ಹದಿನೇಳನೇ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಿಗೆ ಆಮಂತ್ರಣ

ತುಮಕೂರು :  ಜಿಲ್ಲಾ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ತುಮಕೂರು ನಗರದ ಗಾಜಿನ ಮನೆಯಲ್ಲಿ ಡಿಸೆಂಬರ್ 29 ಮತ್ತು 30ರಂದು ಏರ್ಪಾಟಾಗಿದ್ದು, ನಮ್ಮ ನಾಡಿನ ಹಿರಿಯ ಸಾಹಿತಿ, ಕುಣಿಗಲ್ ತಾಲ್ಲೂಕಿನ ಬೀಚನಹಳ್ಳಿಯ ಕರೀಗೌಡ ಬೀಚನಹಳ್ಳಿ ಆಯ್ಕೆಯಾಗಿದ್ದಾರೆ. ಅವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪನವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿರುವ ಅವರ ಮನೆಗೆ ಭೇಟಿಕೊಟ್ಟು ಸಮ್ಮೇಳನಕ್ಕೆ ಅಧಿಕೃತ ಆಹ್ವಾನವನ್ನು ನೀಡಿತು.

ಈ ಸಂದರ್ಭದಲ್ಲಿ ಮಾತನಾಡಿದ ಕರೀಗೌಡ ಬೀಚನಹಳ್ಳಿ ಅವರು ಸಾಹಿತ್ಯವು ತನ್ನೊಳಗಿನ ಅಭಿವ್ಯಕ್ತಿ ಸ್ವಾತಂತ್ರ್ಯ, ಲೋಕಜ್ಞಾನ, ಆತ್ಮಗೌರವದಿಂದಾಗಿಯೇ ಇಂದಿಗೂ ಜಗತ್ತಿನೊಳಗಡೆ ಮತ್ತೆ ಮತ್ತೆ ಚರ್ಚೆಗೀಡಾಗುತ್ತಿದೆ ಎಂದ ಅವರು ತುಮಕೂರು ಜಿಲ್ಲೆ ಕನ್ನಡ ಸಾಹಿತ್ಯದ ತವರೂರು. ಹನ್ನೆರಡನೇ ಶತಮಾನದಿಂದಲೂ ಇಲ್ಲಿ ಸಾಹಿತ್ಯ ಪರಂಪರೆಯನ್ನು ಕಾಣಬಹುದು. ಮಹಾನ್ ಧಾರ್ಮಿಕ ಪುರುಷ ಎಡಯೂರು ಸಿದ್ಧಲಿಂಗೇಶ್ವರರು ವಚನಗಳನ್ನು ರಚಿಸಿರುವುದು ವಿಶೇಷ ಸಂಗತಿಯಾಗಿದೆ. ಕನ್ನಡ ಸಾಹಿತ್ಯಕ್ಕೆ ಅಪೂರ್ವ ಕೊಡುಗೆಗಳನ್ನು ನೀಡಿರುವ ಈ ಜಿಲ್ಲೆ, ದಲಿತ-ಬಂಡಾಯದ ಸಾಹಿತ್ಯ ರಚನೆಗೆ ಪ್ರೇರಣೆ ನೀಡಿದೆ. ಇಂತಹ ಭಿನ್ನ ಭಿನ್ನವಾದ ಸಾಹಿತ್ಯ ಪ್ರಕಾರಗಳು ಹುಟ್ಟಿದ ಈ ಜಿಲ್ಲೆಯಲ್ಲಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವುದು ನನ್ನ ಪುಣ್ಯ ಎಂದು ಭಾವುಕರಾಗಿ ನುಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಕಾರ್ಯದರ್ಶಿಗಳಾದ ಡಾ. ಡಿ.ಎನ್.ಯೋಗೀಶ್ವರಪ್ಪ, ಡಾ. ಸಣ್ಣಹೊನ್ನಯ್ಯ ಕಂಟಲಗೆರೆ, ಕೋಶಾಧ್ಯಕ್ಷ ಎಂ.ಹೆಚ್.ನಾಗರಾಜ್, ಸಂಘಟನಾ ಕಾರ್ಯದರ್ಶಿ ಎಸ್.ಯೋಗಾನಂದ, ಸಂಚಾಲಕರಾದ ಕೆ.ಎಸ್.ಉಮಾಮಹೇಶ್, ತಾಲ್ಲೂಕು ಕಸಾಪ ಅಧ್ಯಕ್ಷರಾದ ಚಿಕ್ಕಬೆಳ್ಳಾವಿ ಶಿವಕುಮಾರ್, ಎಂ.ಬಿ.ರಾಜಶೇಖರಯ್ಯ, ತುಂಬಾಡಿ ರಾಮಯ್ಯ ಮೊದಲಾದವರಿದ್ದರು.

