ತುಮಕೂರು:ಆಗಸ್ಟ್ 01ರ ಸುಪ್ರಿಂಕೋರ್ಟು ತೀರ್ಪಿನ ಅನ್ವಯ ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಸರಕಾರ ಏಕವ್ಯಕ್ತಿ ಆಯೋಗ ನೇಮಕ ಮಾಡಿ,ಮೂರು ತಿಂಗಳ ಒಳಗೆ ನಿಖರವಾದ ದಾಖಲೆ ಪಡೆಯಲು ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದ್ದು, ಒಳಮೀಸಲಾತಿ 3 ತಿಂಗಳಲ್ಲಿ ಜಾರಿಯಾಗುವ ವಿಶ್ವಾಸ ತುಮಕೂರು ಒಳಮೀಸಲಾತಿ ಹೋರಾಟ ಸಮಿತಿಗೆ ನಂಬಿಕೆ ಇದೆ ಎಂದು ಉದ್ಯಮಿ ಡಿ.ಟಿ.ವೆಂಕಟೇಶ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಕಾಲವಕಾಶ ಕೇಳಿರುವುದನ್ನು ನೆಪವಾಗಿಟ್ಟುಕೊಂಡು ಕೆಲವರು, ಸಮುದಾಯ ದ ಯುವಜನರಲ್ಲಿ ಗೊಂದಲ ಉಂಟುಮಾಡಿ,ಅವರನ್ನು ಪ್ರಚೋದನೆಗೊಳಿಸುವ ಮಾತುಗಳನ್ನು ಆಡುತ್ತಿರುವುದು ಒಳ್ಳೆಯ ಬೆಳೆವಣಿಯಲ್ಲ, ಇದು ಅತ್ಯಂತ ಸೂಕ್ಷ ವಿಚಾರವಾಗಿರುವುದರಿಂದ ಜನಾಂಗದ ಯುವಕರು ಪ್ರಚೋದನೆಗೆ ಒಳಗಾಗದೆ, ತಾಳ್ಮೆಯಿಂದ ವರ್ತಿಸುವಂತೆ ಮನವಿ ಮಾಡಿದ್ದಾರೆ.
ಒಳಮೀಸಲಾತಿಗಾಗಿ ಮೂವತ್ತು ವರ್ಷಗಳಿಂದ ಹೋರಾಟ ನಡೆಸುತ್ತಿರುವ ಸಮುದಾಯ ಒಂದು ನ್ಯಾಯಬದ್ದ ದತ್ತಾಂಶಕ್ಕಾಗಿ ಸರಕಾರ ಮೂರು ತಿಂಗಳ ಕಾಲಾವಕಾಶ ತೆಗೆದುಕೊಂಡಿದೆ.ಈಗ ತಾಳ್ಮೆಗೆಟ್ಟು ವರ್ತಿಸುವುದು ಸರಿಯಲ್ಲ. ಕೂಡಲೇ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಏಕ ಸದಸ್ಯ ಸಮಿತಿ ರಚಿಸಿ,ಕಾರ್ಯಭಾರ ವಹಿಸಿಕೊಡಂತೆ ನಾವೆಲ್ಲರೂ ಸರಕಾರದ ಮೇಲೆ ಒತ್ತಡ ಹಾಕುತಿದ್ದು,ಸರಕಾರ ಸಹ ಒಂದೆರಡು ದಿನದಲ್ಲಿ ಅಯೋಗ ನೇಮಕ ಪ್ರಕ್ರಿಯೆ ಪೂರ್ಣಗೊಳಿಸುವ ಭರವಸೆ ನೀಡಿದೆ.ಮೂರು ತಿಂಗಳ ಒಳಗೆ ಈ ಕಾರ್ಯ ಪೂರ್ಣಗೊಂಡು,ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳಿಗೆ ನ್ಯಾಯ ದೊರಕಿಸುವಂತೆ ವರದಿ ಜಾರಿ ಮಾಡಲಿದ್ದಾರೆ ಎಂಬ ಭರವಸೆ ನಮಗಿದೆ. ಒಂದು ವೇಳೆ ಸರಕಾರ ಕೊಟ್ಟ ಮಾತಿಗೆ ತಪ್ಪಿದರೆ,ಸಮುದಾಯದ ಹೋರಾಟವನ್ನು ಸರಕಾರ ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಡಿ.