ದುಡಿಮೆಗೆ ದೂಡಿ ಮಕ್ಕಳ ಬಾಲ್ಯವನ್ನು ಕಸಿಯುವುದು ಅಪರಾಧ – ನ್ಯಾಯಾಧೀಶ ಬಿ. ಜಯಂತ್ ಕುಮಾರ್

ತುಮಕೂರು : ಸ್ವಚ್ಛಂದವಾಗಿ ಆಟ-ಪಾಠ ಕಲಿಯಬೇಕಾದ ವಯಸ್ಸಿನಲ್ಲಿ ಮಕ್ಕಳನ್ನು ದುಡಿಮೆಗೆ ದೂಡಿ ಅವರ ಬಾಲ್ಯವನ್ನು ಕಸಿಯುವುದು ಕಾನೂನು ಅಪರಾಧವೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ. ಜಯಂತ್ ಕುಮಾರ್ ತಿಳಿಸಿದರು.

 ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಸಂಯುಕ್ತಾಶ್ರಯದಲ್ಲಿ ಗುರುವಾರ ನಗರದ ಕೇಂದ್ರ ಗ್ರಂಥಾಲಯ  ಸಭಾಂಗಣದಲ್ಲಿ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಬಾಲ ಕಾರ್ಮಿಕ ಪದ್ಧತಿಯು ಮಕ್ಕಳ ನಲಿವು, ಶಿಕ್ಷಣ, ವಿಶ್ರಾಂತಿ, ನೆಮ್ಮದಿಯನ್ನು ಕಸಿದುಕೊಳ್ಳುವ ಅನಿಷ್ಠ ಪದ್ಧತಿಯಾಗಿದೆ. ಅಂಕಿ-ಅಂಶದ ಪ್ರಕಾರ ವಿಶ್ವದಲ್ಲಿ 160 ಮಿಲಿಯನ್ ಮಕ್ಕಳು ಬಾಲ ಕಾರ್ಮಿಕ ಪದ್ಧತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಬಾಲ ಕಾರ್ಮಿಕ ಪದ್ಧತಿ ಕಾಯ್ದೆಯನ್ವಯ 14 ವರ್ಷದೊಳಗಿನ ಬಾಲ ಮಕ್ಕಳು ಹಾಗೂ 18 ವರ್ಷದೊಳಗಿನ ಕಿಶೋರ ಮಕ್ಕಳನ್ನು ದುಡಿಮೆಗೆ ಕಳುಹಿಸುವುದು ಕಾನೂನು ಅಪರಾಧ. ಮಕ್ಕಳು ಅವರ ಬಾಲ್ಯವನ್ನು ಸ್ವಚ್ಛಂದವಾಗಿ ಕಳೆಯಲು ಪೋಷಕರು ಹಾಗೂ ಸಮಾಜ ಅವಕಾಶ ಮಾಡಿಕೊಡಬೇಕೆಂದು ತಿಳಿಸಿದರು.
 

 ಬಾಲ ಕಾರ್ಮಿಕ ಪದ್ಧತಿಯನ್ನು ಸಮಾಜದಿಂದ ಮುಕ್ತಗೊಳಿಸಲು ನಾವೆಲ್ಲರೂ ಒಟ್ಟಾಗಿ ಶ್ರಮಿಸಬೇಕು. ಬಾಲ ಕಾರ್ಮಿಕ ಪದ್ಧತಿಯಲ್ಲಿ ತೊಡಗಿಕೊಂಡಿರುವ ಮಕ್ಕಳು ತಮ್ಮ ಹಕ್ಕುಗಳಿಗಾಗಿ ನ್ಯಾಯಕ್ಕಾಗಿ  ಹೋರಾಟ ಮಾಡಲು ಸಾಧ್ಯವಿಲ್ಲವಾದ್ದರಿಂದ ಜೂನ್ 12ರಂದು ವಿಶ್ವದಾದ್ಯಂತ ಬಾಲ ಕಾರ್ಮಿಕ ವಿರೋಧಿ ಪದ್ಧತಿ ದಿನವನ್ನು ಸಾಂಕೇತಿಕವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು. 


 ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಅವರು ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಮಾತನಾಡುತ್ತಾ, ನಾವು ವಾಸಿಸುವ ಸುತ್ತಮುತ್ತಲಿನ ಪ್ರದೇಶ ಹಾಗೂ ಕೆಲಸ ಮಾಡುವ ಸ್ಥಳದಲ್ಲಿ ಯಾವುದೇ ಬಾಲ ಕಾರ್ಮಿಕರು ಕಂಡು ಬಂದಲ್ಲಿ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡ ಮಾಲೀಕರು ಹಾಗೂ ಅವರ ಪೋಷಕರಿಗೆ ತಿಳುವಳಿಕೆ ಹೇಳಿ ಮಗುವನ್ನು ಶಾಲೆಗೆ ಸೇರಿಸುವ ಕೆಲಸವನ್ನು ನಾವು ಮಾಡಬೇಕು ಎಂದು ತಿಳಿಸಿದರು.
 

