ತುಮಕೂರು:ಜಲಜೀವನ್ ಮೀಷನ್ ಯೋಜನೆ ಮೂಲಕ ಇಡೀ ರಾಷ್ಟ್ರದಾದ್ಯಂತ ಜನರಿಗೆ ಶುದ್ದ ಕುಡಿಯುವ ನೀರು ಸರಬರಾಜು ಮಾಡಲು ಲಕ್ಷಾಂತರ ಕೋಟಿ ರೂಗಳನ್ನು ವೆಚ್ಚ ಮಾಡಲಾಗುತ್ತಿದ್ದು,ತುಮಕೂರು ಜಿಲ್ಲೆಯ 12 ಲಕ್ಷ ಮನೆಗಳಿಗೆ ಕುಡಿಯುವ ನೀರು ಒದಗಿಸುವ ಕೆಲಸ ನಡೆದಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಚಿಕ್ಕನಾಯಕನಹಳ್ಳಿಯ ಕನ್ನಡ ಸಂಘದ ವೇದಿಕೆಯ ಸಭಾಂಗಣದಲ್ಲಿ ಚಿಕ್ಕನಾಯಕನಹಳ್ಳಿ ನಾಗರಿಕ ಸಮಾಜದವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು,ಜೀವನೋಪಾಯ ಅಭಿಯಾನದ ಅಡಿಯಲ್ಲಿ ಶೌಚಾಲಯ ನಿರ್ಮಾಣದಂತಹ ಜನೋಪಯೋಗಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಒಂದಾಗಿ ಹೊಸ ರಾಜಕೀಯ ಶಕೆ ಆರಂಭ ಮಾಡಿದೆ.ಮುಂದಿನ ದಿನಗಳಲ್ಲಿ ಮತ್ತಷ್ಟು ಒಟ್ಟಾಗಿ ದೇಶದ ಅಭಿವೃದ್ದಿಗೆ ದುಡಿಯಲಿದ್ದೇವೆ.ಈಗಾಗಲೇ ರಾಜ್ಯದ ಅಭಿವೃದ್ದಿಗೆ ಅಗತ್ಯವಿರುವ ರೂಪುರೇಷೆಗಳನ್ನು ಎರಡು ಪಕ್ಷದವರು ಸೇರಿ ಮಾಡುತ್ತಿದ್ದು,ಇನ್ನು ಮುಂದೆ ರಾಜ್ಯದಲ್ಲಿ ಹೊಸ ಅಭಿವೃದ್ದಿ ಪರ್ವ ಆರಂಭವಾಗಲಿದೆ. ಹೊರಗಿನವರು ಗೆದ್ದ ಇತಿಹಾಸವಿಲ್ಲ ಎಂದು ಕಾಲೆಳೆಯುತಿದ್ದವರ ನಡುವೆಯೇ ಜಿಲ್ಲೆಯ ಜನತೆಗೆ ನನಗೆ 1.79 ಲಕ್ಷ ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ನನಗೆ ಪುರ್ನಜನ್ಮ ನೀಡಿದ್ದೀರಿ,ನಿಮ್ಮ ವಿಶ್ವಾಸಕ್ಕೆ ನಾನು ಚಿರಋಣಿ.ನನ್ನ ಕಾಲೆಳೆದವರಿಗೆ ಅಭಿವೃದ್ದಿ ಕೆಲಸಗಳ ಮೂಲಕವೇ ಉತ್ತರ ನೀಡಲಿದ್ದೇನೆ ಎಂದು ವಿ.ಸೋಮಣ್ಣ ತಿಳಿಸಿದರು.
ರಾಯದುರ್ಗ-ತುಮಕೂರು, ತುಮಕೂರು-ದಾವಣಗೆರೆ ರೈಲ್ವೆ ಯೋಜನೆ ಪೂರ್ಣಗೊಳಿಸುವುದು ನನ್ನ ಗುರಿಯಾಗಿದೆ.ಶಕ್ತಿ ಮೀರಿ ಕೆಲಸ ಮಾಡುತ್ತೇನೆ ಎಂದರು ಚಿಕ್ಕನಾಯಕನಹಳ್ಳಿಯ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗೆ ಅನುಮೋಧನೆ ದೊರಕಿಸುವ ಕೆಲಸ ಮಾಡಲಾಗುವುದು.ಈ ಸಂಬಂಧ ಸಾರಿಗೆ ಮಂತ್ರಿಗಳಾದ ನಿತಿನ್ ಗಡ್ಕರಿ ಅವರೊಂದಿಗೆ ಮಾತುಕತೆ ನಡೆಸುತ್ತೇನೆ ಎಂದರು
ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ಕೊಬ್ಬರಿಗೆ ಕನಿಷ್ಠ 15 ಸಾವಿರ ರೂಗಳ ಬೆಂಬಲ ಬೆಲೆ ಘೋಷಿಸುವಂತೆ ಸರಕಾರದೊಂದಿಗೆ ಮಾತುಕತೆ ನಡೆಸಬೇಕು.ಅಗತ್ಯಬಿದ್ದರೆ ಪ್ರಧಾನಿಯವರ ಬಳಿ ನಿಯೋಗ ಕರೆದುಕೊಂಡು ಹೋಗಿ ಮನವರಿಕೆ ಮಾಡಿಕೊಡಬೇಕು ಎಂದು ಸಿ.ಬಿ.ಸುರೇಶಬಾಬು ನುಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಂಸದ ಜಿ.ಎಸ್.ಬಸವರಾಜು,ಜಿಲ್ಲಾ ಜೆಡಿಎಸ್ ಅಧ್ಯಕ್ಷ ಅಂಜನಪ್ಪ,ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ,ಕಾಡುಗೊಲ್ಲ ಸಮುದಾಯದ ರಾಜ್ಯಾಧ್ಯಕ್ಷ ರಾಜಣ್ಣ,ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಂಗರಾಜು,ಡಿಸಿಸಿ ನಿರ್ದೇಶಕ ಸಿಂಗದಹಳ್ಳಿ ರಾಜಕುಮಾರ್,ರಾಮಚಂದ್ರ,ಯುವ ಮುಖಂಡರಾದ ಕೀರ್ತಿ, ಹರ್ಷ,ಮಾಜಿ ಜಿ.ಪಂ., ತಾ.ಪಂ. ಸದಸ್ಯರುಗಳು ಉಪಸ್ಥಿತರಿದ್ದರು.