳ ಫಲಾನುಭವಿಗಳಿಗೆ ನಿಗಧಿತ ಸಮಯದಲ್ಲಿ ಯೋಜನೆಯ ಲಾಭ ದೊರೆಕುವಂತೆ ಸಾಲಸೌಲಭ್ಯ ಕಲ್ಪಿಸಬೇಕು ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಅವರಿಗೆ ಸೂಚಿಸಿದರು. 

ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಮಾತನಾಡಿ, ಜಿಲ್ಲೆಯಲ್ಲಿ 640 ಕಾಡುಗೊಲ್ಲರ ಹಟ್ಟಿಗಳನ್ನು ಗುರುತಿಸಲಾಗಿದ್ದು, ಈ ಪೈಕಿ 40 ಗ್ರಾಮಗಳು ಸರ್ಕಾರದ ಗೋಮಾಳದಲ್ಲಿದ್ದು, ಇನ್ನುಳಿದ 62 ಗ್ರಾಮಗಳು ಖಾಸಗಿ ಜಮೀನಿನಲ್ಲಿ ಇರುತ್ತದೆ. ಈ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಗುರುತಿಸಲು ಅಧಿಸೂಚನೆಗಾಗಿ ಪ್ರಸ್ತಾವನೆ  ಕಳುಹಿಸಲಾಗಿದ್ದು, ಕುಡಿಯುವ ನೀರು, ಶೌಚಾಲಯ, ರಸ್ತೆ ಮತ್ತು ಚರಂಡಿ ಇನ್ನಿತರೆ ಮೂಲಸೌಕರ್ಯ ಒದಗಿಸಲು ಕ್ರಿಯಾ ಯೋಜನೆಯನ್ನು ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. 

ಸಭೆಯಲ್ಲಿ ಉಪಸ್ಥಿತರಿದ್ದ ಎನ್.ಎಸ್.ಎಫ್.ಡಿ.ಸಿ.(ರಾಷ್ಟ್ರೀಯ ಅನುಸೂಚಿತ ಜಾತಿ ಹಣಕಾಸು ಅಭಿವೃದ್ಧಿ ನಿಗಮ, ನವದೆಹಲಿ) ಮುಖ್ಯಸ್ಥರಾದ ರಮೇಶ್ ರಾವ್ ಅವರು ಅನುಸೂಚಿತ ಜಾತಿಯ ಫಲಾನುಭವಿಗಳಿಗೆ ನಿಗಮದಿಂದ ಒದಗಿಸಬಹುದಾದ ಸೌಲಭ್ಯಗಳ ಕುರಿತು ಸಮಗ್ರ ಮಾಹಿತಿ ನೀಡಿದರು. 

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ.,  ಕುಂದ್ರಹಳ್ಳಿ ರಮೇಶ್ ಸೇರಿದಂತೆ ದಿಶಾ ಸಮಿತಿಯ ಸದಸ್ಯರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. 

Leave a Reply

Your email address will not be published. Required fields are marked *