 ಮಕ್ಕಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಪೋಷಕರ ಮಾರ್ಗದರ್ಶನದಲ್ಲಿ ನಡೆಯಬೇಕು. ಶಿಕ್ಷಣದೊಂದಿಗೆ ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು. ಸಾಮಾಜಿಕ ಮಾಧ್ಯಮಗಳನ್ನು ದುರುಪಯೋಗಪಡಿಸಿಕೊಂಡು ಪೋಷಕರು ತಲೆತಗ್ಗಿಸುವಂತಹ ಕೆಲಸ ಮಾಡಬಾರದು. ಯಾವುದೇ ವಿದ್ಯಾರ್ಥಿ ತನ್ನ ತಂದೆ-ತಾಯಿಗೆ ತಿಳಿಯದೆ ಸಾಮಾಜಿಕ ಜಾಲತಾಣದ ಖಾತೆಗಳನ್ನು ಹೊಂದಿದ್ದಲ್ಲಿ ಈ ದಿನವೇ ಖಾತೆಯಿಂದ ನಿರ್ಗಮಿಸಬೇಕು. ಫೇಸ್‍ಬುಕ್, ಇನ್ಸ್ಟಾಗ್ರಾಮ್‍ನಂತಹ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಶೇ.90ರಷ್ಟು ಪೋಕ್ಸೋ ಪ್ರಕರಣಗಳು ವರದಿಯಾಗುತ್ತಿವೆ. ಮಕ್ಕಳು ಇಂತಹ ಅಪಾಯಗಳಿಂದ ದೂರವಿರಬೇಕು ಎಂದು ಕಿವಿ ಮಾತು ಹೇಳಿದರು. 

 ಸಾಮಾಜಿಕ ಜಾಲತಾಣಗಳಿಗೆ ಮಾರು ಹೋಗುವುದರಿಂದ ಮಾನಸಿಕ ಖಿನ್ನತೆ, ಆತ್ಮಹತ್ಯೆಗೆ ಯತ್ನ, ಶಿಕ್ಷಣದಲ್ಲಿ ಮೊಟಕುಗೊಳ್ಳುವ ಹಾಗೂ ಸೈಬರ್ ಅಪರಾಧಗಳಿಂದ ಮುಗ್ಧ ಮಕ್ಕಳು ಅಪಾಯಕ್ಕೆ ಗುರಿಯಾಗುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ವಯಸ್ಕರಾಗುವವರೆಗೂ ಮೊಬೈಲ್ ಬಳಸದೆ ವಿದ್ಯಾಭ್ಯಾಸದ ಕಡೆಗೆ ಗಮನಹರಿಸಬೇಕು ಎಂದು ಮಕ್ಕಳಿಗೆ ಸಲಹೆ ನೀಡಿದರು.

 ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಮಾತನಾಡಿ,  14 ವರ್ಷದೊಳಗಿನ ಮಕ್ಕಳು ಶ್ರಮದ ಕೆಲಸ ಮಾಡಲು ಶಕ್ತರಿರುವುದಿಲ್ಲ.  ಪೋಷಕರು ತಮ್ಮ ಮಕ್ಕಳನ್ನು ದುಡಿಮೆಗೆ ದೂಡದೆ ಶಾಲೆಗೆ ಕಳುಹಿಸುವ ಮೂಲಕ ಭವಿಷ್ಯವನ್ನು ಉಜ್ವಲವಾಗಿ ರೂಪಿಸಿಕೊಳ್ಳುವ ವಾತಾವರಣವನ್ನು ನಿರ್ಮಿಸಬೇಕು.  ವಿದ್ಯಾರ್ಥಿಗಳೂ ಸಹ ಆರ್ಥಿಕವಾಗಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವವರೆಗೂ ಪ್ರೀತಿ-ಪ್ರೇಮಕ್ಕೆ ಬಲಿಯಾಗದೆ ಪೋಷಕರ ಕನಸನ್ನು ನನಸು ಮಾಡಬೇಕು. “ದುಡಿಮೆ ಬೇಡ-ಶಿಕ್ಷಣ ಬೇಕು” ಎಂಬ ಮಂತ್ರದ ಮೂಲಕ ಬಾಲ ಕಾರ್ಮಿಕ ಪದ್ಧತಿಯನ್ನು ಹೋಗಲಾಡಿಸಿ ಮಕ್ಕಳ ಹಕ್ಕಿಗಾಗಿ  ನಾವೆಲ್ಲಾ ಹೋರಾಡಬೇಕು ಎಂದು ತಿಳಿಸಿದರು. 

 ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಮಿಕಾಧಿಕಾರಿ ತೇಜಾವತಿ ಕೆ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ  ಉಪನಿರ್ದೇಶಕ ಚೇತನ್ ಕುಮಾರ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ಪವಿತ್ರ, ಮಧುಗಿರಿ ಉಪ ವಿಭಾಗದ  ಕಾರ್ಮಿಕಾಧಿಕಾರಿ ಫೈರೋಜ್ ಪಾμÁ, ಗ್ರಂಥಾಲಯ ಇಲಾಖೆಯ ಉಪನಿರ್ದೇಶಕ ದಿವಾಕರ್, ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಕ ಪರಮೇಶ್,  ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತಿತರರು ಹಾಜರಿದ್ದರು. 

 ಇದಕ್ಕೂ ಮುನ್ನ ಜಿಲ್ಲಾಧಿಕಾರಿಗಳ ಕಚೇರಿಯಿಂದ ಕೇಂದ್ರ ಗ್ರಂಥಾಲಯ ಸಭಾಂಗಣದವರೆಗೂ ಹಮ್ಮಿಕೊಂಡಿದ್ದ ಬಾಲ ಕಾರ್ಮಿಕ ವಿರೋಧಿ ದಿನ ಕುರಿತು ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಭಾಗವಹಿಸಿದ್ದರು. 

Leave a Reply

Your email address will not be published. Required fields are marked *