ಕರಿಗೌಡ ಬೀಚನಹಳ್ಳಿ ಪರಿಚಯ

ನಾಡಿನ ಹಿರಿಯ ಸಾಹಿತಿ, ನಿವೃತ್ತ ಪ್ರಾಧ್ಯಾಪಕ, ಪ್ರಸ್ತುತ ಕರ್ನಾಟಕ ರಾಜ್ಯ ಗ್ರಂಥಾಲಯದ ಪುಸ್ತಕ ಆಯ್ಕೆ ಸಮಿತಿ ಅಧ್ಯಕ್ಷರಾದ ಕರಿಗೌಡ ಬೀಚನಹಳ್ಳಿ ಅವರು ಕುಣಿಗಲ್ ತಾಲ್ಲೂಕು, ಬೀಚನಹಳ್ಳಿಯಲ್ಲಿ ಜನಿಸಿ, ಬೆಂಗಳೂರು ವಿ.ವಿ.ಯಿಂದ ಪಿ.ಹೆಚ್.ಡಿ. ಪದವಿ ಪಡೆದು, ಹಂಪಿ ವಿ.ವಿ.ಯಲ್ಲಿ ಪ್ರಾಧ್ಯಾಪಕರಾಗಿ ಮತ್ತು ಕುಲಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ವಿ.ವಿ.ಯ ಪ್ರಸಾರಾಂಗ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.


ಕಾಲೇಜು ದಿನಗಳಿಂದಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡ ಇವರ ಕಥೆಗಳು ತುಮಕೂರು ವಿ.ವಿ. ಪದವಿ ತರಗತಿಗಳಿಗೆ ಪಠ್ಯವಾಗಿದ್ದವು. ಇವರ ಕಥೆಗಳು ಇಂಗ್ಲಿಷ್, ಮಲೆಯಾಳಂ, ತಮಿಳು, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. ಇವರ ಮುಖ್ಯ ಕೃತಿಗಳೆಂದರೆ ಕರಿಮಣ್ಣಿನ ಗೊಂಬೆಗಳು, ಸಂಧಾನ, ಸಂಜೀವಿನಿ ಮರ, ಜಾತ್ರೆಗಳು, ತೇಜಸ್ವಿ ಕಥೆಗಳು, ಅಧ್ಯಯನ ಸಂಕಥನ, ಮಳೆ, ಕೋಗಿಲೆ, ಕಥನ ಕಲೆಯ ನೆಲೆಗಳು, ಚೆಲುವ ಕನ್ನಡ, ಸಿದ್ದರಾಮ ಅನುರೂಪ ಕಥೆ ಮತ್ತು ಹಾಡು ಇನ್ನು ಮುಂತಾದ 50ಕ್ಕೂ ಹೆಚ್ಚು ಕೃತಿ ರಚನೆ ಮಾಡಿದ್ದಾರೆ.


ಇವರಿಗೆ ಎರಡು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಶ್ರೀಕೃಷ್ಣ ಆಲನಹಳ್ಳಿ ಪ್ರಶಸ್ತಿ ಲಭಿಸಿವೆ.

Leave a Reply

Your email address will not be published. Required fields are marked *