ಒಳ ಮೀಸಲಾತಿ : ಅಲೆಮಾರಿಗಳಿಗಾಗಿರುವ ಅನ್ಯಾಯ ಸರಿ ಪಡಿಸುವಂತೆ ಮುಖ್ಯಮಂತ್ರಿಗಳಿಗೆ ಆಗ್ರಹ

ತುಮಕೂರು. : ಒಳ ಮೀಸಲಾತಿ ಕಲ್ಪಿಸುವಲ್ಲಿ ಸೂಕ್ಷ್ಮ, ಅತಿ ಸೂಕ್ಷ್ಮ ಅಲೆಮಾರಿಯ 59 ಸಮುದಾಯಗಳಿಗೆ ಆಗಿರುವ ಅನ್ಯಾಯವನ್ನು ಸರಿ ಪಡಿಸುವಂತೆ ತುಮಕೂರು ಜಿಲ್ಲಾ ಒಳ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಒತ್ತಾಯಿಸಲಾಯಿತು.

ಸಮಿತಿಯ ಅಧ್ಯಕ್ಷರಾದ ಡಾ.ವೈ.ಕೆ.ಬಾಲಕೃಷ್ಣಪ್ಪ ಮತ್ತು ಗೌರವ ಅಧ್ಯಕ್ಷರಾದ ಚಿಂತಕ ಕೆ.ದೊರೈರಾಜ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ‘ಒಳ ಮೀಸಲಾತಿ’ಯ ಮೂಲ ಉದ್ದೇಶವೇ ಮೀಸಲಾತಿಯ ಸವಲತು ಮತ್ತು ಪ್ರಾತಿನಿಧ್ಯ್ತ ಎಲ್ಲರಿಗೂ ಸಮನಾಗಿ ದೊರೆಯಬೇಕು ಎಂಬುದಾಗಿದೆ. ಪರಿಶಿಷ್ಟ ಜಾತಿಯಲ್ಲಿರುವ 101 ಜಾತಿಗಳಿಗೂ ಸಮಪಾಲು ಸಿಗಬೇಕಾದ್ದು ಸಂವಿಧಾನಾದ ಆಶಯವೂ ಆಗಿರುತ್ತದೆ. ಆದಕಾರಣದಿಂದಲೇ ಸರ್ವೋಚ್ಚ ನ್ಯಾಯಲಯವು ಪರಿಶಿಷ್ಟ ಜಾತಿಗಳನ್ನು ಉಪವರ್ಗೀಕರಣಗೊಳಿಸುವಾಗ ಹಿಂದಿಳಿದಿರುವಿಕೆಯನ್ನು ಮಾನದಂಡವಾಗಿ ಬಳಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ನ್ಯಾಯಮೂರ್ತಿ ಎಚ್. ಎನ್. ನಾಗಮೋಹನದಾಸ್ ರವರು 2025ರ ಆಗಸ್ಟ್ 4ರಂದು ಒಳಮೀಸಲಾತಿ ಕಲ್ಪಿಸುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿರುವುದು ಸರಿಯಷ್ಟೆ. ಅದರಂತೆ ಅತ್ಯಂತ ಹಿಂದುಳಿದ ಸಮುದಾಯಗಳು ಎಂದು ಗುರುತಿಸಿ 59 ಜಾತಿಗಳನ್ನು ಪ್ರವರ್ಗ ʼಎʼ ರಲ್ಲಿಯೂ, ಹೆಚ್ಚು ಹಿಂದುಳಿದ ಸಮುದಾಯಗಳು ಎಂದು ಗುರುತಿಸಿದ 18 ಜಾತಿಗಳನ್ನು ಪ್ರವರ್ಗ ʼಬಿʼ ಯಲಿಯೂ ಹಿಂದುಳಿದ ಸಮುದಾಯಗಳು ಎಂದು ಗುರುತಿಸಿದ 17 ಜಾತಿಗಳನ್ನು ಪ್ರವರ್ಗ ʼಸಿʼ ಯಲ್ಲಿಯೂ, ಕಡಿಮೆ ಹಿಂದುಳಿದ ಸಮುದಾಯಗಳು ಎಂದು ಗುರುತಿಸಿದÀ 4 ಜಾತಿಗಳನ್ನು ಪ್ರವರ್ಗ ‘ಡಿʼ ಯಲ್ಲಿಯೂ ಹಾಗೂ ಮೂಲ ಜಾತಿಯ ಹೆಸರನ್ನು ತಿಳಿಯಪಡಿಸದಿರುವ ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಜಾತಿಗಳನ್ನು ಪ್ರವರ್ಗ ‘ಇʼ ಯಲ್ಲಿ ಸೇರಿಸಿ ಲಭ್ಯವಿರುವ ಶೇ. 17 ಮೀಸಲಾತಿ ಪ್ರಮಾಣವನ್ನು ಮೇಲಿನ 5 ಪ್ರವರ್ಗಗಳಿಗೆ ಶೇ.1, 6,5,4,1 ರ ಅನುಸಾರವಾಗಿ ಹಂಚಿಕೆ ಮಾಡಿ ಶೀಫಾರಸ್ಸು ಮಾಡಲಾಗಿತ್ತು.

