ಜ.14,15ರಂದು ತಿಪಟೂರಿನಲ್ಲಿ ಶ್ರೀ ಸಿದ್ದರಾಮೇಶ್ವರ ಜಯಂತಿ ಸುವರ್ಣ ಮಹೋತ್ಸವ

ತುಮಕೂರು:ಹನ್ನೇರಡನೇ ಶತಮಾನದ ನಿಜ ಶರಣ,ಸಾರ್ವಜನಿಕರಿಗಾಗಿ ಕೆರೆ, ಕಟ್ಟೆಗಳನ್ನು ಕಟ್ಟಿದ ತಪೋಯೋಗಿ ಶ್ರೀಸಿದ್ದರಾಮೇಶ್ವರರ 850ನೇ ಜನ್ಮಜಯಂತಿಯ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಜನವರಿ 14 ಮತ್ತು 15 ರಂದು ತಿಪಟೂರು ತಾಲೂಕಿನ ಹಾಸನ ರಸ್ತೆಯಲ್ಲಿರುವ ಶ್ರೀಗುರು ಸಿದ್ದರಾಮೇಶ್ವರ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಮಧುಸೂಧನ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಕಳೆದ 50 ವರ್ಷಗಳ ಹಿಂದೆ ತಿಪಟೂರು ನಗರದಿಂದಲೇ ಆರಂಭವಾದ ಶ್ರೀಸಿದ್ದರಾಮೇಶ್ವರರ ಜಯಂತಿ ಆಚರಣೆ,ಇಂದಿಗೆ 50 ವರ್ಷ ಪೂರೈಸಿದೆ.ಕೆರೆಗೋಡಿ ರಂಗಾಪುರ ಸುಕ್ಷೇತ್ರದ ಶ್ರೀಗುರುಪರದೇಶಿಕೇಂದ್ರ ಮಹಾಸ್ವಾಮೀಜಿಗಳ ಮಾರ್ಗದರ್ಶನದಲ್ಲಿ,ನೂರಾರು ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಕಾರ್ಯಕ್ರಮ ಜರುಗಲಿದೆ ಎಂದರು.

ಜನವರಿ 14ರ ಶನಿವಾರ ಬೆಳಗ್ಗೆ 11 ಗಂಟೆಗೆ ಶ್ರೀತರಲಬಾಳು ಜಗದ್ಗುರುಗಳಾದ ಡಾ.ಶ್ರೀಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಶ್ರೀಸಿದ್ದರಾಮೇಶ್ವರರ 850ನೇ ಜನ್ಮ ಜಯಂತಿ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸುವರು.ಅಧ್ಯಕ್ಷತೆಯನ್ನು ಸಂಸದ ಜಿ.ಎಸ್.ಬಸವರಾಜು ವಹಿಸುವರು.ಗೃಹ ಸಚಿವ ಅರಗ ಜ್ಞಾನೇಂದ್ರ, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ,ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಉಪಸ್ಥಿತರಿರುವರು. ಸಮಾರಂಭದ ಅಂಗವಾಗಿ ಹಮ್ಮಿಕೊಂಡಿರುವ ಕೃಷಿ ಮೇಳವನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್ ಉದ್ಘಾಟಿಸುವರು.

ಮದ್ಯಾಹ್ನ 2:30ಕ್ಕೆ ಜರುಗುವ ಸಿದ್ದರಾಮ ಸಾಹಿತ್ಯ ಗೋಷ್ಠಿಯನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಉದ್ಘಾಟಿಸುವರು. ಬೇಲೂರು ಶಾಸಕ ಕೆ.ಎಸ್.ಲಿಂಗದೇವರು ಅಧ್ಯಕ್ಷತೆ ವಹಿಸಲಿದ್ದು, ಸಾಹಿತಿಗಳಾದ ಚಟ್ನಳ್ಳಿ ಮಹೇಶ್ ವಿಶೇಷ ಉಪನ್ಯಾಸ ನೀಡುವರು.ಸಂಜೆ 6:30ಕ್ಕೆ ನಡೆಯುವ ಅಭಿನಂದನಾ ಸಮಾರಂಭ ಮತ್ತು ಜಾನಪದ ಉತ್ಸವ ನಡೆಯಲಿದೆ.

ಜನವರಿ 15ರ ಭಾನುವಾರ ಬೆಳಗ್ಗೆ 11 ಗಂಟೆಗೆ ಜರುಗುವ ನೊಳಂಬಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸುವರು.ಅಧ್ಯಕ್ಷತೆಯನ್ನು ಎಂ.ಬಿ.ಪಾಟೀಲ್ ವಹಿಸಲಿದ್ದು,ಡಿ.ಕೆ.ಶಿವ ಕುಮಾರ್,ಈಶ್ವರಖಂಡ್ರೆ,ಸೇರಿದಂತೆ ಹಲವರು ಭಾಗವಹಿಸುವರು.ಮಧ್ಯಾಹ್ನ 1:30ಕ್ಕೆ ನಡೆಯುವ ಮಹಿಳಾಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ವಹಿಸಲಿದ್ದಾರೆ. ಉದ್ಘಾಟನೆಯನ್ನು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶ್ರೀಮತಿ ರಾಜೀವ್‍ಸುಲೋಚನ ನೆರವೇರಿಸುವರು.ಮದ್ಯಾಹ್ನ 2:30ಕ್ಕೆ ನಡೆಯುವ ಶ್ರೀಸಿದ್ದರಾಮೇಶ್ವರರ 850ನೇ ಜಯಂತೋತ್ಸವದ ಸಮಾರೋಪ ಸಮಾರಂಭವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಬಿ.ಸಿ.ನಾಗೇಶ್ ವಹಿಸುವರು.ಸಚಿವ ಜೆ.ಸಿ.ಮಾಧುಸ್ವಾಮಿ, ನಾಡೋಜ ಡಾ.ಗೊ.ರು.ಚನ್ನಬಸಪ್ಪ ಸೇರಿದಂತೆ ಸಚಿವರು, ಶಾಸಕರು ಭಾಗವಹಿಸಲಿದ್ದಾರೆ.

ತುಮಕೂರು ಜಿಲ್ಲೆಯಲ್ಲಿಯೇ ಆರಂಭವಾದ ಶ್ರೀಗುರು ಸಿದ್ದರಾಮೇಶ್ವರರ ಜಯಂತಿ ಕಾರ್ಯಕ್ರಮದ 50ನೆ ಕಾರ್ಯಕ್ರಮ ಈ ಜಿಲ್ಲೆಯಲ್ಲಿಯೇ ನಡೆಯುತ್ತಿರುವುದು ಸಂತೋಷದ ವಿಚಾರವಾಗಿದೆ.ಸುಮಾರು 3-4 ಲಕ್ಷ ಜನಸಂಖ್ಯೆ ರಾಜ್ಯಾಧ್ಯಂತ ಬರುವ ಸಾಧ್ಯತೆ ಇದೆ.ಎರಡು ದಿನಗಳ ಕಾಲ ಬರುವ ಭಕ್ತರಿಗೆ ಊಟ, ತಿಂಡಿಯ ಜೊತೆಗೆ, ವಸತಿ ಹಾಗೂ ಉಚಿತ ವಾಹನ ಸೌಲಭ್ಯ ಸಹ ಕಲ್ಪಿಸಲಾಗಿದೆ. ಶ್ರೀಸಿದ್ದರಾಮೇಶ್ವರರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಮಧುಸೂಧನ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್,ಸಂಸದ ಜಿ.ಎಸ್.ಬಸವರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *