ಜಲ್ ಜೀವನ್ ಮಿಷನ್ ಕಾಮಗಾರಿಗೆ-ತನಿಖಾ ತಂಡ ರಚನೆ-ಕೇಂದ್ರ ಸಚಿವ ವಿ.ಸೋಮಣ್ಣ

ತುಮಕೂರು : ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಜಲ್‍ಜೀವನ್ ಮಿಷನ್ ಕಾಮಗಾರಿಗಳ ಮೌಲ್ಯ ಪರಿವೀಕ್ಷಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸ್ಥಳೀಯ ಶಾಸಕರು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳನ್ನೊಳಗೊಂಡ ತನಿಖಾ ತಂಡ ರಚಿಸುವಂತೆ ರೈಲ್ವೇ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

 ಜಿಲ್ಲಾ  ಪಂಚಾಯತ್  ಕಚೇರಿ ಸಭಾಂಗಣದಲ್ಲಿಂದು  ನಡೆದ ದಿಶಾ  ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ  ಅವರು, ಪ್ರಧಾನ ಮಂತ್ರಿಯವರ ಕನಸಿನ ಯೋಜನೆಯಾದ ಜಲ್ ಜೀವನ್ ಮಿಷನ್ ಯೋಜನೆ ಅನುಷ್ಠಾನಕ್ಕಾಗಿ ರಾಜ್ಯಕ್ಕೆ 7 ಸಾವಿರ ಕೋಟಿ ರೂ. ಹಣ ವಿನಿಯೋಗ ಮಾಡಲಾಗಿದ್ದು, ಜಿಲ್ಲೆಗೆ 2229 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಜಲ್ ಜೀವನ್ ಮಿಷನ್ ಯೋಜನೆಯಲ್ಲಿ ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ಸೂಚನೆ ನೀಡಿದರು.

 ಜಿಲ್ಲೆಯಲ್ಲಿ 2019ರಿಂದ ಈವರೆಗೆ 3699 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದ್ದು, 3000 ಕಾಮಗಾರಿಗಳಿಗೆ ಕಾರ್ಯಾದೇಶ ನೀಡುವ ಮೂಲಕ 884 ಕಾಮಗಾರಿಗಳು ಪೂರ್ಣಗೊಂಡಿದ್ದು, 15 ಕಾಮಗಾರಿಗಳು ಪ್ರಗತಿಯಲ್ಲಿವೆ. ಶೀಘ್ರದಲ್ಲೇ 600 ಕಾಮಗಾರಿಗಳನ್ನು  ಪ್ರಾರಂಭಿಸಲಾಗುತ್ತದೆ ಎಂದು ತಿಳಿಸಿದರು.

 ಜಲ ಜೀವನ್ ಮಿಷನ್ ಯೋಜನೆಯಡಿ ಬಿಡುಗಡೆಯಾಗಿರುವ ಅನುದಾನದಲ್ಲಿ ಶೇ.20ರಷ್ಟು ಮಾತ್ರ ಹಣ ಬಳಕೆಯಾಗಿದ್ದು, ಕಾಮಗಾರಿ ವಿಳಂಬಗೊಳ್ಳುತ್ತಿರುವ ಬಗ್ಗೆ ಸೂಕ್ತ ತನಿಖೆ  ನಡೆಸಿ, ಕಾಮಗಾರಿಗಳು ತೀವ್ರಗತಿಯಲ್ಲಿ ಪೂರ್ಣಗೊಳ್ಳುವಂತೆ  ಕ್ರಮ ಕೈಗೊಂಡು 11 ವಿಧಾನ ಸಭಾ ಕ್ಷೇತ್ರಗಳಲ್ಲಿ ಬಾಕಿ ಇರುವ ಬಿಲ್‍ಗಳನ್ನು  ಪಾವತಿ ಮಾಡುವಂತೆ ಸೂಚನೆ ನೀಡಿದರು.

 ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ  ಸಣ್ಣ ನೀರಾವರಿ ಇಲಾಖೆಯಿಂದ  ಚಿಕ್ಕನಾಯಕನಹಳ್ಳಿ, ಹುಳಿಯಾರು, ಬುಕ್ಕಾಪಟ್ಟಣ, ತುರುವೇಕೆರೆ  ಸೇರಿದಂತೆ ಅಗತ್ಯಾನುಸಾರ  ಜಿಲ್ಲೆಯ ವಿವಿಧ ಭಾಗಗಳಲ್ಲಿ ಚೆಕ್ ಡ್ಯಾಂ  ನಿರ್ಮಾಣಕ್ಕೆ ಸಂಬಂಧಿಸಿದಂತೆ ಶಾಸಕರನ್ನೊಳಗೊಂಡಂತೆ ಕ್ರಿಯಾ ಯೋಜನೆ ತಯಾರಿಸಿ ಪ್ರಸ್ತಾವನೆ ಸಲ್ಲಿಸುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತೋಟಗಾರಿಕೆ ಇಲಾಖೆಯ  ಪ್ರಗತಿ ಪರಿಶೀಲಿಸಿದ ಅವರು, ಹಿರಿಯ ಅಧಿಕಾರಿಗಳಿಂದ ಅಧೀನ ಅಧಿಕಾರಿಗಳ ನಿಯಂತ್ರಣ  ಅವಶ್ಯಕವಾಗಿದ್ದು, ರೈತರ ಯೋಜನೆಗಳ ಅನುಷ್ಠಾನದಲ್ಲಿ ಪಾರದರ್ಶಕತೆ ಇರುವಂತೆ  ನೋಡಿಕೊಳ್ಳಬೇಕು ಮತ್ತು  ಅಧಿಕಾರಿಗಳು ಕಡ್ಡಾಯವಾಗಿ ರೈತರ  ತೋಟಗಳಿಗೆ  ಕ್ಷೇತ್ರ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಬೇಕು ಎಂದು ತಿಳಿಸಿದರು.

 ಮೀನುಗಾರಿಕೆ  ಸಹಕಾರಿ ಸಂಘಗಳಲ್ಲಿ  ವಂಚನೆ ನಡೆಯುತ್ತಿರುವ ಬಗ್ಗೆ ಸಭೆಯಲ್ಲಿ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ  ಮೀನುಗಾರಿಕೆ ಇಲಾಖೆ  ವತಿಯಿಂದ ಹರಾಜು ಮಾಡಿರುವ ಕೆರೆಗಳ ಹರಾಜನ್ನು ರದ್ದುಪಡಿಸಿ ಕೆರೆಗಳನ್ನು ಆಯಾ  ಗ್ರಾಮ ಪಂಚಾಯಿತಿಗಳಿಗೆ  ಹಸ್ತಾಂತರಿಸಿ ಗ್ರಾಮ ಪಂಚಾಯಿತಿಗಳ ಬಲವರ್ಧನೆ ಮಾಡಬೇಕು ಎಂದು ತಿಳಿಸಿದರು.

 ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಿರುವ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಮಂಜುನಾಥ್ ಅವರಿಂದ ಮಾಹಿತಿ ಪಡೆದ ಸಚಿವರು, ನಕಲಿ ವೈದ್ಯರನ್ನು ಪತ್ತೆ ಹಚ್ಚಿ ದೂರು ದಾಖಲಿಸುವಂತೆ ಸೂಚಿಸಿದರಲ್ಲದೆ, ರೋಗಿಗಳನ್ನು ಆಸ್ಪತ್ರೆಗಳಿಗೆ ಸಾಗಿಸುವಾಗ ಯಾವುದೇ ಕಾರಣಕ್ಕೂ  ಒಂದು ಅಂಬುಲೆನ್ಸ್‍ನಿಂದ ಮತ್ತೊಂದು  ಅಂಬುಲೆನ್ಸ್‍ಗೆ ವರ್ಗಾಯಿಸದೆ ನೇರವಾಗಿ ಆಸ್ಪತ್ರೆಗೆ ದಾಖಲಿಸಬೇಕು. ಗ್ರಾಮೀಣ ಭಾಗದಲ್ಲಿ  ಆರೋಗ್ಯ  ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ  ಸರಿಯಾದ ವೇತನ ನೀಡುವಂತೆ  ಸೂಚನೆ ನೀಡಿದರು.

