ತುಮಕೂರು- ಪರಿಶಿಷ್ಟ ಜಾತಿಯ 101 ಉಪ ಪಂಗಡಗಳ ನಿಖರ ಜನಸಂಖ್ಯೆ ತಿಳಿಯಲು ಹಾಗೂ ಅವರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಔಧ್ಯೋಗಿಕ ಸ್ಥಾನ, ಮಾನಗಳ ತಿಳಿಯಲು ಅನುಕೂಲವಾಗುವಂತೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಚ್.ಎಸ್.ನಾಗ ಮೋಹನದಾಸ್ ಆಯೋಗವನ್ನು ಸರ್ಕಾರ ರಚಿಸಿದ್ದು ಈ ಹಿನ್ನೆಲೆಯಲ್ಲಿ ಗಣತಿದಾರರು ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವಾಗ ಪೂರ್ಣ ಮಾಹಿತಿ ಪಡೆಯದೆ ಅಪೂರ್ಣ ಮಾಹಿತಿಯನ್ನು ಒಳಗೊಂಡ ನಮೂನೆಗೆ ಮಾಹಿತಿದಾರರ ಸಹಿ ಪಡೆದು ಬರುತ್ತಿರುವ ಬಗ್ಗೆ ಮಾಹಿತಿ ಬಂದಿರು ವುದಾಗಿ ಜಿ.ಪಂ. ಮಾಜಿ ಅಧ್ಯಕ್ಷ ವೈ.ಹೆಚ್. ಹುಚ್ಚಯ್ಯ ತಿಳಿಸಿದರು.
ನಗರದಲ್ಲಿ ಇಂದು ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರ ಮತ್ತು ಜಿಲ್ಲಾಡಳಿತ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಗಣತಿದಾರರು ಪೂರ್ಣ ಪ್ರಮಾಣದಲ್ಲಿ ಮಾಹಿತಿ ಪಡೆದು ಒಳ ಮೀಸಲಾತಿ ವರ್ಗೀಕರಣ ಮತ್ತು ನಿಖರ ಜನಸಂಖ್ಯೆ ತಿಳಿಯುವ ಆಯೋಗದ ಉದ್ದೇಶ ಸಂಪೂರ್ಣವಾಗಿ ಯಶಸ್ವಿಗೊಳ್ಳು ವಂತೆ ಅಗತ್ಯ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಒಳ ಮೀಸಲಾತಿ ಸಮೀಕ್ಷೆಯ ಅರ್ಜಿ ನಮೂನೆಯಲ್ಲಿ 2-3 ವಿಷಯಗಳನ್ನು ನಮೂದಿಸದೆ ಸಹಿ ಪಡೆಯುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿದ್ದು, ಇದರಿಂದಾಗಿ ಪೂರ್ಣ ಪ್ರಮಾಣದ ಮಾಹಿತಿ ಇಲ್ಲದೆ ಈ ಸಮೀಕ್ಷೆ ಅಪೂರ್ಣಗೊಳ್ಳುವ ಸಾಧ್ಯತೆ ಇದ್ದು, ಜಿಲ್ಲಾಡಳಿತ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದರು.
2011ರ ಜನಗಣತಿ ಆಧರಿಸಿ ಸಮೀಕ್ಷೆ ನಡೆಯುತ್ತಿದ್ದು, 14 ವರ್ಷದಲ್ಲಿ ಸಾಕಷ್ಟು ಜನಸಂಖ್ಯೆ ಹೆಚ್ಚಾಗಿದೆ ಮತ್ತು ಜನರ ಸಾಮಾಜಿಕ, ಆರ್ಥಿಕ, ಔದ್ಯೋಗಿಕ, ಶೈಕ್ಷಣಿಕ ಮಾಹಿತಿ ಕೂಡ ಹೆಚ್ಚಾಗಿದ್ದು, ಈ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಮೀಕ್ಷೆ ಮಾಡಿದರೆ ಒಳಿತು. ಈಗಾಗಲೆ ಗಣತಿದಾರರು ಶೇ.103 ರಷ್ಟು ಸಾಧನೆ ಮಾಡಿರುವುದಾಗಿ ತಿಳಿಸಿರುವುದು ತೃಪ್ತಿದಾಯಕವಲ್ಲ ಎಂದರು.
ಗಣತಿದಾರರು ಮತ್ತು ಮಾಹಿತಿ ನೀಡುವ ಕುಟುಂಬದ ನಡುವೆ ಸಮನ್ವ ಯತೆಗೆ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು. ಪರಿಶಿಷ್ಟ ಜಾತಿ ಕುಟುಂಬದ ಸರ್ಕಾರಿ ನೌಕರರು ಸಂಪೂರ್ಣ ಮಾಹಿತಿ ನೀಡಿ ಇದಕ್ಕೆ ಸಹಕಾರ ನೀಡಬೇಕು ಎಂದರು.
ಬೆಂಗಳೂರಿನ ಸುಮ್ಮನಹಳ್ಳಿಯಲ್ಲಿ ಬಾಬು ಜಗಜೀವನರಾಮ್ ಭವನದಲ್ಲಿ ಮೇ 31 ರಂದು ಕಾರ್ಯಾಗಾರ ಹಮ್ಮಿ ಕೊಂಡಿದ್ದು ಸರ್ಕಾರ, ಆಯೋಗ, ಪರಿಶಿಷ್ಟ ಜಾತಿಯ ಮುಖಂಡರು ಇದರಲ್ಲಿ ಭಾಗ ವಹಿಸಲಿದ್ದಾರೆ ಎಂದರು.
ವೀರಶೈವ ಸಮಾಜದ ಒಂದು ಉಪಪಂಗಡವಾದ ಬುಡಗ ಜಂಗಮ ದವರು ಪರಿಶಿಷ್ಟ ಜಾತಿ ಸೇರಿದ್ದೇವೆ ಎಂದು ಜಾತಿ ಪ್ರಮಾಣಪತ್ರ ಪಡೆದು ಸೌಲಭ್ಯ ಪಡೆಯುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಮಮನೋಹರ ವೇದಿಕೆಯ ಪ್ರ.ಕಾರ್ಯದರ್ಶಿ ಕೆ.ಎಂ.ನಂಜುಂಡಯ್ಯ, ಸಂಘಟನಾ ಕಾರ್ಯದರ್ಶಿ ಎನ್. ಶ್ರೀನಿವಾಸ್, ಜಗದೀಶ್ ಇದ್ದರು.