ಪರಿಸರ ಸ್ನೇಹಿ ರಾಸಾಯನಿಕ ವಿಜ್ಞಾನವನ್ನು ಪರಿಚಯಿಸಿ: ಪ್ರೊ. ಎಂ. ವೆಂಕಟೇಶ್ವರಲು

ತುಮಕೂರು: ಯುವ ಪೀಳಿಗೆ ರಾಸಾಯನಿಕ ವಿಜ್ಞಾನದಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡುವುದರ ಮೂಲಕ ಮಾನವ ಜನಾಂಗಕ್ಕೆ ಉತ್ತಮ ಪರಿಸರ ಸ್ನೇಹಿ ರಾಸಾಯನಿಕ ವಿಜ್ಞಾನವನ್ನು ಪರಿಚಯಿಸಿ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ ವೆಂಕಟೇಶ್ವರಲು ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ರಸಾಯನಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಬುಧವಾರ ಆಯೋಜಿಸಿದ್ದ ‘ರಾಸಾಯನಿಕ ವಿಜ್ಞಾನ ಸಂಶೋಧನೆಯಲ್ಲಿ ಹೊಸ ಪ್ರವೃತ್ತಿಗಳು (ಎನ್‍ಸಿಇಟಿಸಿಎಸ್‍ಆರ್-2023)’ ಕುರಿತು ಒಂದು ದಿನದ ರಾಷ್ಟ್ರೀಯ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರಸಾಯನಶಾಸ್ತ್ರವೂ ವಿಜ್ಞಾನದ ಕೇಂದ್ರ ವಿಷಯವಾಗಿ ಪರಿಸರ ಮತ್ತು ಮಾನವನ ಪ್ರತಿಯೊಂದು ಕ್ಷೇತ್ರದಲ್ಲಿ ತನ್ನ ಆಸ್ತಿತ್ವವನ್ನು ಹೊಂದಿದೆ. ಪ್ರಸ್ತುತ ದಿನಗಳಲ್ಲಿ ರಾಸಾಯನಿಕ ವಿಜ್ಞಾನದಲ್ಲಿ ಆವಿಷ್ಕಾರಗಳು ತುಂಬಾ ಗಣನೀಯವಾಗಿ ಬೆಳೆಯುತ್ತಿದೆ. ರಾಸಾಯನಿಕ ವಸ್ತುಗಳ ಪರಿಣಾಮದ ಅರಿವಿರಬೇಕು. ರಾಸಾಯನಿಕ ವಿಜ್ಞಾನ ಆರೋಗ್ಯ ಕ್ಷೇತ್ರದಲ್ಲಿ ಅಗ್ರಗಣ್ಯ ಸ್ಥಾನದಲ್ಲಿದೆ ಎಂದರು.

ಬೆಳಗಾವಿ ರಾಣಿಚೆನ್ನಮ್ಮ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ರಸಾಯನಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಜೆ. ಮಂಜಣ್ಣ ಮಾತನಾಡಿ, ರಸಾಯನಶಾಸ್ತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳು ವಿದ್ಯಾರ್ಥಿಗಳಿಗೆ ಹೆಚ್ಚು ಜ್ಞಾನವನ್ನು ಸೃಷ್ಟಿಸುತ್ತದ್ದೆ. ರಾಸಾಯನಿಕ ವಿಜ್ಞಾನದಲ್ಲಿ ಹೊಸ ಪ್ರವೃತ್ತಿಗಳು ಜಾಗತಿಕ ಸವಾಲುಗಳನ್ನು ಎದುರಿಸುತ್ತದೆ. ಆದ್ದರಿಂದ ಪರಿಸರಕ್ಕೆ ಮತ್ತು ಮಾನವನಿಗೆ ಅನುಕೂಲಕರ ವಿಜ್ಞಾನವನ್ನು ಪರಿಚಯಿಸಬೇಕು ಮತ್ತು ಆವಿಷ್ಕರಿಸಬೇಕು ಎಂದು ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಕಾಶ್ ಎಂ. ಶೇಟ್ ಮಾತನಾಡಿ, ರಾಸಾಯನಿಕ ವಿಜ್ಞಾನದಲ್ಲಿ ಉತ್ತಮ ಅವಕಾಶಗಳಿವೆ. ಹೊಸ ಆವಿಷ್ಕಾರಗಳಿಂದ ಸಂಶೋಧನೆ ಮಾಡಿ, ಉತ್ತಮ ಜ್ಞಾನವನ್ನು ಪಡೆಯಬಹುದು ಎಂದರು.

ಕಾರ್ಯಕ್ರಮದಲ್ಲಿ ಗುಲ್ಬರ್ಗ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಕೊಂಕಲ್ಲು ಹನುಮೇಗೌಡ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಅನ್ವಯಿಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ದಿನೇಶ್ ರಂಗಪ್ಪ, ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ರಸಾಯನಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ರಮೇಶ್ ಟಿ. ಎನ್., ಡಾ. ವಿಜಯ್‍ಕುಮಾರ್ ಜಿ. ಆರ್. ಭಾಗವಹಿಸಿದ್ದರು.

Leave a Reply

Your email address will not be published. Required fields are marked *