ಕೊರಟಗೆರೆ : ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರನ್ನು ಸೋಲಿಸಿದ್ದು ನಾನು, ಗೆಲ್ಲಿಸಲು ಹೋರಾಡಿದವರು ಡಾ.ಜಿ.ಪರಮೇಶ್ವರ್ ಅವರು, ನನ್ನ ವಿರುದ್ಧ ಮಧುಗಿರಿಯಲ್ಲಿ ಹೇಳಿಕೆ ಕೊಡಲಿ ಅದನ್ನು ಬಿಟ್ಟು ಹಗಲು ರಾತ್ರಿ ದೇವೇಗೌಡರನ್ನು ಗೆಲ್ಲಿಸಲು ಹೋರಾಡಿದ ಪರಮೇಶ್ವರ್ ಅವರನ್ನು ಸೋಲಿಸಿ ಎಂದು ಕಣ್ಣೀರು ಹಾಕುತ್ತಾರೆ ಎಂದರೆ ಎಂತಹ ಡ್ರಾಮಾ ಎನ್ನುವುದನ್ನು ಜನರು ಅರಿಯಬೇಕು ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿದರು.
ಅವರು ಕೊರಟಗೆರೆಯಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ,ಜೆಡಿಎಸ್ ಜಾತಿಗೆ ಸೀಮಿತವಾಗಿದ್ದು, ಬಿಜೆಪಿ ಭ್ರಷ್ಟರ ಪಕ್ಷ ಎನ್ನುವುದರಲ್ಲಿ ಅನುಮಾನವಿಲ್ಲ, ಜನಪರವಾಗಿ ಕೆಲಸ ಮಾಡದ ಭ್ರಷ್ಟರನ್ನು ಪಕ್ಷಕ್ಕೆ ಸೇರಿಸಿಕೊಂಡು ಭ್ರಷ್ಟಾಚಾರಕ್ಕೆ ಇಂಬು ನೀಡುತ್ತಿದೆ ಎಂದ ಅವರು, ನಾಟಕದ ಕಂಪನಿ ಹುಟ್ಟು ಹಾಕಿರುವುದೇ ಜೆಡಿಎಸ್, ಕುಟುಂಬದವರನ್ನೇ ಸೇರಿಸಿಕೊಂಡು ಕಣ್ಣೀರು ಹಾಕುತ್ತಾರೆ ಎಂದು ವ್ಯಂಗ್ಯವಾಡಿದರು.
ಬಡವರ ಯೋಜನೆಗಳನ್ನು ಯಾವುದೇ ಮುಲಾಜಿಗೆ ಒಳಗಾಗದೇ ಜಾರಿ ಮಾಡುವುದರಲ್ಲಿ ಸಿದ್ದರಾಮಯ್ಯ ಮೊದಲಿಗರು, ಎಲ್ಲ ಸಮುದಾಯಗಳ ಬಡವರ ಪರವಾದ ಯೋಜನೆಗಳನ್ನು ಜಾರಿಗೆ ತರುವುದು ಕಾಂಗ್ರೆಸ್ ಪಕ್ಷ ಮಾತ್ರ ಎಂದರು.