 ಕೃಷಿ ಇಲಾಖೆ ವತಿಯಿಂದ ರೈತರಿಗೆ  ನೀಡುವ ಯಂತ್ರೋಪಕರಣಗಳ ಬದಲಿಗೆ ರೈತರೇ  ಕೃಷಿ ಉಪಕರಣ ಖರೀದಿ ಮಾಡಲು ಅವರ ಖಾತೆಗೆ  ನೇರವಾಗಿ  ಡಿಬಿಟಿ ಮೂಲಕ ಹಣ ಜಮೆ ಮಾಡುವಂತೆ ತಿಳಿಸಿದರು.
 ಜಿಲ್ಲೆಯಲ್ಲಿರುವ   ಸರ್ಕಾರಿ ಶಾಲೆಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಿ, ಶಾಲೆಗಳ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಹೆಚ್ಚುವಂತೆ  ಮಾಡಬೇಕು ಎಂದು ತಿಳಿಸಿದರು.

ರೈಲ್ವೇ ಕಾಮಗಾರಿ ಅನುಷ್ಠಾನಕ್ಕೆ ಶೀಘ್ರ ಭೂಮಿ ಹಸ್ತಾಂತರ ಮಾಡಲು ಸೂಚನೆ : 

     ಇದಕ್ಕೂ ಮುನ್ನ ರೈಲ್ವೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಶೇ.90ಕ್ಕಿಂತ ಕಡಿಮೆ ಭೂಸ್ವಾಧೀನ ಪಡಿಸಿಕೊಂಡಿರುವ ಪ್ರದೇಶಗಳಲ್ಲಿ ರೈಲ್ವೆ ಕಾಮಗಾರಿಗಳು ವಿಳಂಬಗೊಳ್ಳುತ್ತಿದ್ದು, ಶೀಘ್ರವಾಗಿ ಭೂ-ಸ್ವಾಧೀನ ಪಡಿಸಿಕೊಂಡು ರೈಲ್ವೆ ಇಲಾಖೆಗೆ ಹಸ್ತಾಂತರಿಸುವಂತೆ ವಿಶೇಷ ಭೂ  ಸ್ವಾಧೀನ ಅಧಿಕಾರಿಗೆ ಸೂಚನೆ ನೀಡಿದರು.

     ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಾರ್ಚ್-2027ಕ್ಕೆ ಲೋಕಾರ್ಪಣೆ ಮಾಡಲು ಉದ್ದೇಶಿಸಿರುವ ರಾಜ್ಯದ ಮಹತ್ವ ಯೋಜನೆಗಳಾದ ತುಮಕೂರು-ದಾವಣಗೆರೆ, ಮತ್ತು ತುಮಕೂರು- ರಾಯದುರ್ಗ ರೈಲ್ವೇ ಮಾರ್ಗಗಳ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ತಿಳಿಸಿದರು.

     ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿರುವುದರಿಂದ ಅಗತ್ಯ ಸೂಚನಾ ಫಲಕಗಳನ್ನು ಅಳವಡಿಸಬೇಕು. ಅಪಘಾತ ವಲಯಗಳನ್ನು ಗುರುತಿಸಿ ಅಪಘಾತಗಳು ಸಂಭವಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಸಭೆಯಲ್ಲಿ  ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಾ|| ಸಿ. ಎನ್. ಮಂಜುನಾಥ್, ನವಹದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ, ಶಾಸಕರಾದ ಜಿ. ಬಿ. ಜ್ಯೋತಿಗಣೇಶ್, ಬಿ. ಸುರೇಶ್ ಗೌಡ, ಕೃಷ್ಣಪ್ಪ, ವಿಧಾನ ಪರಿಷತ್ ಶಾಸಕ ಚಿದಾನಂದ ಎಂ. ಗೌಡ,  ಸರ್ಕಾರದ ಕಾರ್ಯದರ್ಶಿ ಮಂಜುಳ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ  ಶಿವಶಂಕರ್, ಚಿತ್ರದುರ್ಗ ಜಿಲ್ಲಾಧಿಕಾರಿ ವೆಂಕಟೇಶ್, ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಪೆÇಲೀಸ್ ವರಿμÁ್ಟಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಜಿಲ್ಲಾ ಮಟ್ಟದ ಪದಾಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 

Leave a Reply

Your email address will not be published. Required fields are marked *