ತುಮಕೂರು : ಜೀತ ಪದ್ದತಿ ನಿರ್ಮೂಲನಾ ಕಾಯ್ದೆ ಜಾರಿಯಾಗಿ 46 ವರ್ಷಗಳು ಕಳೆದರೂ ಇಂದಿಗೂ ಈ ಅನಿಷ್ಟ ಪದ್ದತಿ ಜೀವಂತವಾಗಿರುವುದು ನನಗೆ ನೋವು ತರಿಸಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ತುಮಕೂರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ತುಮಕೂರು ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜೀತ ಪದ್ಧತಿ ನಿರ್ಮೂಲನ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಇವರು, ಜೀತ ಪದ್ದತಿ ನಿರ್ಮೂಲನಾ ಕಾಯ್ದೆ 1976ರಲ್ಲಿ ಜಾರಿಗೆ ಬಂದಿದೆ. ಈ ಕಾಯ್ದೆ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು ಹಾಗೂ ಯಾವುದೇ ಕಾರ್ಮಿಕರನ್ನು ಜೀತ ಕೆಲಸಕ್ಕೆ ನೇಮಿಸಿರುವುದು ನಿಮ್ಮ ಗಮನಕ್ಕೆ ಬಂದರೆ ಕೂಡಲೇ ನಮ್ಮ ಪ್ರಾಧಿಕಾರಕ್ಕೆ ಮಾಹಿತಿ ನೀಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ಜಿಲ್ಲಾ ಕಾರ್ಮಿಕ ಇಲಾಖಾ ಅಧಿಕಾರಿ ತೇಜಸ್ವಿನಿ, ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಹರ್ಷಕುಮಾರ್ ಕೆ. ಅವರುಗಳು ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಮಿಕ ಇಲಾಖಾ ಸಿಬ್ಬಂದಿಗಳು, ತಾಲ್ಲೂಕು ಪಂಚಾಯತಿ ಯೋಜನಾಧಿಕಾರಿ, ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ), ತಾಲ್ಲೂಕು ಮಟ್ಟದ ಅಧಿಕಾರಿಗಳು, ತಾಲ್ಲೂಕು ಪಂಚಾಯತಿ ಸಿಬ್ಬಂದಿ ಭಾಗಿಯಾಗಿದ್ದರು.