ಆಯೋಗವು ಈ ರೀತಿಯ ಗುಂಪುಗಳನ್ನು ಮಾಡುವಾಗ ಸಮೀಕ್ಷೆ ನಡೆಸಿ ಕಲೆ ಹಾಕಿದ ಅಂಕಿ ಅಂಶಗಳನ್ನು ಆಧಾರವಾಗಿಟ್ಟುಕೊಂಡು 101 ಜಾತಿಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಹಿಂದುಳಿದಿರುವಿಕೆ ಮತ್ತು ಸರ್ಕಾರಿ ಉದ್ಯೋಗದಲ್ಲಿ ಪ್ರಾತಿನಿಧ್ಯದ ಕೊರತೆ ಆಧರಿಸಿ ಮೇಲಿನಂತೆ ಗುಂಪುಗಳನ್ನು ಮಾಡಲಾಗಿತ್ತು. ಎಂದು ತಿಳಿಸಿದ್ದಾರೆ.

ಆಯೋಗವು ಪರಿಶಿಷ್ಟ ಜಾತಿಗಳ ಉಪ ವರ್ಗೀಕರಣ ಮಾಡುವಾಗ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಮಾನದಂಡಗಳಿಗೆ ಅನುಸಾರವಾಗಿ ಪರಿಶಿಷ್ಟ ಜಾತಿಗಳೊಳಗಿನ ಅಂತರ್ ಹಿಂದುಳಿದಿರುವಿಕೆಯನ್ನು ಮುಖ್ಯ ಮಾನದಂಡವನ್ನಾಗಿ ಪರಿಗಣಿಸಿತ್ತು. ಈ ಕಾರಣದಿಂದ ಹೊಲೆಯ ಸಂಭಂಧಿತ ಸೂಕ್ಷ್ಮ, ಅತಿಸೂಕ್ಷ್ಮ ಹಾಗೂ ಮಾದಿಗ ಸಂಬಂಧಿತ ಸೂಕ್ಷ್ಮ, ಅತಿಸೂಕ್ಷ್ಮ ಸುಮುದಾಯಗಳನ್ನು ಆಯಾ ಸಮುದಾಯಗಳ ಹಿಂದುಳಿದಿರಿವಿಕೆಯ ಆಧಾರದಲ್ಲಿ ಬೇರೆ ಬೇರೆ ಗುಂಪುಗಳಲ್ಲಿ ಇಟ್ಟು ಉಪವರ್ಗೀಕರಣ ಮಾಡಲಾಗಿತ್ತು. ಆದರೆ ಸರ್ಕಾರವು ನ್ಯಾಯಮೂರ್ತಿ ಎಚ್. ಎನ್. ನಾಗಮೋಹನದಾಸ್ ಅವರÀ ವರದಿಯ ಶಿಫಾರಸ್ಸುಗಳನ್ನು ಮಾರ್ಪಾಟು ಮಾಡುವಾಗ ಐದು ಗುಂಪುಗಳ ಬದಲಾಗಿ ಮೂರು ಗುಂಪುಗಳನ್ನಾಗಿ ಮಾಡಿ ಸೂಕ್ಷ್ಮ, ಅತಿಸೂಕ್ಷ್ಮ ಮತ್ತು ಅಲೆಮಾರಿ ಸಮುದಾಯಗಳನ್ನು ಪ್ರವರ್ಗ-ಸಿ ನಲ್ಲಿ ಸೇರಿಸಲಾಗಿದೆ ಎಂದಿದ್ದಾರೆ.

ಆ ಗುಂಪಿನಲ್ಲಿ ಕಡಿಮೆ ಹಿಂದುಳಿದ ಸಮುದಾಯಗಳು (ಅಂದರೆ ಪರಿಶಿಷ್ಟ ಜಾತಿಗಳಲ್ಲಿಯೇ ಮುಂದುವರೆದ ಸಮುದಾಯಗಳು) ಎಂದು ಆಯೋಗವು ಗುರುತಿಸಿರುವ ಭೋವಿ, ಲಂಬಾಣಿ, ಕೊರಮ ಮತ್ತು ಕೊರಚ ಸಮುದಾಯಗಳನ್ನು ಸೇರಿಸಿದ್ದು, ಆ ಸಮುದಾಯಗಳು ರಾಜಕೀಯವಾಗಿ, ಆರ್ಥಿಕವಾಗಿ ಮುಂದುವೆರೆದಿದ್ದು ಸರ್ಕಾರಿ ಸೇವೆಯಲ್ಲಿಯೂ ಗಣನೀಯ ಪ್ರಮಾಣದ ಪ್ರಾತಿನಿಧ್ಯ ಹೊಂದಿರುತ್ತವೆ.

