ತುಮಕೂರು : ಸಾಮಾನ್ಯ ಜನರ ಜೀವನ ಮಟ್ಟವನ್ನು ಸುಧಾರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಜನಪರ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನಕ್ಕೆ ತರುವ ಮೂಲಕ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳನ್ನು ತಲುಪಿಸಬೇಕು ಎಂದು ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ಹಾಗೂ ಸಂಸದ ವಿ.ಸೋಮಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಜರುಗಿದ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ(ಡಿಎಲ್‍ಆರ್‍ಸಿ) ಹಾಗೂ ಜಿಲ್ಲಾ ಸಮಾಲೋಚನಾ ಸಭೆಯಲ್ಲಿ 2025-26ನೇ ಸಾಲಿನ ವಾರ್ಷಿಕ ಸಾಲ ಯೋಜನೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, 2024-25ರ ಸಾಲ ಯೋಜನೆಯಲ್ಲಿ ಶೇಕಡಾ 111ರಷ್ಟು ಸಾಲವನ್ನು ಆದ್ಯತಾ ವಲಯದಲ್ಲಿ ವಿತರಿಸಿರುವುದು ಉತ್ತಮ ಬೆಳವಣಿಗೆ. ಅದೇ ರೀತಿ 2025-26ರ ಸಾಲಿನಲ್ಲಿಯೂ ಸಹ ಗುರಿ ಮೀರಿ ಪ್ರಗತಿ ಸಾಧಿಸಲು ಸೂಚನೆ ನೀಡಿದರು.
ಕೇಂದ್ರ ಹಾಗು ರಾಜ್ಯ ಸರ್ಕಾರ ಪ್ರಾಯೋಜಿತ ಸಾಲ ಯೋಜನೆಗಳನ್ನು ಬ್ಯಾಂಕಿನವರು ನಿಗಧಿತ ಅವಧಿಯೊಳಗೆ ಅರ್ಹ ಫಲಾನುಭವಿಗೆ ವಿತರಿಸಿ ಹಳ್ಳಿಯಲ್ಲಿ ಆರ್ಥಿಕ ಸ್ವಾವಲಂಬಿನೆ ಹೆಚ್ಚಿಸಬೇಕು. ಕೇಂದ್ರ ಸರ್ಕಾರದ ವಿವಿಧ ಸಾಲ ಯೋಜನೆಯಡಿ ಸಲ್ಲಿಸಿರುವ ಅರ್ಜಿಗಳನ್ನು ಬಾಕಿ ಉಳಿಸಿಕೊಳ್ಳದೆ ತ್ವರಿತವಾಗಿ ವಿಲೇವಾರಿ ಮಾಡಬೇಕು. ಸಾಲದ ಅರ್ಜಿಗಳನ್ನು ವಿಲೇವಾರಿ ಮಾಡದೆ ಹೆಚ್ಚು ಕಾಲ ಬಾಕಿ ಉಳಿಸಿಕೊಳ್ಳುವ ಬ್ಯಾಂಕುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಮಾರ್ಚ್ 2025ರ ಅಂತ್ಯಕ್ಕೆ ಸಿ.ಡಿ ಅನುಪಾತ (ಸಾಲ-ಠೇವಣಿ ಅನುಪಾತ) ಶೇಕಡಾ 105ರಷ್ಟಿದ್ದು, ಈ ಅನುಪಾತವನ್ನು ಪ್ರಸ್ತುತ ಸಾಲಿನಲ್ಲೂ ಮುಂದುವರಿಸಲು ತಿಳಿಸಿದರಲ್ಲದೆ, ಪ್ರಸ್ತುತ ಪಿ.ಎಂ.ವಿಶ್ವಕರ್ಮ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಶೀಘ್ರವಾಗಿ ಸಾಲ ವಿತರಿಸಬೇಕು. ಯೋಜನೆಯ ಪ್ರಯೋಜನವನ್ನು ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳುವಂತೆ ಜನಜಾಗೃತಿ ಮೂಡಿಸಬೇಕು ಎಂದರು.
ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಮಾತನಾಡಿ, ಬ್ಯಾಂಕುಗಳು ಪಿ.ಎಂ.ವಿಶ್ವಕರ್ಮ ಯೋಜನೆಯಡಿ ಶೀಘ್ರವಾಗಿ ಸಾಲ ವಿತರಿಸಬೇಕು. ಕಳೆದ 4 ತಿಂಗಳಲ್ಲಿ ಜಿಲ್ಲೆಯಲ್ಲಿ ಹಲವಾರು ಬ್ಯಾಂಕುಗಳ ಶಾಖೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭದಲ್ಲಿ ಬ್ಯಾಂಕಿನ ವ್ಯವಸ್ಥಾಪಕರು ಕ್ಷೇತ್ರಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳ ಬಗ್ಗೆ ಗಮನಹರಿಸುತ್ತಿಲ್ಲವೆಂದು ಜನರಿಂದ ದೂರುಗಳು ವ್ಯಕ್ತವಾಗುತ್ತಿರುವುದು ಗಮನಿಸಲಾಗಿದೆ. ಬ್ಯಾಂಕಿನ ಅಧಿಕಾರಿ/ಸಿಬ್ಬಂದಿಗಳು ಗ್ರಾಹಕರೊಂದಿಗೆ ಪ್ರಾದೇಶಿಕ ಭಾಷೆಯಲ್ಲಿಯೇ ವ್ಯವಹರಿಸಿ ಸೌಜನ್ಯಯುತವಾಗಿ ವರ್ತಿಸಿ ಬ್ಯಾಂಕಿನ ಸೌಲಭ್ಯಗಳನ್ನು ಜನರಿಗೆ ತಲುಪಿಸಬೇಕು ಎಂದು ನಿರ್ದೇಶಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭು ಜಿ. ಮಾತನಾಡಿ, ಜಿಲ್ಲೆಯಲ್ಲಿರುವ ವಿವಿಧ ಬ್ಯಾಂಕಿನ ಅಧಿಕಾರಿಗಳು ಹಾಗು ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರು ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೆ ಶ್ರಮಿಸಬೇಕು. ಸಾಲ ಸೌಲಭ್ಯಕ್ಕೆ ಸಂಬಂಧಿಸಿದಂತೆ ಸ್ವೀಕೃತ ಅರ್ಜಿಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡದೇ ಇರುವ ಬ್ಯಾಂಕುಗಳ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಸಚಿವರಿಗೆ ದೂರು ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಾಮಾಜಿಕ ಭದ್ರತಾ ಯೋಜನೆಗಳಾದ ಪಿ.ಎಂ.ಜೆ.ಜೆ.ಬಿ.ವೈ, ಪಿ.ಎಂ.ಎಸ್.ಬಿ.ವೈ, ಎ.ಪಿ.ವೈ, ಪಿ.ಎಂ.ಜೆ.ಡಿ.ಯೋಜನೆಗಳಡಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳನ್ನು ತಲುಪಿಸಬೇಕು. ಬ್ಯಾಂಕುಗಳಲ್ಲಿ ಬೆಳೆ ಸಾಲ ಪಡೆದ ಎಲ್ಲಾ ಫಲಾನುಭವಿಗಳು, ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಡಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳುವಂತೆ ಕೃಷಿ ಹಾಗೂ ತೋಟಗಾರಿಕೆ ಇಲಾಖಾಧಿಕಾರಿಗಳಿಗೆ ಸೂಚಿಸಿದರು.
ಸಭೆಗೆ ಗೈರು ಹಾಜರಾದ ಆ್ಯಕ್ಸಿಸ್, ಐಸಿಐಸಿಐ, ಬಂಧನ್, ಜೀವನ್, ಸಿಟಿ ಯೂನಿಯನ್ ಸೇರಿದಂತೆ ಇನ್ನಿತರೆ ಬ್ಯಾಂಕುಗಳಿಗೆ ನೋಟೀಸ್ ನೀಡಲಾಗುವುದು. ಇದೇ ರೀತಿ ಗೈರು ಹಾಜರಿ ಪುನರಾವರ್ತಿತವಾದರೆ ಕೇಂದ್ರ ಸಚಿವರಿಗೆ ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಭಾರತೀಯ ರಿಸರ್ವ್ ಬ್ಯಾಂಕಿನ ಸಹಾಯಕ ಪ್ರಧಾನ ವ್ಯವಸ್ಥಾಪಕ ಆರ್. ಪ್ರಭಾಕರನ್ ಮಾತನಾಡಿ, ಸಭೆಗೆ ಬ್ಯಾಂಕಿನ ಅಧಿಕಾರಿಗಳ ಗೈರು ಹಾಜರಿಯನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಗೈರು ಹಾಜರಾದ ಬ್ಯಾಂಕಿನ ಅಧಿಕಾರಿಗಳು ಮುಂದಿನ ಸಭೆಗೆ ಕಡ್ಡಾಯವಾಗಿ ತಮ್ಮ ವಲಯ ವ್ಯವಸ್ಥಾಪಕರೊಂದಿಗೆ ಸಭೆಗೆ ಹಾಜರಾಗತಕ್ಕದ್ದು ಎಂದು ಸೂಚಿಸಿದರು.
ನಬಾರ್ಡನ ಸಹಾಯಕ ಪ್ರಧಾನ ವ್ಯವಸ್ಥಾಪಕ ಮತ್ತು ಜಿಲ್ಲಾ ಅಭಿವೃದ್ಧಿ ಅಧಿಕಾರಿ ಕೆ. ಮೋಹನ್ ಸಾಯಿ ಗಣೇಶ್, ಜಿಲ್ಲೆಯ ಭಾರತೀಯ ಸ್ಟೇಟ್ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕರಾದ ಸುರೇಂದ್ರ ಟಿ.ಕೆ., ದೊರೈ ರಾಜ್, ಕೆನರಾ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಗಣೇಶ್ ಗುಂಜನ್, ಕರ್ನಾಟಕ ಗ್ರಾಮೀಣ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ರೂಪೇಶ್ ಕುಮಾರ್, ಕರ್ನಾಟಕ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ರಾಮಶೇಶು, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರು ನಾರಾಯಣಪ್ಪ, ವಿವಿಧ ಬ್ಯಾಂಕುಗಳ ಹಿರಿಯ ಅಧಿಕಾರಿಗಳು, ವಿವಿಧ ಇಲಾಖೆಗಳ ಮುಖ್ಯಸ್ಥರು, ಎಲ್ಲಾ ತಾಲ್ಲೂಕಿನ ಆರ್ಥಿಕ ಸಾಕ್ಷರತಾ ಸಲಹೆಗಾರರು ಭಾಗವಹಿಸಿದ್ದರು.