ತುಮಕೂರು : ಭಾರತ ಸಾಂವಿಧಾನಿಕ ಮೌಲ್ಯಗಳನ್ನು ಬಿತ್ತರಿಸುವ ಉದ್ದೇಶದಿಂದ ನವೆಂಬರ್ 26ರಂದು ಹಮ್ಮಿಕೊಂಡಿರುವ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಕೇಸ್ವಾನ್ ಸಭಾಂಗಣದಲ್ಲಿ ಸೋಮವಾರ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ನವೆಂಬರ್ 26ರಂದು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಂವಿಧಾನ ಜಾಗೃತಿ ಜಾಥಾ ಮೆರವಣಿಗೆಯನ್ನು ಹಮ್ಮಿಕೊಳ್ಳಬೇಕು. ನಗರದ ಟೌನ್‍ಹಾಲ್ ವೃತ್ತದಲ್ಲಿರುವ ಡಾ: ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಅಂದು ಬೆಳಿಗ್ಗೆ 9.30 ಗಂಟೆಗೆ ಮಾಲಾರ್ಪಣೆ ಮಾಡುವ ಮೂಲಕ ಜಾಥಾ ಮೆರವಣಿಗೆಗೆ ಗಣ್ಯರಿಂದ ಚಾಲನೆ ನೀಡಲು ಕ್ರಮವಹಿಸಬೇಕು. ಮೆರವಣಿಗೆಯಲ್ಲಿ ಎನ್‍ಸಿಸಿ, ಎನ್‍ಎಸ್‍ಎಸ್ ವಿದ್ಯಾರ್ಥಿಗಳ ಭಾಗವಹಿಸುವಿಕೆ ಮೂಲಕ ಶಿಷ್ಠಾಚಾರದಂತೆ ಯಾವುದೇ ಲೋಪದೋಷಗಳು ಬಾರದಂತೆ ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ನಿರ್ದೇಶನ ನೀಡಿದರು.
ಮೆರವಣಿಗೆ ಜಾಥಾ ಕಾರ್ಯಕ್ರಮವು ಟೌನ್‍ಹಾಲ್ ವೃತ್ತದಿಂದ ಎಂ.ಜಿ.ರಸ್ತೆ ಮೂಲಕ ಚರ್ಚ್ ಸರ್ಕಲ್ ತಲುಪಿ ಬಸ್ ನಿಲ್ದಾಣದ ಮೂಲಕ ಎಂಪ್ರೆಸ್ ಕಾಲೇಜು ಆಡಿಟೋರಿಯಂ ಅನ್ನು ತಲುಪಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು. ಜಾಥಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ-ಕಾಲೇಜು, ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಳ್ಳುವಂತೆ ಕ್ರಮವಹಿಸಬೇಕು. ಮೆರವಣಿಗೆಯಲ್ಲಿ ವೀರಗಾಸೆ, ತಮಟೆ ವಾದ್ಯ, ಪೂಜಾ ಕುಣಿತ, ಚಿಟ್ಟಿ ಮೇಳ ಕಲಾತಂಡಗಳಿಂದ ಪ್ರದರ್ಶನ ಏರ್ಪಡಿಸಬೇಕು. ಮೆರವಣಿಗೆಗೆ ಹೆಚ್ಚಿನ ಜನ ಸೇರುವುದರಿಂದ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಬೇಕೆಂದು ಜಿಲ್ಲಾ ಪೊಲೀಸ್ ಇಲಾಖೆಗೆ ತಿಳಿಸಿದರು.
ನಗರದ ಎಂಪ್ರೆಸ್ ಕಾಲೇಜು ಆಡಿಟೋರಿಯಂನಲ್ಲಿ ಅಂದು ಬೆಳಿಗ್ಗೆ 11.30 ಗಂಟೆಗೆ ಸಂವಿಧಾನ ದಿನಾಚರಣೆ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಲಾಗುವುದು. ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಸನ್ಮಾನ ಮಾಡಲಾಗುವುದು. ಡಾ: ಬಿ.ಆರ್. ಅಂಬೇಡ್ಕರ್ ಅವರ ವೇಷ ಧರಿಸಿರುವ ವಿದ್ಯಾರ್ಥಿಯನ್ನು ಅಲಂಕೃತಗೊಂಡ ತೆರೆದ ವಾಹನದಲ್ಲಿ ಮೆರವಣಿಗೆ; ಭಾರತ ಸಂವಿಧಾನ ಪುಸ್ತಕ, ರಾಷ್ಟ್ರಧ್ವಜ, ಸಂವಿಧಾನದ ನುಡಿ ಮುತ್ತುಗಳನ್ನೊಳಗೊಂಡಿರುವ ಪ್ಲ-ಕಾಡ್ರ್ಸ್ ಪ್ರದರ್ಶನ ಮಾಡಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಸ್. ಕೃಷ್ಣಪ್ಪ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಸಿದ್ದರಾಜು, ತುಮಕೂರು ಡಿಡಿಪಿಐ ರಘುಚಂದ್ರ, ಮಧುಗಿರಿ ಡಿಡಿಪಿಐ ಮಾಧವರೆಡ್ಡಿ, ತಹಶೀಲ್ದಾರ್ ರಾಜೇಶ್ವರಿ ಸೇರಿದಂತೆ ಮತ್ತಿತರರು ಹಾಜರಿದ್ದರು.