ತುಮಕೂರು: ರಾಜ್ಯಪಾಲರು ಬೆದರುಗೊಂಬೆ ಅಲ್ಲ, ಸಾಂವಿಧಾನಿಕ ಹುದ್ದೆ. ರಾಜ್ಯದ ಆಡಳಿತ ಯಂತ್ರ ದುರುಪಯೋಗವಾದಾಗ, ಸರ್ಕಾರದ ಖಜಾನೆ ಲೂಟಿಯಾದಾಗ, ಸಾರ್ವಜನಿಕ ಆಸ್ತಿಯನ್ನು ಸ್ವಾರ್ಥಕ್ಕೆ ಬಳಸಿಕೊಂಡಾಗ, ಸರ್ಕಾರ ತಪ್ಪುದಾರಿಗೆ ಇಳಿದಾಗ ರಾಜ್ಯಪಾಲರು ಕಾನೂನಾತ್ಮಕ ಕಾರ್ಯಾಚರಣೆ ಮಾಡುತ್ತಾರೆ. ನಿಮ್ಮ ಕರ್ಮಕಾಂಡವನ್ನು ಮುಚ್ಚಿಕೊಳ್ಳಲು ರಾಜ್ಯಪಾಲರ ವಿರುದ್ಧ ಅವಹೇಳನಾಕಾರಿಯಾಗಿ ಮಾತನಾಡುವುದನ್ನು ಕಾಂಗ್ರೆಸ್ ನಾಯಕರು ನಿಲ್ಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಒತ್ತಾಯಿಸಿದರು.
ರಾಜ್ಯಪಾಲರ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರು ಅತ್ಯಂತ ಹೀನಾಯವಾಗಿ ನಡೆದುಕೊಳ್ಳುತ್ತಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ಗುರುವಾರ ನಗರದ ಬಿಜಿಎಸ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಸದಾನಂದಗೌಡರು, ಕಾಂಗ್ರೆಸ್ನವರು ರಾಜ್ಯದಲ್ಲಿ ಹೀಗೇ ಅರಾಜಕತೆ ಪ್ರಾರಂಭ ಮಾಡಿದರೆ ಕೇಂದ್ರ ಸರ್ಕಾರ ಖಂಡಿತವಾಗಿಯೂ ಕ್ರಮಕ್ಕೆ ಆಲೋಚನೆ ಮಾಡುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯಪಾಲರ ವಿರುದ್ಧ ಹೀನಾಯವಾಗಿ ನಡೆದುಕೊಳ್ಳುತ್ತಿರುವ ಕಾಂಗ್ರೆಸ್ನವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬಾಯಿ ಮುಚ್ಚಲು ಹೇಳಬೇಕು. ಸಂವಿಧಾನ ವಿರೋಧಿ, ದೇಶ ವಿರೋಧಿ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ನವರ ವಿರುದ್ಧ ದೇಶದ್ರೋಹಿ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಗೃಹ ಸಚಿವ ಡಾ.ಪರಮೇಶ್ವರ ಅವರಿಗೆ ಒತ್ತಾಯಿಸಿದರು.