ಟಿ.ವೆಂಕಟೇಶ್ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆಂಚಮಾರಯ್ಯ ಮಾತನಾಡಿ,ಒಳ ಮೀಸಲಾತಿ ಜಾರಿ ಎಲ್ಲ ಶೋಷಿತ ಸಮುದಾಯಕ್ಕೆ ಅನುಕೂಲವಾಗಲಿದೆ. ಮೂರು ತಿಂಗಳಲ್ಲಿ ಒಳ ಮೀಸಲಾತಿ ಜಾರಿಗೊಳಿಸುವ ಬದ್ಧತೆಯನ್ನು ಸರಕಾರ ತೋರಿದ್ದು,ಇದರ ಭಾಗವಾಗಿಯೇ ಅಕ್ಟೋಬರ್ 28ರ ನಂತರ ಯಾವುದೇ ನೇಮಕಾತಿ ನೊಟೀಪಿಕೇಷನ್ ಇಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟ ಪಡಿಸಿದ್ದಾರೆ.ಸುಪ್ರೀಂ ಕೋರ್ಟ್ ಆದೇಶಕ್ಕೆ ಸಮುದಾಯದ ಹೋರಾಟ ಕಾರಣವೇ ಹೊರತು ಯಾವುದೇ ಪಕ್ಷದಿಂದ ಆದ ಕೆಲಸ ಅಲ್ಲ.ಹರಿಯಾಣ ಮತ್ತು ತೆಲಂಗಾಣದ ಮಾದರಿಯಲ್ಲಿ ಕಾಲಮಿತಿಗೊಳಪಟ್ಟು ರಾಜ್ಯದಲ್ಲಿ ಆಯೋಗ ರಚಿಸಲಾಗಿದ್ದುಸಿದ್ದರಾಮಯ್ಯ ಅವರಿಗೆ ಬದ್ಧತೆ ಇದದ್ದರಿಂದಲೇ ಬಡ್ತಿ ಮೀಸಲಾತಿ ಕಾನೂನು ಜಾರಿಗೆ ತಂದರು, ಇಲ್ಲದ ಗೊಂದಲವನ್ನು ಸೃಷ್ಟಿಸುವುದು ತರವಲ್ಲ ಎಂದರು.
ಕಳೆದ 30 ವರ್ಷಗಳ ಒಳ ಮೀಸಲಾತಿಗೆ ಕಾದಿದ್ದೇವೆ, ಮೂರು ತಿಂಗಳು ಕಾಯುವದರಲ್ಲಿ ತಪ್ಪಿಲ್ಲ, ಸಿದ್ದರಾಮಯ್ಯ ಅವರ ಮೇಲೆ ನಂಬಿಕೆ ಇಡೋಣ,ಉದ್ವೇಗಕ್ಕೆ ಒಳಗಾಗದೇ ಯಾರನ್ನು ದೂಷಿಸುವುದು ಬೇಡ,ದತ್ತಾಂಶ ಸಂಗ್ರಹಣೆಗೆ ಅಗತ್ಯ ಇರುವ ಮಾಹಿತಿಯನ್ನು ಕೊಡಲು ಸಾರ್ವಜನಿಕರಿಗೂ ಅವಕಾಶವಿದ್ದು,ಯಾರನ್ನು ನಿಂದಿಸುವ ಅವಶ್ಯಕತೆ ಇಲ್ಲ.ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಸಮುದಾಯದ ಸಚಿವರನ್ನು ಟೀಕಿಸುವ,ಅವಾಚ್ಯವಾಗಿ ನಿಂದಿಸುವುದರಿಂದ ಯಾವುದೇ ಪ್ರಯೋಜನವಿಲ್ಲ,ನಿಂದಿಸುವುದರಿಂದ ಸಮಾಜಕ್ಕೆ ಅನ್ಯಾಯ ಮಾಡಿದಂತೆ ಆಗುತ್ತದೆ ಎಂದು ಕೆಂಚಮಾರಯ್ಯ ನುಡಿದರು.