ಈ ಎಲ್ಲ ಕಾರಣಗಳಿಂದ ಪ್ರವರ್ಗ-ಸಿ ಗುಂಪಿಗೆ ಶೇಕಡ 5% ರಷ್ಟು ಮೀಸಲಾತಿ ಪ್ರಮಾಣವನ್ನು ನಿಗದಿ ಮಾಡಿದ ಪರಿಣಾಮ ಎಲ್ಲಾ ರೀತಿಯಿಂದಲೂ ಹಿಂದುಳಿದಿರುವ, ಜನಸಂಖ್ಯೆಯಲ್ಲೂ ಕಡಿಮೆಯಿರುವ ಸೂಕ್ಷ್ಮ, ಅತಿಸೂಕ್ಷ್ಮ ಮತ್ತು ಅಲೆಮಾರಿ ಸಮುದಾಯಗಳ ಮೀಸಲಾತಿಯ ಪಾಲನ್ನು ಪಡೆದುಕೊಳ್ಳಲಿದ್ದಾರೆ. ಇದರಿಂದಾಗಿ ಪ್ರವರ್ಗ-ಸಿ ಗುಂಪಿನ ಸೂಕ್ಷ್ಮ, ಅತಿಸೂಕ್ಷ್ಮ ಮತ್ತು ಅಲೆಮಾರಿ ಸಮುದಾಯಗಳಿಗೆ ಶಾಶ್ವತವಾಗಿ ಅನ್ಯಾಯವಾಗುತ್ತದೆ. ಹಾಗಾಗಿ ಸೂಕ್ಷ್ಮ, ಅತಿಸೂಕ್ಷ್ಮ ಮತ್ತು ಅಲೆಮಾರಿ ಸಮುದಾಯಗಳು ಶಿಕ್ಷಣದಿಂದ ವಂಚಿತರಾಗುವುದರೊಂದಿಗೆ ಉದ್ಯೋಗದಲ್ಲಿಯೂ ಪ್ರಾತಿನಿಧ್ಯ ದೊರೆಯದೆ ಮತ್ತಷ್ಟು ಹಿಂದುಳಿಯಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಾಮಾಜಿಕ ನ್ಯಾಯದ ಪ್ರತಿಪಾದಕರಾದ ತಾವುಗಳು ಸಂವಿಧಾನದ ಆಶಯವಾದ “ಸರ್ವರಿಗೂ ಸಮಪಾಲು” ಎಂಬ ತತ್ವವನ್ನು ಎತ್ತಿ ಹಿಡಿದು ಸರ್ವೋಚ್ಚ ನ್ಯಾಯಲಯದ ಮಾನದಂಡದ ಅನುಸಾರ ಸೂಕ್ಷ್ಮ, ಅತಿಸೂಕ್ಷ್ಮ ಮತ್ತು ಅಲೆಮಾರಿ ಸಮುದಾಯಗಳ ಹಿತವನ್ನು ಕಾಪಾಡಲು ಪ್ರತ್ಯೇಕ ಮೀಸಲಾತಿ ಕಲ್ಪಿಸಿ ಕೊಡಬೇಕೆಂದು ಕೋರಿದ್ದಾರೆ.

ಈ ಸಂದರ್ಭದಲ್ಲಿ ನರಸಿಂಹಯ್ಯ ಹೇಮಾವತಿ, ನಿವೃತ್ತ ಸಬ್ ಇನ್ಸ್‍ಪೆಕ್ಟರ್ ರಂಗಸ್ವಾಮಯ್ಯ, ಕೋಡಿಯಾಲ ಮಹದೇವ, ಅಲೆಮಾರಿ ಸಮುದಾಯದ ವೆಂಕಟಾಚಲ.ಹೆಚ್.ವಿ., ಕೋಡಿಯಾಲ ಮಹದೇವ, ರಾಮಾಂಜಿನಯ್ಯ, ವಕೀಲರಾದ ರಂಗದಾಮಯ್ಯ, ಲಕ್ಷ್ಮೀರಂಗಯ್ಯ ಮುಂತಾದವರಿದ್ದರು.

Leave a Reply

Your email address will not be published. Required fields are marked *