ಮುಡಾ ಹಗರಣ ಸಂಬಂಧ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಏಕಾಏಕಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಲಿಲ್ಲ, ಅದಕ್ಕೂ ಮೊದಲು ಸರ್ಕಾರಕ್ಕೆ ನೋಟೀಸ್ ನೀಡಿ, ಪ್ರಕರಣದ ಬಗ್ಗೆ ಉತ್ತರ ನೀಡಲು ಹೇಳಿದ್ದರು. ಆದರೆ, ಡಿಸಿಎಂ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ನಲ್ಲಿ ರಾಜ್ಯಪಾಲರ ನೋಟೀಸ್ ಅನ್ನು ವಾಪಸ್ ಮಾಡಲು ತೀರ್ಮಾನ ಮಾಡಿತು. ರಾಜ್ಯಪಾಲರು ನಿಯಮಾನುಸಾರ ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದರು. ಸಿದ್ದರಾಮಯ್ಯನವರಿಗೆ ನೈತಿಕತೆಯಿದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಲಿ ಎಂದು ಸದಾನಂದಗೌಡರು ಹೇಳಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಕಳೆದ ಒಂದು ತಿಂಗಳಿನಿಂದ ನಡೆದ ಘಟನೆಗಳು ರಾಜ್ಯ ಕಾಂಗ್ರೆಸ್ ಸರ್ಕಾರ ಇರುವುದೇ ಭ್ರಷ್ಟಾಚಾರ ಮಾಡೋದಕ್ಕೆ ಎಂಬುದಕ್ಕೆ ಸಾಕ್ಷಿಯಾಗಿವೆ. ಪಾದಯಾತ್ರೆ ಸಂದರ್ಭವು ಕಾಂಗ್ರೆಸ್ ನಾಯಕರ ಮುಖವಾಡವನ್ನು ಜನರಿಗೆ ತೋರಿಸಿದೆ. ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದನ್ನು ವಿರೋಧಿಸಿ ಕಾಂಗ್ರೆಸ್ನವರು ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ಭಾರತ ದೇಶ ಕೂಡಾ ಬಾಂಗ್ಲಾ, ಆಫ್ಘಾನಿಸ್ತಾನ ಮಾಡಲು ಹೊರಟಂತಿದ್ದಾರೆ ಎಂದರು.
ಕಾಂಗ್ರೆಸ್ನ ನಿಜವಾದ ಮುಖ ಅಭಿವೃದ್ಧಿಯಲ್ಲ, ದೇಶವನ್ನು ಒಡೆಯುವುದೇ ಆಗಿದೆ. ಬಾಂಗ್ಲಾ ದೇಶದಲ್ಲಿ ಯಾವ ರೀತಿ ಆಗ್ತಿದೆ ಆ ರೀತಿ ಮಾಡ್ತೀವಿ ಎಂದು ಕಾಂಗ್ರೆಸ್ನವರು ಯಾವ ನೈತಿಕತೆಯಿಂದ ಹೇಳ್ತಿದ್ದಾರೆ ಎಂದು ತಿಳಿದು ಜನ ಎಚ್ಚೆತ್ತುಕೊಳ್ಳಬೇಕು. ಭ್ರಷ್ಟ ಕಾಂಗ್ರೆಸ್ ಸರ್ಕಾರ ತೊಲಗಬೇಕು, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ವಿಧಾನಪರಿಷತ್ ಸದಸ್ಯ ಚಿದಾನಂದಗೌಡ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಮಾತನಾಡಿದರು.
ನಂತರ ಬಿಜಿಎಸ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕಾಂಗ್ರೆಸ್ ನಾಯಕರ ವಿರುದ್ಧ ಘೋಷಣೆ ಕೂಗಿದರು.
ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಬ್ಯಾಟರಂಗೇಗೌಡ, ಮಾಜಿ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್, ರಾಜ್ಯ ಬಿಜೆಪಿ ವಕ್ತಾರ ಹೆಚ್.ಎನ್.ಚಂದ್ರಶೇಖರ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಗಂಗರಾಜು, ಸಂದೀಪ್ಗೌಡ, ಹಾಲೇಗೌಡ, ಕಾರ್ಯದರ್ಶಿಗಳಾದ ಹೆಚ್.ಎಂ.ರವೀಶಯ್ಯ, ಜ್ಯೋತಿತಿಪ್ಪೇಸ್ವಾಮಿ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಆಂಜನಪ್ಪ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದರಾಮಣ್ಣ, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ವೇದಮೂರ್ತಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಸುಮಿತ್ರಮ್ಮ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ನವಚೇತನ್, ನಗರ ಅಧ್ಯಕ್ಷ ಟಿ.ಹೆಚ್.ಹನುಮಂತರಾಜು, ಮುಖಂಡರಾದ ದಿಲೀಪ್ಕುಮಾರ್, ಭೈರಣ್ಣ, ಹೆಚ್.ಟಿ.ಭೈರಪ್ಪ, ಚಂದ್ರಶೇಖರಬಾಬು, ಬಾವಿಕಟ್ಟೆ ನಾಗಣ್ಣ, ರುದ್ರೇಶ್, ಗಣೇಶ್ಪ್ರಸಾದ್, ಅಂಜನಮೂರ್ತಿ ಮೊದಲಾದವರು ಭಾಗವಹಿಸಿದ್ದರು.