ಡಾ.ಬಸವರಾಜು ಮಾತನಾಡಿ,ಒಳ ಮೀಸಲಾತಿಗೆ ಸಿಕ್ಕಿರುವ ಸಣ್ಣ ಜಯವನ್ನು ನಿಂದಿಸುವುದರಿಂದ ಅವಮಾನಿಸಿದಂತೆ ಆಗುತ್ತದೆ,ಮೂರು ತಿಂಗಳ ನಂತರ ಸರಕಾರ ಒಳ ಮೀಸಲಾತಿ ಜಾರಿಗೆ ತರದೇ ಹೋದರೆ ಸಮುದಾಯದ ಹೋರಾಟದ ಕಿಚ್ಚನ್ನು ಎದುರಿಸಲಿದೆ.ನಮ್ಮ ಮುಂದೆ 2011ರ ಜನಗಣತಿ, ನ್ಯಾ.ಎ.ಜೆ.ಸದಾಶಿವ ಆಯೋಗದವರದಿ, ನ್ಯಾ.ನಾಗಮೋಹನ್ ದಾಸ್ ವರದಿ,ನ್ಯಾಯವಾದಿ ಕಾಂತರಾಜು ವರದಿ ಹಾಗೂ ಜೆ.ಸಿ.ಮಾಧುಸ್ವಾಮಿ ನೇತೃತ್ವದ ಸಚಿವ ಸಂಪುಟ ಉಪಸಮಿತಿ ವರದಿ ಇದೆ.ಈ ಎಲ್ಲಾ ವರದಿಗಳಲ್ಲಿ ಗೊಂದಲಗಳಿದ್ದು,ಇದನ್ನು ಬಗೆಹರಿಸಿ,ಎಲ್ಲಾ ಜಾತಿಗಳಿಗೂ ಪ್ರಾತಿನಿಧ್ಯ ದೊರೆಯುವಂತೆ ಸರಕಾರ ಮಾಡಬೇಕಿದೆ.ಆಗ ಮಾತ್ರ ಯಾರೇ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರೆ, ಎದುರಿಸಲು ಸಾಧ್ಯ. ಹಾಗಾಗಿ ಯುವಜನರು ತಾಳ್ಮೆ ವಹಿಸಬೇಕೆಂದರು.
ಎ.ನರಸಿಂಹಮೂರ್ತಿ ಮಾತನಾಡಿ,ಸುಪ್ರೀಂಕೋರ್ಟ್ ಆದೇಶದಲ್ಲಿ ನಿಖರವಾದ ದತ್ತಾಂಶದ ಆಧಾರದ ಮೇಲೆ ಒಳ ಮೀಸಲಾತಿ ಜಾರಿಗೊಳಿಸಬೇಕಾಗಿದೆ. ನಿಖರವಾದ ಮಾಹಿತಿ ಇಲ್ಲದೇ ಒಳ ಮೀಸಲಾತಿ ಜಾರಿಗೊಳಿಸಿದರೆ, ನ್ಯಾಯಾಲಯ ವಿಮರ್ಶೆಗೊಳಪಡುವುದರಿಂದ ನಿಖರವಾದ ದತ್ತಾಂಶ ಇಲ್ಲದೇ ಹೋದರೆ ರಾಜ್ಯ ಸರಕಾರ ನೀಡಿದ ಒಳ ಮೀಸಲಾತಿ ಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಲಿದೆ.ಒಂದು ವೇಳೆ ಈಗಾದರೆ 30 ವರ್ಷಗಳ ಸುಧೀಘ್ರ ಹೋರಾಟ ವ್ಯರ್ಥ ವಾಗಲಿದೆ.ಹಾಗಾಗಲು ಬಿಡದಂತೆ ಎಚ್ಚರಿಕೆ ಹೆಜ್ಜೆಗಳನ್ನು ಇಡಬೇಕಿದೆ ಎಂದರು.
ದಲಿತ ಮುಖಂಡರಾದ ನರಸಿಂಹಯ್ಯ,ನರಸೀಯಪ್ಪ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಹೆತ್ತೇನಹಳ್ಳಿ ಮಂಜುನಾಥ್, ನಟರಾಜಪ್ಪ, ಕೋಡಿಯಾಲ ಮಹದೇವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.